ಚಂದ್ರು ಕೊಂಚಿಗೇರಿ
ಗಂಗಿಮಾಳಮ್ಮ ದೇವಸ್ಥಾನ ಆವರಣದಲ್ಲಿ ದೇವಸ್ಥಾನದ ಕಂಚಿವೀರರು ಹಾಗೂ ಗೊರವರ ಸರಪಳಿ ಪವಾಡಗಳನ್ನು ನೆರವೇರಿಸಿದರು. ಡೆಂಕಣಮರಡಿಯಲ್ಲಿ ರಾಕ್ಷಸರನ್ನು ಸಂಹರಿಸಿ ವಿಜಯ ಸಾಧಿಸಿದ ಸವಿನೆನಪಿಗಾಗಿ ಕಾರ್ಣಿಕ ಶುಭ ನುಡಿದ ಬಳಿಕ ಸರಪಳಿ ಮತ್ತು ಭಗಣಿಗೂಟ ಪವಾಡಗಳು ಜರುಗುವುದು ಸಂಪ್ರದಾಯ.
ದೇವಸ್ಥಾನದ ಬಾಬುದಾರರಾದ ಕಂಚಿವೀರರು (ಪಂಚವೀರರು) ನಡೆಸಿದ ಭಗಣಿಗೂಟ, ಸರಪಳಿ ಪವಾಡಗಳು ನೆರೆದಿದ್ದ ಭಕ್ತರನ್ನು ರೋಮಾಂಚನಗೊಳಿಸಿದವು. ಆದಿಕರ್ನಾಟಕ ಜನಾಂಗದ ಕಂಚಿವೀರರೆಂದು ಕರೆಯುವ ಇವರು ಭಗಣಿಗೂಟ ಪವಾಡಗಳನ್ನು ನೆರವೇರಿಸಿದರು. ಅದೇ ರೀತಿ ಗೊರವರು ಸರಪಳಿ ಪವಾಡ ಮಾಡುವುದು ಸಂಪ್ರದಾಯವಾಗಿದೆ ಎನ್ನುತ್ತಾರೆ ದೇವಸ್ಥಾನ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್.ಪವಾಡ ಮಾಡುವ ಕಂಚಿವೀರರು ನಾನಾ ರೀತಿಯ ಐದು ವೇಷ ಧರಿಸಿದ್ದರು. ವೀರಭದ್ರನ ಅವತಾರದಲ್ಲಿ ಕಾಲಿಗೆ ಭಗಣಿಗೂಟ ಬಡಿದುಕೊಳ್ಳುವುದು, ಕಾಲಿಗೆ ರಂಧ್ರ ಕೊರೆದು ಮುಳ್ಳು ದಾಟಿಸುವುದು, ಮುಂಗೈಗೆ ಕಬ್ಬಿಣ ಆರತಿ ಚುಚ್ಚಿ ದೀಪ ಬೆಳಗಿಸುವುದು, ಗೊರವರು ಕಬ್ಬಿಣದ ಸರಪಳಿ ಹರಿಯುವುದು ಹೀಗೆ ಹತ್ತಾರು ಪವಾಡಗಳು ನೆರೆದಿದ್ದ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದವು.
ಭಗಣಿ ಗೂಟಗಳು, ಚರ್ಮದ ಮಿಣಿಗಳು, ಮುಳ್ಳುಗಳು, ಖಡ್ಗಗಳು, ಸರಪಳಿಗಳು ಸೇರಿ ಎಲ್ಲ ಆಯುಧಗಳಿಗೆ ಪೂಜೆ ಸಲ್ಲಿಸಿ, ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ಭಂಡಾರ ಆಶೀರ್ವಾದವನ್ನು ಪಡೆದು ಕಂಚಿವೀರರು ಪವಾಡಗಳನ್ನು ಪ್ರದರ್ಶಿಸಿದರು.
ಕಂಚಿವೀರರು ಮತ್ತು ಗೊರವರು ಕಬ್ಬಿಣದ ಸರಪಳಿಯನ್ನು ದೇವರ ನಾಮ ಸ್ಮರಿಸುತ್ತಾ ಸರಪಳಿ ಹರಿದರು. ಕಂಚಿವೀರರು ಮತ್ತು ಗೊರವರು ಸರಪಳಿಗಳನ್ನು ಕಿತ್ತು ಹಾಕುವಾಗ, ನೆರೆದಿದ್ದ ಭಕ್ತರು ಮತ್ತು ಗೊರವರ ಢಮರುಗಗಳ ಶಬ್ದ ಪವಾಡ ಮಾಡುವವರಿಗೆ ಹುಮ್ಮಸ್ಸು ನೀಡಿದವು.
ಈ ಪವಾಡಗಳನ್ನು ಮಾಡಿದಾಗ ಮಾತ್ರ ಮದುವೆ ಮಾಡಿಕೊಳ್ಳಲು ಅವಕಾಶವಿದೆ. ಆದ್ದರಿಂದ ಯುವಕರು ಪವಾಡ ಮಾಡಬೇಕು ಎನ್ನುತ್ತಾರೆ ವೆಂಕಪ್ಪಯ್ಯ ಒಡೆಯರ್.