ಸಾರಿಗೆ ನೌಕರರ ಮುಷ್ಕರ ಭಾಗಶಃ ಯಶಸ್ವಿ; ಪ್ರಯಾಣಿಕರ ಸೇವೆಗೆ ಮುಂದಾದ ಖಾಸಗಿ ವಾಹನಗಳು
ಬಸ್ ಮುಷ್ಕರದಿಂದ ವ್ಯಾಪಾರ ವಹಿವಾಟಿಗೂ ಕುತ್ತು
ರೈಲುಗಳ ಮೊರೆ ಹೋದ ಪ್ರಯಾಣಿಕರು; ಆಸ್ಪತ್ರೆಗಳಿಗೆ ದ್ವಿಚಕ್ರ ವಾಹನ, ಖಾಸಗಿ ವಾಹನದಲ್ಲಿ ಬಂದರುಖಾಸಗಿ ಬಸ್‌ಗಳಿಗೆ ರೇಟ್ ಕಾರ್ಡ್ ನೀಡಿದ ಜಿಲ್ಲಾಡಳಿತ; ಹೆಚ್ಚು ಹಣ ವಸೂಲಿ ಮಾಡಿದರೆ ಕ್ರಮದ ಎಚ್ಚರಿಕೆಕನ್ನಡಪ್ರಭ ವಾರ್ತೆ ಬಳ್ಳಾರಿ
ಮುಷ್ಕರ ಹಿನ್ನೆಲೆ ಬಹುತೇಕ ಸಾರಿಗೆ ನೌಕರರು ಸೇವೆಯಿಂದ ದೂರ ಉಳಿದರು. ಬಸ್‌ಗಳು ಡಿಪೋ ಸೇರಿದವು. ಪ್ರಯಾಣಿಕರ ಅನುಕೂಲಕ್ಕಾಗಿ ಕೆಲ ಸಾರಿಗೆ ಬಸ್‌ಗಳು ಹಾಗೂ ಖಾಸಗಿ ಬಸ್‌ಗಳಿಗೆ ಸೇವೆ ನೀಡಲು ಜಿಲ್ಲಾಡಳಿತ ಅವಕಾಶ ನೀಡಿತ್ತು. ಆದರೆ, ಪ್ರಯಾಣಿಕರಿಲ್ಲದೆ ಖಾಸಗಿ ವಾಹನಗಳು ನಿಲ್ದಾಣದ ಬಳಿಯೇ ಬೀಡುಬಿಟ್ಟಿದ್ದವು. ಕೆಲವೊಂದು ಖಾಸಗಿ ವಾಹನಗಳಲ್ಲಿ ಮಾತ್ರ ಒಂದಷ್ಟು ಜನ ಪ್ರಯಾಣಿಕರು ಕಂಡು ಬಂದರು. ಸಾರಿಗೆ ನೌಕರರ ಮುಷ್ಕರದ ಬಿಸಿ ಬಳ್ಳಾರಿಯಿಂದ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ಸಾರಿಗೆ ಸೇವೆ ನೀಡುವ ಬಸ್‌ಗಳಿಗೂ ತಟ್ಟಿತು. ಬಸ್ ನಿಲ್ದಾಣಗಳಲ್ಲಿ ಆಂಧ್ರ ಸಾರಿಗೆ ಸಂಸ್ಥೆಯ ಬಸ್‌ಗಳು ಸೇವೆಗೆ ಸಜ್ಜಾಗಿದ್ದರೂ ಪ್ರಯಾಣಿಕರು ಇರಲಿಲ್ಲ. ಆಂಧ್ರಪ್ರದೇಶದ ಗಡಿ ಭಾಗದ ಗ್ರಾಮಗಳ ನಡುವೆ ಬಳ್ಳಾರಿ ಜಿಲ್ಲೆಯ ಜನರ ವೈವಾಹಿಕ ಹಾಗೂ ವ್ಯಾಪಾರ ಸಂಬಂಧಗಳಿದ್ದು ನಿತ್ಯ ಆಂಧ್ರ, ತೆಲಂಗಾಣ ರಾಜ್ಯದ ಗಡಿ ಭಾಗಗಳಿಗೆ ನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಆದರೆ, ಕರ್ನಾಟಕ ಸಾರಿಗೆ ಬಸ್‌ಗಳ ಮುಷ್ಕರದಿಂದಾಗಿ ಬಳ್ಳಾರಿ ನಗರದತ್ತ ಪ್ರಯಾಣಿಕರು ಸುಳಿಯಲಿಲ್ಲ. ಹೀಗಾಗಿ ಬಸ್‌ಗಳು ಜನರಿಲ್ಲದೆ ಬಿಕೋ ಎಂದವು. ಬಸ್ ಮುಷ್ಕರದಿಂದಾಗಿ ನಿತ್ಯ ಗ್ರಾಮೀಣ ಪ್ರದೇಶಗಳಿಂದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಪರದಾಡಿದರು.
ಖಾಸಗಿ ಬಸ್‌ಗಳಿಂದ ಹೆಚ್ಚಿನ ವಸೂಲಿಗಿಲ್ಲ ಅವಕಾಶ:
ಈ ಕುರಿತು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಸಾರಿಗೆ ಇಲಾಖೆ ಅಧಿಕಾರಿಗಳು ಮುಷ್ಕರದಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕಾಗಿ ಖಾಸಗಿ ಬಸ್‌ಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. 82 ಖಾಸಗಿ ಬಸ್‌ಗಳು, 42 ಕ್ರೂಸರ್, 8 ಮ್ಯಾಕ್ಸಿಕ್ಯಾಬ್, 8 ಟಾಂಟಾಂ ಸೇರಿದಂತೆ ಒಟ್ಟು 140 ಖಾಸಗಿ ವಾಹನಗಳು, 113 ಸಾರಿಗೆ ಬಸ್‌ಗಳು, 28 ಎಪಿಎಸ್‌ಆರ್‌ಟಿಸಿ (ಆಂಧ್ರಸಾರಿಗೆ ಬಸ್‌ಗಳು), ಒಟ್ಟು 281 ಬಸ್‌ಗಳು ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಸಾರಿಗೆ ನೌಕರರ ಬಸ್ ಮುಷ್ಕರದಿಂದಾಗಿ ನಗರದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಲಿಲ್ಲ. ಹೊರಗಡೆಯಿಂದ ಬರುವ ಜನರನ್ನೇ ಹೆಚ್ಚಾಗಿ ಆಶ್ರಯಿಸಿರುವ ಆರ್ಥಿಕ ವಹಿವಾಟು ಭಾಗಶಃ ಕುಸಿತವಾಗಿತ್ತು.
ನಗರದ ಜಿಲ್ಲಾಸ್ಪತ್ರೆಗೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗೆ ತುರ್ತಾಗಿ ಬರಬೇಕಿದ್ದವರು ಖಾಸಗಿ ವಾಹನ ಹಾಗೂ ದ್ವಿಚಕ್ರ ವಾಹನದಲ್ಲಿ ಬಂದರು. ಸಾರಿಗೆ ಬಸ್‌ಗಳಿಂದ ನಿತ್ಯ ಉಚಿತ ಸೇವೆ ಪಡೆಯುವ ಮಹಿಳೆಯರು ಮುಷ್ಕರದಿಂದಾಗಿ ಖಾಸಗಿ ವಾಹನಗಳ ಮೊರೆ ಹೋದರು. ಮುಷ್ಕರ ಹಿನ್ನಲೆಯಲ್ಲಿ ಬಸ್ ನಿಲ್ದಾಣಗಳ ಬಳಿ ಪೊಲೀಸ್ ಬಂದೋಬಸ್ತ್ ಇತ್ತು. ಯಾವುದೇ ಅಹಿತಕರ ಘಟನೆ ಜರುಗದಂತೆ ಜಿಲ್ಲಾ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿತ್ತು.
ವೇತನ ಪರಿಷ್ಕರಣೆಗೆ ಹಿಂದೇಟು ಹಾಕಿರುವ ಮುಖ್ಯಮಂತ್ರಿಗಳ ಧೋರಣೆ ಖಂಡಿಸಿ ಕರೆ ನೀಡಿರುವ ಮುಷ್ಕರ ಸಂಪೂರ್ಣ ಯಶಸ್ವಿಯಾಗಿದ್ದು, ನಮ್ಮ ಹೋರಾಟದಿಂದ ಜನರಿಗೆ ತೊಂದರೆಯಾಗಿದ್ದಲ್ಲಿ ಅದಕ್ಕೆ ಸರ್ಕಾರವೇ ಹೊಣೆ ಎಂದು ಕ.ರಾ.ರ.ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷ ಕೆ.ಎ. ಆದಿಮೂರ್ತಿ ತಿಳಿಸಿದರು. ಕನ್ನಡಪ್ರಭ ಜತೆ ಮಾತನಾಡಿದ ಅವರು, ಸಾರಿಗೆ ನೌಕರರ ಹೋರಾಟಕ್ಕೆ ಇಡೀ ರಾಜ್ಯದ ಜನತೆಯ ಸಹಕಾರ ಸಿಕ್ಕಿದೆ. ಸರ್ಕಾರ ತನ್ನ ಮೊಂಡುತನ ಪ್ರದರ್ಶಿಸಿದರೆ ಹೋರಾಟ ಮುಂದುವರಿಯಲಿದೆ. ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರಿಗೆ ಬಸ್‌ಗಳು ರಸ್ತೆಗಿಳಿಯುವುದಿಲ್ಲ ಎಂದು ತಿಳಿಸಿದರು. ಮನವೊಲಿಕೆ..................
ಬಸ್ ಮುಷ್ಕರದ ನಡುವೆ ಪ್ರಯಾಣಿಕರಿಗೆ ಅನಾನುಕೂಲವಾಗದಿರಲಿ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಚಾಲಕರು ಹಾಗೂ ನಿರ್ವಾಹಕರಿಗೆ ಮನವೊಲಿಸುವ ಕೆಲಸ ಮುಂದುವರಿಸಿದ್ದಾರೆ. ನೌಕರರ ಪೈಕಿ ಬಹುತೇಕರು ಮುಷ್ಕರದಲ್ಲಿ ಭಾಗಿಯಾಗಿದ್ದು ಹೊಸದಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ನೌಕರರ ಮನವೊಲಿಸುತ್ತಿರುವ ಅಧಿಕಾರಿಗಳು, ಹೋರಾಟ ಮಾಡುವವರು ಮಾಡಲಿ. ಇದರ ನಡುವೆ ಪ್ರಯಾಣಿಕರಿಗೆ ಎಷ್ಟು ಸಾಧ್ಯವೋ ಅಷ್ಟು ಅನುಕೂಲ ಮಾಡಿಕೊಡೋಣ ಎಂದು ಅಧಿಕಾರಿಗಳು ಮನವೊಲಿಕೆಯಲ್ಲಿ ತೊಡಗಿದ್ದಾರೆ. ಮನೆಯಲ್ಲಿರುವ ಚಾಲಕ, ನಿರ್ವಾಹಕರಿಗೆ ಕರೆ ಮಾಡಿ ಸೇವೆಗೆ ಬರುವಂತೆ ಅಧಿಕಾರಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.