ತಿಪ್ಪನಾಳಕ್ಕೆ ಬಾರದ ಬಸ್-ವಿದ್ಯಾರ್ಥಿಗಳ ಪ್ರತಿಭಟನೆ

KannadaprabhaNewsNetwork | Published : Jun 23, 2025 11:47 PM

ವಾರದ ಹಿಂದಷ್ಟೇ ಬಸ್ ಕೆಟ್ಟು ನಿಂತ ಪರಿಣಾಮ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಇದೀಗ ಮತ್ತದೇ ಸಮಸ್ಯೆ ಮುಂದುವರಿದಿದೆ. ಇತ್ತ ವಿದ್ಯಾರ್ಥಿಗಳು ಗ್ರಾಮದಿಂದ ೨ ಕಿಮೀ ಅಂತರದಲ್ಲಿರುವ ಕಲಿಕೇರಿ ಕ್ರಾಸ್‌ವರೆಗೆ ನಡೆದುಕೊಂಡು ಹೋಗಿ ಖಾಸಗಿ ವಾಹನಗಳಲ್ಲಿ ಶಾಲೆ ತಲುಪುತ್ತಿದ್ದಾರೆ.

ಕನಕಗಿರಿ:

ಬಸ್ ಬಾರದ ಕಾರಣ ವಿದ್ಯಾರ್ಥಿಗಳು ಪ್ರತಿಭಟಿಸಿದ ಘಟನೆ ತಾಲೂಕಿನ ತಿಪ್ಪನಾಳ ಗ್ರಾಮದಲ್ಲಿ ಸೋಮವಾರ ನಡೆದಿದೆ.

ತಾಲೂಕಿನ ಕಲಿಕೇರಿ ಸರ್ಕಾರಿ ಪ್ರೌಢಶಾಲೆಗೆ ತಿಪ್ಪನಾಳ ಗ್ರಾಮದ ೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯವೂ ಬಸ್ಸಿನಲ್ಲಿ ತೆರಳುತ್ತಿದ್ದರು. ಆದರೆ, ಸೋಮವಾರ ಬಸ್ ಕೆಟ್ಟು ನಿಂತಿದ್ದರಿಂದ ವಿದ್ಯಾರ್ಥಿಗಳು ಗ್ರಾಮದಲ್ಲೆ ಉಳಿದುಕೊಂಡರು. ಅಲ್ಲಿಯೇ ಪ್ರತಿಭಟನೆ ನಡೆಸಿ, ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಾರದ ಹಿಂದಷ್ಟೇ ಬಸ್ ಕೆಟ್ಟು ನಿಂತ ಪರಿಣಾಮ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಇದೀಗ ಮತ್ತದೇ ಸಮಸ್ಯೆ ಮುಂದುವರಿದಿದೆ. ಇತ್ತ ವಿದ್ಯಾರ್ಥಿಗಳು ಗ್ರಾಮದಿಂದ ೨ ಕಿಮೀ ಅಂತರದಲ್ಲಿರುವ ಕಲಿಕೇರಿ ಕ್ರಾಸ್‌ವರೆಗೆ ನಡೆದುಕೊಂಡು ಹೋಗಿ ಖಾಸಗಿ ವಾಹನಗಳಲ್ಲಿ ಶಾಲೆ ತಲುಪುತ್ತಿದ್ದಾರೆ. ದಿನನಿತ್ಯವೂ ಶಾಲೆಗೆ ವಿದ್ಯಾರ್ಥಿಗಳು ತಡವಾಗಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಶಿಕ್ಷಕ ಬಸಪ್ಪ ಅವರು ಬಸ್ ಡಿಪೋ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದು, ಸಮಯಕ್ಕೆ ಸರಿಯಾಗಿ ಬಸ್‌ ಓಡಿಸಲು ಮನವಿ ಮಾಡಿದ್ದಾರೆ. ಆದರೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಪಾಲಕರು ಆರೋಪಿಸಿದರು.

ತೀರಾ ಹಳೆಯ ಬಸ್ ಬಿಟ್ಟಿದ್ದರಿಂದ ಬಸ್ ಕೆಟ್ಟು ನಿಲ್ಲುತ್ತಿದೆ. ಶಾಲೆ ವಿದ್ಯಾರ್ಥಿಗಳು, ಗ್ರಾಮಸ್ಥರಿಗೆ ತೀವ್ರ ಸಮಸ್ಯೆಯಾಗಿದೆ. ಈ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ ಎಂದು ಹೇಳಿದರು.

ಪದೇ ಪದೇ ಸಮಸ್ಯೆಯಾಗಿದ್ದರಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗದೆ ಪ್ರತಿಭಟನೆ ನಡೆಸಿ, ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿಯರಿಗೆ ಕಿರುಕುಳ: ಆರೋಪ

ತಿಪ್ಪನಾಳ ಗ್ರಾಮದಿಂದ ಕಲಿಕೇರಿ ಹೈಸ್ಕೂಲಿಗೆ ಹೋಗುವ ವಿದ್ಯಾರ್ಥಿನಿಯರನ್ನು ಕಲಿಕೇರಿಯ ಕೆಲವು ಕಿಡಗೇಡಿಗಳು ಚುಡಾಯಿಸುತ್ತಿದ್ದಾರೆ. ನಿತ್ಯ ಶಾಲೆಯ ಬಳಿಯ ಸೇತುವೆ ಬಳಿ ಕುಳಿತುಕೊಳ್ಳುವ ಪಡ್ಡೆಗಳು ವಿದ್ಯಾರ್ಥಿನಿಯರನ್ನು ಕೈ ಮಾಡಿ ಕರೆಯುತ್ತಾರೆ ಎನ್ನುವ ಆರೋಪ ಪಾಲಕರಿಂದ ಕೇಳಿ ಬಂದಿದೆ.

ತಿಪ್ಪನಾಳ ಗ್ರಾಮಕ್ಕೆ ಹೋಗುವ ಬಸ್ ಕೆಟ್ಟು ನಿಂತಿದೆ. ನಾಳೆಯಿಂದ ಬೇರೆ ಬಸ್ ಬಿಡಲು ಮೇಲಧಿಕಾರಿಗಳ ಜತೆ ಚರ್ಚಿಸಿರುವೆ. ಸಮಸ್ಯೆ ಸರಿಪಡಿಸಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು.

ಶ್ರೀರಾಮ, ಸಂಚಾರಿ ನಿಯಂತ್ರಕ