ಪ್ರಯಾಣಿಕರ ಜ್ಞಾನ ದಾಹ ನೀಗಿಸುವ ಬಸ್ ನಿಲ್ದಾಣ ಗ್ರಂಥಾಲಯ

KannadaprabhaNewsNetwork |  
Published : May 22, 2026, 02:45 AM IST
ಬಳ್ಳಾರಿಯ ಕೇಂದ್ರ ಬಸ್ ನಿಲ್ದಾಣದ ಗ್ರಂಥಾಲಯದಲ್ಲಿ ದಿನಪತ್ರಿಕೆ ಓದಿನಲ್ಲಿ ತೊಡಗಿಸಿಕೊಂಡಿರುವ ಪ್ರಯಾಣಿಕರು.  | Kannada Prabha

ಸಾರಾಂಶ

ಗ್ರಂಥಾಲಯ ಪ್ರಯಾಣಿಕರಿಗೆ ಕೇವಲ ಸಮಯ ಕಳೆಯುವ ಸ್ಥಳವಾಗಿರದೇ, ಜ್ಞಾನಾರ್ಜನೆಗೆ ದಾರಿ ತೆರೆದಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಸಾಮಾನ್ಯವಾಗಿ ಬಸ್ ನಿಲ್ದಾಣ ಎಂದರೆ ಜನಜಂಗುಳಿ, ಗದ್ದಲ, ಪ್ರಯಾಣದ ತವಕ, ಬಸ್‌ಗಳ ಓಡಾಟ ಮತ್ತು ಸಮಯ ಕಳೆಯಲು ಮೊಬೈಲ್‌ನಲ್ಲಿ ಮುಳುಗಿರುವ ಪ್ರಯಾಣಿಕರ ದೃಶ್ಯ ಕಣ್ಣಿಗೆ ಬೀಳುತ್ತದೆ. ಆದರೆ, ಬಳ್ಳಾರಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ನಗರ ಕೇಂದ್ರ ಗ್ರಂಥಾಲಯ ಪ್ರಯಾಣಿಕರಿಗೆ ಕೇವಲ ಸಮಯ ಕಳೆಯುವ ಸ್ಥಳವಾಗಿರದೇ, ಜ್ಞಾನಾರ್ಜನೆಗೆ ದಾರಿ ತೆರೆದಿದೆ.

ಓದುವ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಜಾರಿಗೆ ತಂದಿರುವ ಯೋಜನೆಯ ಭಾಗವಾಗಿ ಜನಸಂಚಾರ ಹೆಚ್ಚಿರುವ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಗ್ರಂಥಾಲಯ ಆರಂಭಿಸಿದೆ.

ಬಸ್‌ಗಾಗಿ ಕಾಯುವ ಸಮಯ ಬಹುತೇಕ ಜನರಿಗೆ ನಿರರ್ಥಕವಾಗುತ್ತದೆ. ಕೆಲವರು ಮೊಬೈಲ್‌ನಲ್ಲಿ ತೊಡಗಿಕೊಂಡರೆ, ಇನ್ನೂ ಕೆಲವರು ಸುಮ್ಮನೆ ಸಮಯ ಕಳೆಯುತ್ತಾರೆ. ಆದರೀಗ ಬಳ್ಳಾರಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪುಸ್ತಕ, ದಿನಪತ್ರಿಕೆ, ವಾರಪತ್ರಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಓದುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಸಾಹಿತ್ಯ, ಇತಿಹಾಸ, ವಿಜ್ಞಾನ, ಕೃಷಿ, ಆರೋಗ್ಯ, ಮಕ್ಕಳ ಕಥೆಗಳು, ಕಾದಂಬರಿಗಳು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ವ್ಯವಸ್ಥಿತವಾಗಿ ಇಲ್ಲಿ ಇಡಲಾಗಿದೆ. ಅಲ್ಲದೆ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳ ಜೊತೆಗೆ ಹಲವು ಮಾಸಪತ್ರಿಕೆಗಳೂ ಲಭ್ಯವಿದ್ದು, ಪ್ರಯಾಣಿಕರು ಆಸಕ್ತಿಯಿಂದ ಓದುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ನೆರವು

ಬಸ್ ನಿಲ್ದಾಣದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಬಳ್ಳಾರಿಗೆ ಬರುತ್ತಾರೆ. ತರಗತಿಗಳಿಗೆ ತೆರಳುವ ಮುನ್ನ ಅಥವಾ ಮನೆಗೆ ಮರಳುವ ವೇಳೆಯಲ್ಲಿ ಅವರು ಇಲ್ಲಿ ಸ್ವಲ್ಪ ಸಮಯ ಕಳೆಯುವ ಮೂಲಕ ಉಪಯುಕ್ತ ಮಾಹಿತಿಯನ್ನು ಪಡೆಯುತ್ತಿದ್ದಾರೆ. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಕರಿಗೆ ಈ ಗ್ರಂಥಾಲಯ ಹೆಚ್ಚು ಅನುಕೂಲಕರವಾಗಿದೆ. ಕೆಲ ವಿದ್ಯಾರ್ಥಿಗಳು ಪ್ರತಿದಿನ ಬಸ್ ಬರುವ ವರೆಗೂ ಇಲ್ಲೇ ಕುಳಿತು ಓದುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ.

ಓದುವ ಸಂಸ್ಕೃತಿಗೆ ಉತ್ತೇಜನ

ಡಿಜಿಟಲ್ ಯುಗದಲ್ಲಿ ಪುಸ್ತಕ ಓದುವ ಅಭ್ಯಾಸ ಕಡಿಮೆಯಾಗುತ್ತಿದೆ ಎಂಬ ಆತಂಕದ ನಡುವೆ, ಸಾರ್ವಜನಿಕ ಸ್ಥಳದಲ್ಲೇ ಗ್ರಂಥಾಲಯ ಆರಂಭಿಸಿರುವುದು ಮಹತ್ವದ ಹೆಜ್ಜೆಯಾಗಿದೆ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ನಡುವೆ ಸಿಲುಕಿರುವ ಇಂದಿನ ತಲೆಮಾರಿಗೆ ಪುಸ್ತಕಗಳ ಮಹತ್ವವನ್ನು ಪರಿಚಯಿಸುವ ಈ ಕಾರ್ಯ ಗಮನ ಸೆಳೆದಿದೆ.

ಈ ಗ್ರಂಥಾಲಯಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ, ಇನ್ನಷ್ಟು ಪುಸ್ತಕಗಳು ಹಾಗೂ ಓದುಗರಿಗೆ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಹೆಚ್ಚಿಸಬೇಕೆಂಬ ಬೇಡಿಕೆಯೂ ಕೇಳಿಬರುತ್ತಿದೆ. ಈಗಿರುವ ಗ್ರಂಥಾಲಯ ಜಾಗ ಕಿಷ್ಕಿಂಧೆಯಂತಿದ್ದು ವಿಶಾಲವಾದ ಜಾಗದಲ್ಲಿ ಗ್ರಂಥಾಲಯ ನಿರ್ಮಿಸಿದಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಓದಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ ಎನ್ನುವುದು ಸಾರ್ವಜನಿಕರ ಆಗ್ರಹ. 2012ರಲ್ಲಿ ಕೇಂದ್ರ ಬಸ್ ನಿಲ್ದಾಣದಲ್ಲಿ ಈ ಗ್ರಂಥಾಲಯ ಸ್ಥಾಪಿಸಲಾಗಿದ್ದು, ನಿತ್ಯ 100ಕ್ಕೂ ಅಧಿಕ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಬಳ್ಳಾರಿ ನಗರದಲ್ಲಿ 10 ಶಾಖಾ ಗ್ರಂಥಾಲಯಗಳು ಇವೆ. ಎಲ್ಲೆಡೆ ಉತ್ತಮ ಸ್ಪಂದನೆ ಇದೆ ಎನ್ನುತ್ತಾರೆ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ನರಸಣ್ಣ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ಮಾವು, ಹಲಸು ಮೇಳ
ಉದ್ಯೋಗ ಆಧರಿತ ಶಿಕ್ಷಣ ಕಾರ್ಯಾಗಾರ