ಕನಕಪುರದ ಬಾಚಳ್ಳಿದೊಡ್ಡಿ ಸುತ್ತಮುತ್ತಲ ಹಳ್ಳಿಗಳಿಗೆ ಬಸ್‌ ಸಂಚಾರ ವ್ಯವಸ್ಥೆ

KannadaprabhaNewsNetwork | Published : Aug 13, 2024 12:48 AM

ಸಾರಾಂಶ

ಕನಕಪುರದ ಬಾಚಳ್ಳಿದೊಡ್ಡಿ ಹಾಗೂ ಸುತ್ತಮುತ್ತಲ ಮೇದರ ದೊಡ್ಡಿ, ವಾಡೇದೊಡ್ಡಿ, ಕೆಬ್ಬೆದೊಡ್ಡಿ, ಸಂಕ್ರಾತಿ ತಾಂಡ್ಯ ಸೇರಿದಂತೆ ವಿವಿಧ ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬಸ್ಸಿಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು.

-ಪೂಜೆ ಸಲ್ಲಿಸಿದ ಗ್ರಾಮಸ್ಥರು -ಬಾಚಳ್ಳಿದೊಡ್ಡಿ ಹಾಗೂ ಸುತ್ತಮುತ್ತಲ ಮೇದರ ದೊಡ್ಡಿ, ವಾಡೇದೊಡ್ಡಿ, ಕೆಬ್ಬೆದೊಡ್ಡಿ, ಸಂಕ್ರಾತಿ ತಾಂಡ್ಯಗಳಿಗೆ ಬಸ್‌ ಸಂಚಾರ

ಕನ್ನಡಪ್ರಭ ವಾರ್ತೆ ಕನಕಪುರ

ದೇಶಕ್ಕೆ ಸ್ವಾತಂತ್ರ್ಯ ಬಂದ ಏಳು ದಶಕಗಳ ಬಳಿಕ ಸೋಮವಾರ ತಾಲೂಕಿನ ಬಾಚಳ್ಳಿದೊಡ್ಡಿ ಹಾಗೂ ಸುತ್ತಮುತ್ತಲ ಮೇದರ ದೊಡ್ಡಿ, ವಾಡೇದೊಡ್ಡಿ, ಕೆಬ್ಬೆದೊಡ್ಡಿ, ಸಂಕ್ರಾತಿ ತಾಂಡ್ಯ ಸೇರಿದಂತೆ ವಿವಿಧ ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬಸ್ಸಿಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಶನಿವಾರ ಕನಕಪುರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಬಾಚಳ್ಳಿದೊಡ್ಡಿ ಸೇರಿದಂತೆ ಐದಾರು ಗ್ರಾಮಸ್ಥರು ತಮ್ಮ ಹಳ್ಳಿಗಳಿಗೆ ಸಾರಿಗೆ ಸಂಪರ್ಕಕ್ಕೆ ಬೇಡಿಕೆ ಇಟ್ಟಿದ್ದರು. ಕೂಡಲೇ ಸ್ಪಂದಿಸಿದ ಉಪಮುಖ್ಯಮಂತ್ರಿಗಳು ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೋಮವಾರದಿಂದಲೇ ಆ ಭಾಗದ ಗ್ರಾಮಗಳಿಗೆ ರಾಜ್ಯ ಸಾರಿಗೆ ಸಂಸ್ಥೆ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದು, ಸೋಮವಾರ ಮುಂಜಾನೆಯೇ ಗ್ರಾಮಕ್ಕೆ ಸಾರಿಗೆ ಬಸ್ ಸಂಚಾರ ಆರಂಭಗೊಂಡಿದೆ.

ರಾಮನಗರ ರಸ್ತೆಯಲ್ಲಿರುವ ಚಿಕ್ಕಮುದವಾಡಿಯಿಂದ 5 ಕಿ.ಮೀ. ದೂರದಲ್ಲಿರುವ ಬಾಚಳ್ಳಿದೊಡ್ಡಿ ಸುತ್ತಮುತ್ತಲಿನ ಮೇದರ ದೊಡ್ಡಿ, ವಾಡೇದೊಡ್ಡಿ, ಕೆಬ್ಬೆದೊಡ್ಡಿ, ಸಂಕ್ರಾತಿ ತಾಂಡ್ಯ ಸೇರಿದಂತೆ ಹಲವು ಗ್ರಾಮಗಳ ಮೂಲಕ ಬಸ್‌ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಬೆಳಗ್ಗೆ ಕೆಎಸ್‌ಆರ್‌ಟಿಸಿ ಬಸ್‌ ಗ್ರಾಮಗಳಿಗೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರೆಲ್ಲಾ ಸೇರಿ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಗ್ರಾಪಂ ಸದಸ್ಯ ಕೃಷ್ಣಾನಾಯ್ಕ ಮಾತನಾಡಿ, ನಮ್ಮ ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕಳೆದ 70 ವರ್ಷಗಳಿಂದಲೂ ಮನವಿ ಮಾಡುತ್ತಿದ್ದರೂ ಯಾವುದೇ ಸರ್ಕಾರಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಲೇ ಇಲ್ಲ. ರಾಮನಗರ ಮುಖ್ಯ ರಸ್ತೆಯಿಂದ 5 ಕಿ.ಮೀ. ದೂರದಲ್ಲಿರುವ ಬಾಚಳ್ಳಿದೊಡ್ಡಿ ಸೇರಿದಂತೆ ಸುತ್ತಮುತ್ತಲ ಲಂಬಾಣಿ ಹಾಗೂ ಹಿಂದುಳಿದವರು ನೆಲೆಸಿರುವ ಬೆಟ್ಟಗುಡ್ಡಗಳ ತಪ್ಪಲಲ್ಲಿರುವ ಈ ಕುಗ್ರಾಮಗಳಿಗೆ ಸಾರಿಗೆ ಸಂಪರ್ಕ, ರಸ್ತೆ ಹಾಗೂ ಶುದ್ಧ ಕುಡಿಯುವ ನೀರು ಇತ್ಯಾದಿ ಮೂಲ ಸೌಕರ್ಯಗಳು ಗಗನ ಕುಸುಮವಾಗಿತ್ತು. ಇತ್ತೀಚೆಗೆ ಉಪಮುಖ್ಯಮಂತ್ರಿಗಳ ಕುಂದು ಕೊರತೆ ಸಭೆಯಲ್ಲಿ ನೇರವಾಗಿ ಡಿ.ಕೆ.ಶಿವಕುಮಾರ್‌ ಅವರ ಮುಂದೆ ನಮ್ಮ ಸಮಸ್ಯೆಯನ್ನು ಹೇಳಿಕೊಂಡೆವು. ಎರಡೇ ದಿನದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಿರುವುದು ನಮಗೆ ತುಂಬಾ ಅನುಕೂಲವಾಗಿದೆ. ನಮ್ಮೆಲ್ಲ ಗ್ರಾಮಗಳ ಪರವಾಗಿ ಡಿಸಿಎಂಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಈ ವೇಳೆ ಗ್ರಾಪಂ ಅಧ್ಯಕ್ಷ ಲಿಂಗಣ್ಣ, ಮಾಜಿ ಅಧ್ಯಕ್ಷ ಕುಂತಿಕಲ್‌ ದೊಡ್ಡಿ ಬಸವರಾಜು, ಜಿಪಂ ಮಾಜಿ ಸದಸ್ಯ ವೆಂಕಟೇಶ್, ನಗರಸಭಾ ಮಾಜಿ ಅಧ್ಯಕ್ಷ ಕೆ.ಎನ್.ದಿಲೀಪ್, ಮುಖಂಡರಾದ ಶಂಭುಲಿಂಗಪ್ಪ, ಕೃಷ್ಣನಾಯ್ಕ, ರಮೇಶ್‌ನಾಯ್ಕ, ರಾಜುಗಾಂಧಿ ನಾಯ್ಕ, ರಾಮಸ್ವಾಮಿ, ರಾಮಣ್ಣ, ಕಾಡೇಗೌಡ ಮತ್ತಿತರರು ಹಾಜರಿದ್ದರು.

Share this article