ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಬಿಡುವ ಪ್ರಮಾಣದಲ್ಲಿ ಇಳಿಕೆ ಕಂಡ ಹಿನ್ನೆಲೆ ಈಚೆಗೆ ಸೇತುವೆ ಮೇಲೆ ವಾಹನ ಸಂಚಾರಕ್ಕೆ ಅನುವು ನೀಡಲಾಗಿತ್ತು, ಇದೀಗ 31 ದಿನಗಳ ಬಳಿಕ ಸೋಮವಾರ ಬೆಳಗ್ಗೆಯಿಂದ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದು ಸಾರ್ವಜನಿಕರ ಬಹು ದೊಡ್ಡ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಂತಾಗಿದೆ.
ಜು.25ರಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಯಬಿಡಲಾಗಿದೆ. ಜು. 26ರಿಂದ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆ.4ರಿಂದ ನದಿಗೆ ಹರಿ ಬಿಡುವ ನೀರಿನ ಪ್ರಮಾಣದಲ್ಲಿ ಇಳಿಕೆಯಾದ ಕಾರಣ ಸೇತುವೆ ಜಲದಿಬ್ಬಂಧನದಿಂದ ಮುಕ್ತಿಗೊಂಡಿತ್ತು. ಬಳಿಕ ಸೇತುವೆ ಮೇಲಿನ ಸ್ವಚ್ಛತಾ ಕಾರ್ಯ ನಡೆಸಿ ಆ. 6ರಿಂದ ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇತುವೆ ಮೇಲೆ ಕಾಲ್ನಡಿಗೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಜಲಾಶಯದ ಗೇಟ್ ನಲ್ಲಿ ಚೈನ್ ಲಿಂಕ್ ತುಂಡಾಗಿ ಮತ್ತೆ ಸೇತುವೆಗೆ ಮುಳುಗಡೆ ಭೀತಿ ಎದುರಾದ ಹಿನ್ನೆಲೆ ರಾತ್ರೋರಾತ್ರಿ ಅಧಿಕಾರಿಗಳು ಸೇತುವೆ ಮೇಲೆ ಕಾಲ್ನಡಿಗೆಗೂ ನಿರ್ಬಂಧ ಹೇರಿದರು.ತುಂಗಭದ್ರಾ ಜಲಾಶಯದ ಕ್ಲಸ್ಟರ್‌ಗೇಟ್ ಅಳವಡಿಕೆಯ ಕಾರ್ಯ ಯಶಸ್ವಿಯಾದ ಬಳಿಕ ಜಲಾಶಯದಿಂದ ನದಿಗೆ ನೀರು ಹರಿಬಿಡುವ ಪ್ರಮಾಣದಲ್ಲಿ ಇಳಿಕೆ ಕಂಡ ಹಿನ್ನೆಲೆಯಲ್ಲಿ ಆ.19ರಿಂದ ಲಗು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇದರಿಂದಾಗಿ ನಿತ್ಯ ದ್ವಿಚಕ್ರ ವಾಹನ, ಆಟೋ ಹಾಗೂ ಕಾರು ಗಳ ಮೂಲಕ ತಮ್ಮ ಕೆಲಸ ಕಾರ್ಯಗಳಿಗೆ ತೆರಳುವ ಅನೇಕರಿಗೆ ಅನುಕೂಲವಾದರೆ, ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರಿಗೆ ಮಾತ್ರ ಸಮಸ್ಯೆ ತಪ್ಪುತ್ತಿರಲಿಲ್ಲ. ಸೇತುವೆ ಸರಿ ಇದ್ದಾಗಲೇ ಕಡೆಬಾಗಿಲು ಮಾರ್ಗವಾಗಿ ತೆರಳುವ ಬಸ್ ಗಳು ಸೇತುವೆ ಮುಳುಗಡೆಯ ಬಳಿಕ ಕಂಪ್ಲಿಗೆ ಇನ್ನೇನು ಬರುವುದೇ ಇಲ್ಲ ಎನ್ನುತ್ತಿದ್ದ ಸಾರ್ವಜನಿಕರ ಮಾತು ಮಾತ್ರ ನಿಜವಾಗಿತ್ತು. ನಿತ್ಯ ಕಂಪ್ಲಿ ಗಂಗಾವತಿ ಗೆ ತೆರಳಲು ಸ್ಥಳೀಯ ಬಸ್ ಗಳು ಮಾತ್ರ ಕಂಪ್ಲಿಗೆ ಆಗಮಿಸುತ್ತಿದ್ದವು ಬಸ್ ಗಳ ಸಂಖ್ಯೆ ಕಡಿಮೆ ಅದರಲ್ಲಿ ಸರಿಯಾದ ಸಮಯಕ್ಕೆ ಬಸ್ ಗಳು ಇಲ್ಲದೆ ನಿತ್ಯವು ವಿದ್ಯಾರ್ಥಿಗಳಿಗೆ ತಮ್ಮ ತರಗತಿಗಳಿಗೆ ಸರಿಯಾದ ಸಮಯಕ್ಕೆ ತಲುಪಲಾಗುತ್ತಿರಲಿಲ್ಲ. ಪ್ರವಾಹದ ಇಳಿಕೆಯ ಬಳಿಕ ಸೇತುವೆ ಮೇಲೆ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಬಸ್ ಗಳ ಸಂಚಾರಕ್ಕೆ ಸೋಮವಾರದಿಂದ ಅನುವು ಕಲ್ಪಿಸಿದ್ದು ಇದೀಗ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.