ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ವಿಶ್ವ ವಿಖ್ಯಾತ ರಂಗನತಿಟ್ಟು ಪಕ್ಷಿ ಧಾಮದವನ್ನು ಬನ್ನೇರುಘಟ್ಟ ಮಾದರಿಯಲ್ಲಿ ಚಿಟ್ಟೆ ಪಾರ್ಕ್ ನಿರ್ಮಾಣ ಮಾಡಿ ಪ್ರವಾಸಿಗರಿಗೆ ಹೊಸ ಆಕರ್ಷಣೆ ಕಲ್ಪಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ 3 ಹೊಸ ವಿಹಾರ ದೋಣಿಗಳಿಗೆ ಚಾಲನೆ ನೀಡಿದ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರಿಗೆ ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಮತ್ತು ರಂಗನತಿಟ್ಟಿನ ಬಗ್ಗೆ ಹೆಚ್ಚಿನ ಪ್ರಚಾರ ಮಾಡುವಂತೆ ಸೂಚಿಸಿದರು.
ರಂಗನತಿಟ್ಟಿನ ದೋಣಿಗಳಿಗೆ ಹೇಮಾವತಿ, ಕಾವೇರಿ, ಲಕ್ಷ್ಮಣತೀರ್ಥ, ತುಂಗಾ, ಕೃಷ್ಣಾ ಎಂದು ಹೆಸರಿಟ್ಟಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಈಗ ಉದ್ಘಾಟಿಸಿದ ದೋಣಿಗಳಿಗೆ ಮಾಂಜ್ರಾ, ಗೋದಾವರಿ, ಕಾರಂಜಾ ನದಿಗಳ ಹೆಸರಿಡುವಂತೆ ಸಲಹೆ ನೀಡಿದರು.ಅರಣ್ಯ ಇಲಾಖೆಯ ಚಾರಣ, ಸಫಾರಿ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ತಾಣದಲ್ಲಿ ರಂಗನತಿಟ್ಟು ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲ ಆಗುವಂತೆ ಪ್ರವೇಶದ ಟಿಕೆಟ್ ಮತ್ತು ದೋಣಿ ವಿಹಾರದ ಟಿಕೆಟ್ ಕಾಯ್ದಿರಿಸುವ ಅವಕಾಶ ಕಲ್ಪಿಸಬೇಕು ಎಂದರು.
ರಂಗನತಿಟ್ಟು ಬಳಿಯ ಗೆಂಡೆ ಹೊಸಹಳ್ಳಿ ದ್ವೀಪದಲ್ಲಿ ಕೂಡ ನೂರಾರು ಬಗೆಯ ಪಕ್ಷಿಗಳು ಬಂದು ಗೂಡುಕಟ್ಟಿ, ಸಂತಾನೋತ್ಪತ್ತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ದ್ವೀಪವನ್ನು ಕೂಡ ರಂಗನತಿಟ್ಟು ರೀತಿಯಲ್ಲೇ ಅಭಿವೃದ್ದಿ ಪಡಿಸಿ ಪ್ರವಾಸಿ ತಾಣವಾಗಿ ರೂಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.ಇದೇ ವೇಳೆ ಕಾವೇರಿ ನದಿಯಲ್ಲಿ ದೋಣಿವಿಹಾರ ನಡೆಸಿದ ಅರಣ್ಯ ಸಚಿವರು ಬಂಡೆಗಳ ಮೇಲೆ ಮಲಗಿದ್ದ ಬೃಹತ್ ಗಾತ್ರದ ಮೊಸಳೆಗಳು, ಹೊರ ದೇಶಗಳಿಂದ ಸಂತಾನೋತ್ಪತ್ತಿಗಾಗಿ ಆಗಮಿಸಿರುವ ಪೆಲಿಕಾನ್, ರಿವರ್ ಟರ್ನ್, ಕಾರ್ಮೊರೆಂಟ್, ಪೈಡ್ ಕಿಂಗ್ ಫಿಷರ್ ಮೊದಲಾದ ಪಕ್ಷಿಗಳನ್ನು ವೀಕ್ಷಿಸಿದರು.
ಎಚ್.ಬಸಾಪುರ ಗ್ರಾಪಂ ಉಪಾಧ್ಯಕ್ಷರಾಗಿ ಶಿವರಾಜು ಆಯ್ಕೆಹಲಗೂರು:
ಸಮೀಪದ ಎಚ್.ಬಸಾಪುರ ಗ್ರಾಮ ಪಂಚಾಯ್ತಿತಿ ನೂತನ ಉಪಾಧ್ಯಕ್ಷರಾಗಿ ಶಿವರಾಜು ಅವಿರೋಧವಾಗಿ ಆಯ್ಕೆಯಾದರು.ಈ ಹಿಂದಿನ ಉಪಾಧ್ಯಕ್ಷ ಬಿ.ಡಿ.ರಾಜೇಂದ್ರ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದು ಶಿವರಾಜು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಕೆ.ಜೆ.ಪೂಜಾಶ್ರೀ ಅವಿರೋಧ ಅಯ್ಕೆ ಘೋಷಣೆ ಮಾಡಿದರು.
ನೂತನ ಉಪಾಧ್ಯಕ್ಷ ಶಿವರಾಜು ಮಾತನಾಡಿ, ಸದಸ್ಯರ ಸಹಕಾರದಿಂದಾಗಿ ಗ್ರಾಮ ಪಂಚಾಯ್ತಿ ನೂತನವಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದು, ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುವೆ. ಮುಂದಿನ ದಿನಗಳಲ್ಲಿ ಪಂಚಾಯತಿ ಅಭಿವೃದ್ಧಿಗೆ ಪೂರಕವಾಗಿ ಬೆಂಬಲಿಸುವೆ ಎಂದು ತಿಳಿಸಿದರು.ಈ ವೇಳೆ ಗ್ರಾಪಂ ಅಧ್ಯೆಕ್ಷೆ ಮುತ್ತಮ್ಮ, ಸದಸ್ಯರಾದ ಬಿ.ಡಿ.ರಾಜೇಂದ್ರ, ಶ್ರೀಧರ್, ಜ್ಯೋತಿ, ಪಿ.ಡಿ.ಓ ಮಂಗಳ ಸೇರಿದಂತೆ ಹಲವರು ಇದ್ದರು.