ಬಸ್ ಪಲ್ಟಿ: ಓರ್ವ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

KannadaprabhaNewsNetwork | Published : Mar 11, 2025 12:45 AM

ಸಾರಾಂಶ

ಖಾಸಗಿ ಬಸ್‌ ಪಲ್ಟಿಯಾಗಿ ಗಾಯಾಳುಗಳು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಮಾಜಿ ಶಾಸಕ ಆರ್.ನರೇಂದ್ರ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಹನಿಯೂರಿನಲ್ಲಿ ನಿಶ್ಚಿತಾರ್ಥಕ್ಕೆ ತೆರಳಿ ಮರಳಿ ಶಾಗ್ಯ ಗ್ರಾಮಕ್ಕೆ ವಾಪಸ್ ಬರುತ್ತಿದ್ದಾಗ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಒಬ್ಬ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹನೂರು ತಾಲೂಕಿನ ಶಾಗ್ಯ ಗ್ರಾಮದ ಯುವಕನಿಗೆ ಕನಕಪುರ ತಾಲೂಕಿನ ಹನಿಯೂರು ಗ್ರಾಮದ ಯುವತಿಯ ಜೊತೆ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ನಿಶ್ಚಿತಾರ್ಥ ಮುಗಿದ ನಂತರ ವಾಪಸ್ ಶಾಗ್ಯ ಗ್ರಾಮಕ್ಕೆ ತೆರಳುತ್ತಿದ್ದಾಗ ಭಾನುವಾರ ತೆಳ್ಳನೂರು ಬಂಡಳ್ಳಿ ಮಾರ್ಗ ಮಧ್ಯದ ಅರಣ್ಯದ ತೀವ್ರ ತಿರುವಿನಲ್ಲಿ ಖಾಸಗಿ ಬಸ್ ಪಲ್ಟಿಯಾಗಿ ಓರ್ವ ಸ್ಥಳದಲ್ಲಿ ಮೃತಪಟ್ಟು 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಬಂಡಳ್ಳಿ ಗ್ರಾಮದ ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಬಂಡಳ್ಳಿ ಗ್ರಾಮದ ಖಾಸಗಿ ಕ್ಲಿನಿಕ್‌ನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಕಾಮಗೆರೆಯ ಹೋಲಿ ಕ್ರಾಸ್, ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಿಚಾರ ತಿಳಿಯುತ್ತಿದ್ದಂತೆ ಮಾಜಿ ಶಾಸಕ ಆರ್.ನರೇಂದ್ರ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ತಿಳಿಸಿ ಧೈರ್ಯ ತುಂಬಿದರು.

ಇದೇ ವೇಳೆ ವೈದ್ಯಾಧಿಕಾರಿಗಳಿಗೆ ಗಾಯಗೊಂಡವರಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಚಾಮರಾಜನಗರ ಅಥವಾ ಮೈಸೂರು ಆಸ್ಪತ್ರೆಗೆ ಕಳುಹಿಸಿಕೊಡಬೇಕು ಎಂದು ಸೂಚನೆ ನೀಡಿದರು.

ಶವಾಗಾರಕ್ಕೆ ಭೇಟಿ:

ಖಾಸಗಿ ಬಸ್ ಪಲ್ಟಿಯಾಗಿ ಸ್ಥಳದಲ್ಲಿಯೇ ದೊಡ್ಡಿಂದುವಾಡಿ ಗ್ರಾಮದ ನವೀನ್ ಮೃತಪಟ್ಟಿದ್ದರಿಂದ ಹನೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಸಮೀಪದ ಶವಾಗಾರದಲ್ಲಿ ಇಡಲಾಗಿತ್ತು. ಭಾನುವಾರ ರಾತ್ರಿ ಮಾಜಿ ಶಾಸಕ ನರೇಂದ್ರ ಶವಾಗಾರಕ್ಕೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು, ತಾಲೂಕು ವೈದ್ಯಾಧಿಕಾರಿ ಡಾ. ಪ್ರಕಾಶ್ ಅವರಿಗೆ ದೂರವಾಣಿ ಕರೆ ಮಾಡಿ ಆದಷ್ಟು ಬೇಗ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸುವಂತೆ ತಿಳಿಸಿದರು.

ಈ ವೇಳೆ ಪಪಂ ಸದಸ್ಯರಾದ ಗಿರೀಶ್, ಹರೀಶ್, ಸುದೇಶ್, ಸಂಪತ್ ಕುಮಾರ್, ಕಾಂಗ್ರೆಸ್ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಕೌದಳ್ಳಿ ನಾಗರಾಜು, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಅರುಣ್ ಕುಮಾರ್, ಹನೂರು ಯುವ ಕಾಂಗ್ರೆಸ್ ಅಧ್ಯಕ್ಷ ಮಾದೇಶ್, ಕಾಂಗ್ರೆಸ್ ಮುಖಂಡರಾದ ನಾಗೇಂದ್ರ, ಪಾಳ್ಯ ಕೃಷ್ಣ, ನಟರಾಜು, ಕುಮಾರ್, ರಾಜು, ಪ್ರಸನ್ನ ಕುಮಾರ್, ಚೇತನ್ ದೊರೆರಾಜ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Share this article