ಕನ್ನಡಪ್ರಭ ವಾರ್ತೆ ಹಾಸನ
ಅಲಂಕೃತ ರಥದಲ್ಲಿ ದೇವಿರಮ್ಮ ಅಮ್ಮನವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ರಥವು ಮೂಲಸ್ಥಾನದಿಂದ ಗ್ರಾಮ ಬೀದಿಗಳಲ್ಲಿ ಸಂಚರಿಸಿತು. ಮಾರ್ಗದುದ್ದಕ್ಕೂ ಭಕ್ತರು ಆರತಿ ಬೆಳಗಿ ದೇವಿಗೆ ಪೂಜೆ ಸಲ್ಲಿಸಿದರು. ಮಹಿಳೆಯರು ಕಳಶ ಹಿಡಿದು ಸ್ವಾಗತ ಕೋರಿದರೆ, ಯುವಕರು ಭಕ್ತಿಗೀತೆಗಳೊಂದಿಗೆ ರಥ ಎಳೆದು ಭಕ್ತಿ ಸಮರ್ಪಿಸಿದರು. ಗ್ರಾಮದೆಲ್ಲೆಡೆ ವಿದ್ಯುತ್ ದೀಪಾಲಂಕಾರ, ತೋರಣಗಳು ಹಾಗೂ ಪುಷ್ಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ಜಾತ್ರೆಯ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಹನ್ನೆರಡಕ್ಕೂ ಹೆಚ್ಚು ಗ್ರಾಮಗಳಿಂದ ಭಕ್ತರು ಆಗಮಿಸಿದ್ದು, ದೇವಾಲಯ ಆವರಣದಲ್ಲಿ ಭಕ್ತ ಸಾಗರವೇ ಹರಿದುಬಂದಿತ್ತು. ಕೆಲವರು ಕುಟುಂಬ ಸಮೇತರಾಗಿ ಹರಕೆ ತೀರಿಸಿದರೆ, ಹಲವರು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಭಕ್ತರಿಗೆ ಕುಡಿಯುವ ನೀರು, ಅನ್ನಸಂತರ್ಪಣೆ ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ರಥೋತ್ಸವದ ನಂತರ ನಡೆದ ಮಹಾಮಂಗಳಾರತಿಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು. ಬಳಿಕ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು. ದೇವಾಲಯದ ಆವರಣದಲ್ಲಿ ಭಕ್ತರ ಭಜನೆ, ಪೂಜಾ ವಿಧಿಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ದಿನಪೂರ್ತಿ ನಡೆಯುತ್ತಿದ್ದು, ಜಾತ್ರೆ ಧಾರ್ಮಿಕತೆಯ ಜೊತೆಗೆ ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿ ಮೆರೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್. ಪಿ. ಸ್ವರೂಪ್, ಬೂವನಹಳ್ಳಿ ದೇವಿರಮ್ಮ ಜಾತ್ರೆ ನಮ್ಮ ಭಾಗದ ಜನರ ನಂಬಿಕೆ ಮತ್ತು ಭಕ್ತಿಯ ಪ್ರತೀಕವಾಗಿದೆ. ಹತ್ತು ವರ್ಷಕ್ಕೊಮ್ಮೆ ನಡೆಯುವ ಈ ಮಹೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮೊದಲ ದಿನವೇ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿರುವುದು ಜಾತ್ರೆಯ ವಿಶೇಷತೆಯನ್ನು ಹೆಚ್ಚಿಸಿದೆ. ದೇವಿರಮ್ಮ ತಾಯಿ ಎಲ್ಲರಿಗೂ ಆರೋಗ್ಯ, ಸಮೃದ್ಧಿ ಹಾಗೂ ಶಾಂತಿ ನೀಡಲಿ ಎಂದು ಹೇಳಿದರು.ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಭಾಗದ ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಭಕ್ತಿ, ಸಂಸ್ಕೃತಿ ಹಾಗೂ ಒಗ್ಗಟ್ಟನ್ನು ಬೆಳೆಸುತ್ತವೆ. ದೇವಿರಮ್ಮ ಅಮ್ಮನವರ ಆಶೀರ್ವಾದದಿಂದ ಜನರಲ್ಲಿ ಸುಖ-ಶಾಂತಿ ನೆಲೆಸಲಿ” ಎಂದು ಆಶೀರ್ವಚನ ನೀಡಿದರು.ಇತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ರಾತ್ರಿ ವೇಳೆ ವಿಶೇಷ ಸಂಗೀತ ಕಾರ್ಯಕ್ರಮ ಹಾಗೂ ಭಜನಾ ಕಾರ್ಯಕ್ರಮಗಳು ಭಕ್ತರನ್ನು ಆಕರ್ಷಿಸಿತು. ಗ್ರಾಮದಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು.ಈ ವೇಳೆ ಮಾಜಿ ಶಾಸಕ ಬಿ.ವಿ. ಕರೀಗೌಡ, ಶರತ್, ಹಾಸನ ಜಿಪಂ ಮಾಜಿ ಅಧ್ಯಕ್ಷ ಸ್ವಾಮಿಗೌಡ, ತಾಪಂ ಮಾಜಿ ಸದಸ್ಯ ಬಿ.ಇ. ಜಯರಾಂ, ಕಂಚಮಾರನಹಳ್ಳಿ ಕಾತರಾಜು, ಬೂವನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ಆರ್. ಬೊಮ್ಮೇಗೌಡ, ಶಿವರಾಮೇಗೌಡ, ಹರೀಶ್, ಮಂಜುನಾಥ್, ರವಿ, ದುರ್ಗಾಪ್ರಸಾದ್, ಸ್ವಾಮಿ, ಮಲ್ಲೇಶ್, ಕರಿಯಯ್ಯ, ಲಕ್ಷ್ಮಣ್ ಸೇರಿದಂತೆ ಹಲವು ಮುಖಂಡರು ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿದ್ದರು.