ಹೊಸ ನಿಲ್ದಾಣದಿಂದ ಬಸ್ ಸಂಚಾರ ಆರಂಭ

KannadaprabhaNewsNetwork | Published : Jul 28, 2024 2:04 AM

ಸಾರಾಂಶ

ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಂದಾಜು ₹82.89 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಡಿ.ದೇವರಾಜ ಅರಸು ಬಸ್ ನಿಲ್ದಾಣದಿಂದ ಸಾರಿಗೆ ವಾಹನಗಳ ಕಾರ್ಯಾಚರಣೆಗೆ ಗೃಹ ಸಚಿವ ಡಾ: ಜಿ. ಪರಮೇಶ್ವರ್‌ ಶನಿವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಂದಾಜು ₹82.89 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಡಿ.ದೇವರಾಜ ಅರಸು ಬಸ್ ನಿಲ್ದಾಣದಿಂದ ಸಾರಿಗೆ ವಾಹನಗಳ ಕಾರ್ಯಾಚರಣೆಗೆ ಗೃಹ ಸಚಿವ ಡಾ: ಜಿ. ಪರಮೇಶ್ವರ್‌ ಶನಿವಾರ ಚಾಲನೆ ನೀಡಿದರು.

ತಡೆರಹಿತ ತುಮಕೂರು-ಬೆಂಗಳೂರು ಮಾರ್ಗದ 6 ಅಶ್ವಮೇಧ ಬಸ್‌ಗಳಿಗೆ ಚಾಲನೆ ನೀಡಿ ಮಾತನಾಡಿದರು. ಮಾರ್ಚ್ 29ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಈಗಾಗಲೇ ಬಸ್ ನಿಲ್ದಾಣವನ್ನು ಉದ್ಘಾಟಿಸಿದ್ದು, ಬಾಕಿಯಿದ್ದ ಸಣ್ಣ-ಪುಟ್ಟ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ಗಳ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದರು.

ನೂತನ ಬಸ್ ನಿಲ್ದಾಣದ ಕಾಮಗಾರಿಯನ್ನು 2020ರ ಜನವರಿಯಲ್ಲಿ ಪ್ರಾರಂಭಿಸಿದ್ದು, ಕಾಮಗಾರಿ ಗುತ್ತಿಗೆಯನ್ನು ಬೆಂಗಳೂರಿನ ಕೆ.ಗೌಡ ಮತ್ತು ಕಂಪನಿಗೆವಹಿಸಲಾಗಿತ್ತು. ಬಸ್ ನಿಲ್ದಾಣದ ನಿವೇಶನವು 4.17 ಎಕರೆ ಪ್ರದೇಶವನ್ನು ಹೊಂದಿದ್ದು, 39817ಚ.ಮೀ. ವಿಸ್ತೀರ್ಣದ ಬಸ್ ನಿಲ್ದಾಣ ಕಟ್ಟಡವು 5 ಅಂತಸ್ತುಗಳನ್ನೊಳಗೊಂಡಿದೆ ಎಂದರು.

ಕೆಳಹಂತದ ನೆಲಮಹಡಿಯಲ್ಲಿ ಒಟ್ಟು 12 ಅಂಕಣಗಳಿದ್ದು, ಬೆಂಗಳೂರು ತಡೆರಹಿತ, ವೇಗಧೂತ ಹಾಗು ನಗರ ಸಾರಿಗೆ ಮತ್ತು ಗ್ರಾಮಾಂತರ ಸಾರಿಗೆಗಳು ಕಾರ್ಯಾಚರಣೆಯಾಗುತ್ತವೆ. ಮೊದಲನೆಯ ನೆಲಮಹಡಿಯಲ್ಲಿ ಒಟ್ಟು 13 ಅಂಕಣಗಳಿದ್ದು, ಶಿರಾ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಬೆಳಗಾಂ, ವಿಜಯಪುರ, ಸೊಲ್ಲಾಪುರ, ಹೊಸಪೇಟೆ, ಕೊಪ್ಪಳ, ಬಳ್ಳಾರಿ, ಕಲ್ಬುರ್ಗಿ, ಬೀದರ್, ತಿಪಟೂರು, ತುರುವೇಕರೆ, ಹಾಸನ, ಚಿಕ್ಕಮಂಗಳೂರು, ಹೊಸದುರ್ಗ, ಶಿವಮೊಗ್ಗ, ಶಿರಸಿ, ಸಾಗರ, ನಾಗಮಂಗಲ, ಮೈಸೂರು, ನಂಜನಗೂಡು, ಮಲೈಮಹದೇಶ್ವರ, ಕುಣಿಗಲ್ ಇನ್ನಿತರ ಅಂತರ್ ಜಿಲ್ಲೆಗಳಿಗೆ ವಾಹನಗಳ ಕಾರ್ಯಾಚರಣೆ ನಡೆಸುತ್ತವೆ ಎಂದರು.

ಬಸ್ ನಿಲ್ದಾಣದ ಮೂಲಕ 667 ನಗರ, 451 ಸಾಮಾನ್ಯ, 1253 ವೇಗಧೂತ, 129 ಕಲ್ಯಾಣ ಕರ್ನಾಟಕ, 64, ವಾಯುವ್ಯ ಕರ್ನಾಟಕ, 193 ರಾತ್ರಿ ಸಾರಿಗೆ ಸೇರಿದಂತೆ 2757 ಸಾರಿಗೆ ಬಸ್‌ಗಳು ನಿರ್ಗಮನವಾಗುತ್ತವೆ. ಎರಡೂ ಹಂತದ ಬಸ್ ನಿಲುಗಡೆ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಎರಡು ಉಪಹಾರ ಗೃಹ ಮತ್ತು ಮೂರು ಅಂತಸ್ತಿನಲ್ಲಿ ವಾಣಿಜ್ಯ ಮಳಿಗೆಗಳು, ಸಿಸಿ ಟಿವಿ ಕಣ್ಣಾವಲು ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ನಾಲ್ಕು ಲಿಫ್ಟ್ & ನಾಲ್ಕು ಎಸ್ಕಲೇಟರ್‌ ಅಳವಡಿಸಲಾಗಿದ್ದು, 1500 ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.ಸಹಕಾರ ಸಚಿವ ಕೆ.ಎನ್.ರಾಜಣ್ಣ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಜಿ.ಪ್ರಭು, ಎಸ್ಪಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಎಡಿಸಿ ಶಿವಾನಂದ ಬಿ. ಕರಾಳೆ, ಎಸ್.ಚಂದ್ರಶೇಖರ್ ಉಪಸ್ಥಿತರಿದ್ದರು.

Share this article