ಶಿವಾನಂದ ಪಿ.ಮಹಾಬಲಶೆಟ್ಟಿ
ತಾಲೂಕು ಕೇಂದ್ರವಾಗಿ ದಶಕಗಳೇ ಗತಿಸಿದರೂ ತಾಲೂಕು ಕೇಂದ್ರಕ್ಕೆ ಬರಲು-ಹೋಗಲು ಸಮರ್ಪಕವಾಗಿ ಬಸ್ ಸಂಚಾರ ವ್ಯವಸ್ಥೆಯಿಲ್ಲದೆ ನಿತ್ಯ ಪ್ರಯಾಣಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಹ ದುಸ್ಥಿತಿ ಬಂದಿದೆ.
ನೂತನ ತಾಲೂಕಿಗೆ ಅರೆಬರೆ ಕಚೇರಿಗಳ ಹೊರತಾಗಿ ಪೂರ್ಣ ಪ್ರಮಾಣದ ಕಚೇರಿಗಳನ್ನು ಆರಂಭಿಸದ ಸರ್ಕಾರ ಯಾವುದೇ ಹೊಸ ಅಭಿವೃದ್ಧಿ ಕಾಮಗಾರಿ ಆರಂಭಿಸದೇ ತಾಲೂಕು ಕೇಂದ್ರದಲ್ಲಿ ಇಲ್ಲಗಳ ಆಗರವನ್ನೇ ಸೃಷ್ಟಿಸುತ್ತಿದೆ. ತಾಲೂಕಿನ ಸುತ್ತಮುತ್ತಲ ಅನೇಕ ಗ್ರಾಮಗಳಿಂದ ಸಾವಿರಾರು ವಿದ್ಯಾರ್ಥಿಗಳು ನಿತ್ಯ ವಿದ್ಯಾರ್ಜನೆಗೆ ರಬಕವಿ-ಬನಹಟ್ಟಿಯ ವಿವಿಧ ಶಾಲೆ-ಕಾಲೇಜುಗಳಿಗೆ ಬರುತ್ತಾರೆ. ಆದರೆ, ಇಲ್ಲಿಗೆ ಬಂದು ಹೋಗಲು ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ.ಈ ಮಧ್ಯೆ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದ ಬಳಿಕ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಆದರೆ, ಹೆಚ್ಚುವರಿ ಬಸ್ ಓಡಿಸುತ್ತಿಲ್ಲ. ಸಾರಿಗೆ ಇಲಾಖೆ ಮೊದಲಿದ್ದ ನಾಲ್ಕು ಬಸ್‌ಗಳ ಜಾಗದಲ್ಲಿ ಈಗ ಒಂದೇ ಬಸ್ ಓಡಿಸುವ ಮೂಲಕ ಆದಾಯ ಸರಿದೂಗಿಸಿಕೊಳ್ಳುವ ಸರ್ಕಸ್ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಈ ಎಲ್ಲ ಕಾರಣಗಳಿಂದ ಬಸ್‌ಗಳು ಭರ್ತಿಯಾಗಿ ಬಾಗಿಲಲ್ಲಿ ಜೋತು ಬಿದ್ದು ಪ್ರಯಾಣಿಸುತ್ತಿದ್ದಾರೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸರಿಯಾದ ವೇಳೆಗೆ ತರಗತಿಗೆ ಹಾಜರಾಗಲಾರದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಸರ್ವ ಶಿಕ್ಷಣ ಅಭಿಯಾನದ ಮೂಲ ಉದ್ದೇಶಕ್ಕೆ ಚ್ಯುತಿ ಬಂದಿದೆ.
ತಾಲೂಕು ಕೇಂದ್ರವಾಗಿದ್ದರಿಂದ ರಬಕವಿ-ಬನಹಟ್ಟಿಯಿಂದಲೇ ನೇರವಾಗಿ ಬಸ್‌ಗಳನ್ನು ಗ್ರಾಮೀಣ ಭಾಗಗಳಿಗೆ ಬಿಡುವ ವ್ಯವಸ್ಥೆಯಾಗಬೇಕು. ಶಕ್ತಿ ಯೋಜನೆಯಿಂದ ಎಲ್ಲ ಬಸ್‌ಗಳು ಭರ್ತಿಯಾಗಿಯೇ ಓಡುತ್ತಿದ್ದು, ಸಮೀಪದ ಜಮಖಂಡಿ, ತೇರದಾಳ, ಮಹಾಲಿಂಗಪುರ, ಮುಧೋಳ ಸುತ್ತಲಿಲ ಪ್ರದೇಶಗಳಿಂದ ಆಗಮಿಸುವ ಜನತೆಗೂ ತೀವ್ರ ಸಮಸ್ಯೆಯಾಗಿದೆ. ನಿತ್ಯ ದುಡ್ಡು ಕೊಟ್ಟು ಪ್ರಯಾಣಿಸುವ ಪುರುಷ ನೌಕರರು, ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರ ಮತ್ತು ಬೆಳಗಾವಿ ಮೊದಲಾದೆಡೆ ಸಂಚರಿಸುವ ಪ್ರಯಾಣಿಕರು ಸ್ತ್ರೀಶಕ್ತಿ ಎದುರು ಕಂಗಾಲಾಗಿದ್ದು, ಖಾಸಗಿ ವಾಹನಗಳ ಓಡಾಟಕ್ಕಾದರೂ ಸರ್ಕಾರ ಅವಕಾಶ ಕಲ್ಪಿಸಿ ಪುಣ್ಯ ಕಟ್ಟಿಕೊಳ್ಳಬೇಕೆಂದು ಅಲವತ್ತುಕೊಂಡಿದ್ದಾರೆ.
ಈ ಹಿಂದೆ ಕಾರ್ಯಾಚರಿಸುತ್ತಿದ್ದ ಬಸ್‌ಗಳ ಸೇವೆ ಪುನಾರಂಭಿಸಬೇಕು ಮತ್ತು ಸ್ತ್ರೀಶಕ್ತಿ ಯೋಜನೆಯಿಂದ ಪ್ರಯಾಣಿಕರ ದಟ್ಟಣೆ ಹೆಚ್ಚಿರುವುದರಿಂದ ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
-----------ಕೋಟ್‌ಸ್ತ್ರೀಶಕ್ತಿ ಯೋಜನೆ ಜಾರಿಯಾದಾಗಿನಿಂದ ನಿಗದಿತ ಸಮಯದಲ್ಲಿ ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ದಿನವೂ ತೊಂದರೆಯಾಗುತ್ತಿದೆ. ಪ್ರಯಾಣಿಕರ ದಟ್ಟನೆ ಕಾರಣ ಬಸ್‌ಗಳಲ್ಲಿ ನಿಲ್ಲಲೂ ಜಾಗ ಸಿಗದೇ ಬಳಿಕ ಬಂದ ಬಸ್‌ನಲ್ಲಿ ಹರಸಾಹಸ ಪಟ್ಟು ತೆರಳಿದರೂ ಸಮಯ ಮೀರಿ ತರಗತಿಗೆ ತೆರಳುವಂತಾಗಿದೆ. ನಿತ್ಯ ತರಗತಿಗಳಿಗೆ ಗೈರಾಗುವ ಮೂಲಕ ತುಂಬ ತೊಂದರೆ ಅನುಭವಿಸುತ್ತಿದ್ದೇವೆ.
---
- ಶಿವಾನಂದ ಮಠದ ಚಹಾಪುಡಿ ವರ್ತಕರು, ರಬಕವಿ.