ಕನ್ನಡಪ್ರಭ ವಾರ್ತೆ ತಿಪಟೂರು
ಕೊಬ್ಬರಿ ನಫೆಡ್ ನೋಂದಣಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವುದರಿಂದ ಹೊಸದಾಗಿ ನೋಂದಣಿ ಮಾಡಿಸುವಂತೆ ಸರ್ಕಾರ ಆದೇಶಿಸಿರುವುದು ಸರಿಯಷ್ಟೆ. ಆದರೆ ೬೯.೫೦೦ ಮೆಟ್ರಿಕ್ ಟನ್ ಕೊಬ್ಬರಿಯನ್ನು ನಫೆಡ್ ಮೂಲಕ ಕೊಂಡುಕೊಳ್ಳಲು ಉದ್ದೇಶಿಸಲಾಗಿದ್ದು ಇದರ ಬದಲು ೧.೫ ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಕೊಂಡುಕೊಳ್ಳುವಂತೆ ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.ನಗರದ ತಮ್ಮ ಗೃಹ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕೊಬ್ಬರಿ ನೋಂದಣಿಯಲ್ಲಿ ಹೆಚ್ಚು ಅಕ್ರಮ ನಡೆದಿತ್ತು. ಆದರೆ ರಾಜ್ಯದ ಎಲ್ಲಾ ಕಡೆ ಹೊಸದಾಗಿ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿರುವುದರಿಂದ ನಿಜವಾದ ರೈತನಿಗೆ ಅನ್ಯಾಯವಾಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಊಟ-ತಿಂಡಿ ಬಿಟ್ಟು ದಿನಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಬೆರಳಚ್ಚುಕೊಟ್ಟು ಬಂದಿದ್ದರು. ಆದರೆ ಈಗ ಮತ್ತೆ ಅದೇ ಸುಡು ಬಿಸಿಲಿನಲ್ಲಿ ನಿಂತು ಕಾಯುವಂತಾಗಿದ್ದು ಇದರಿಂದ ರೈತರಿಗೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ. ಸರ್ಕಾರ ಈಗ ಹೊಸದಾಗಿ ನೋಂದಣಿಗೆ ಆದೇಶ ನೀಡಿದ್ದು ಇದಕ್ಕೆ ಸಮಯಾವಕಾಶ ಕೊಡದೆ ಕೂಡಲೆ ವಾರದೊಳಗೆ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಬಿಸಬೇಕು ಎಂದರು.
ತೆಂಗು ಬೆಳೆಗಾರರು ಯಾವ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಾರೋ ಅಲ್ಲಿ ಹೆಚ್ಚು ಕೊಬ್ಬರಿಯನ್ನು ಕೊಂಡುಕೊಳ್ಳುವಂತೆ ಶೇಕಡವಾರು ಹೆಚ್ಚಿಸಬೇಕು. ಮಂಡ್ಯ ಇತರೆ ಜಿಲ್ಲೆಗಳಲ್ಲಿ ಎಳನೀರಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಕೊಬ್ಬರಿ ಹೆಚ್ಚು ಉತ್ಪಾದನೆ ಇರುವ ಕಾರಣ ಹೆಚ್ಚಿನ ನಿಗದಿ ಮಾಡಬೇಕಿದ್ದು ಇದು ರಾಜ್ಯ ಸರ್ಕಾರದ ಕೈಯಲ್ಲಿದೆ. ಹಾಗೆಯೇ ಸರ್ಕಾರ ೬೯.೫೦೦ ಮೆಟ್ರಿಕ್ ಟನ್ ಬದಲಾಗಿ ೧.೫೦ಲಕ್ಷ ಮೆಟ್ರಿಕ್ ಟನ್‌ಗೆ ಹೆಚ್ಚಿಸಬೇಕು ಹಾಗೂ ಒಂದು ವರ್ಷದವರೆಗೂ ನಫೆಡ್ ಮುಚ್ಚಬಾರದು. ನಫೆಡ್ ಕೇಂದ್ರದಲ್ಲಿ ಸಣ್ಣ ಕೊಬ್ಬರಿ ದಪ್ಪ ಕೊಬ್ಬರಿ ಎಂದು ಆಯ್ಕೆ ಮಾಡದೆ ರೈತರ ಎಲ್ಲಾ ಕೊಬ್ಬರಿಯನ್ನು ಕೊಂಡುಕೊಳ್ಳಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ತಾಪಂ ಮಾಜಿ ಸದಸ್ಯ ನಾಗರಾಜು, ಮುಖಂಡರಾದ ನಟರಾಜು, ನೇತ್ರಾನಂದ, ಮೋಹನ್ ಕುಮಾರ್, ಷಡಕ್ಷರಿ ರಂಗಾಪುರ, ಹೊನ್ನಪ್ಪ, ಲಿಂಗರಾಜು ಮತ್ತಿತರರಿದ್ದರು.
BOXನೀರಿಗಾಗಿ ಹೋರಾಟ
ಬೇಸಿಗೆ ಪ್ರಾರಂಭಕ್ಕೂ ಮುನ್ನವೇ ನಗರದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ನಗರಕ್ಕೆ ನೀರು ಸರಬರಾಜಾಗುವ ಈಚನೂರು ಕೆರೆ ಖಾಲಿಯಾಗಿದೆ. ಇದಕ್ಕೆ ಶಾಸಕರ ಬೇಜವಾಬ್ದಾರಿತನವೇ ಕಾರಣವಾಗಿದೆ. ಈಚನೂರು ಕೆರೆಗೆ ನೀರು ಹರಿಸದ ಕಾರಣ ನಗರವಾಸಿಗಳು ನೀರಿಗಾಗಿ ಪರಿತಪಿಸುವಂತಾಗಿದೆ. ಇಪ್ಪತ್ತು ದಿನಗಳಾದರೂ ನೀರು ಬಿಡುತ್ತಿಲ್ಲವಾದ್ದರಿಂದ ಸಾವಿರಾರು ರು. ಹಣಕೊಟ್ಟು ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುವ ಸ್ಥಿತಿ ಬಂದಿದೆ. ಕೂಡಲೇ ನಗರದ ಜನರಿಗೆ ನೀರಿನ ಭವಣೆ ತಪ್ಪಿಸಿ ಸಮಯಕ್ಕೆ ಸರಿಯಾಗಿ ನೀರು ಬಿಡಬೇಕು. ಇಲ್ಲವಾದಲ್ಲಿ ನಗರಸಭೆ ಮುಂದೆ ಪ್ರತಿಭಟನೆ ಮಾಡಲಾಗುವುದೆಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ತಿಳಿಸಿದ್ದಾರೆ.