ಕನ್ನಡಪ್ರಭ ವಾರ್ತೆ ಚಾಮರಾಜನಗರ ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಹಾಗೂ ಜಿಲ್ಲೆಯ ವಿವಿಧ ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ಪ್ರಾರಂಭದಲ್ಲಿ ಹುತಾತ್ಮ ರೈತರಿಗೆ ಮೌನಾಚರಣೆ ಮಾಡಿ, ನಂತರ ಸಂವಿಧಾನ ಪೀಠಿಕೆಯನ್ನು ಓದಿ, ಆನಂತರ ರಸ್ತೆ ತಡೆ ನಡೆಸಿದರು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಕೇಂದ್ರ ಸರ್ಕಾರ ಈ ಹಿಂದೆ ರೈತ ಹೋರಾಟದ ಸಮಯದಲ್ಲಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುತ್ತೇವೆಂದು ಭರವಸೆ ನೀಡಿತ್ತು. ಆದರೆ, ಇಲ್ಲಿಯ ತನಕ ವಾಪಸ್ ಪಡೆದಿಲ್ಲ ತಕ್ಷಣ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.ಎಂಎಸ್‌ಪಿಯನ್ನು ಜಾರಿಗೊಳಿಸಿ ಕಾನೂನು ವ್ಯಾಪ್ತಿಗೆ ಒಳಪಡಿಬೇಕು. ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು, ವಿದ್ಯುತ್ ಖಾಸಗೀಕರಣಗೊಳಿಸಬಾರದು, ಡಬ್ಲೂಟಿಒ ವ್ಯಾಪ್ತಿಗೆ ಕೃಷಿಯನ್ನು ತರಬಾರದು, ಇದನ್ನು ತಂದರೆ ರೈತರು ಗುಲಾಮಗಿರಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಪಂ ಕಡಬೂರು ಗ್ರಾಮ, ಕೆಂಚಯ್ಯನದೊಡ್ಡಿ, ಕೆವಿಎನ್ ದೊಡ್ಡಿ, ಬೂದುಗುಪ್ಪೆ, ಗಾಂಧಿನಗರ ಗ್ರಾಮಗಳಲ್ಲಿ ನ್ಯಾಯಬೆಲೆ ಅಂಗಡಿ ಸ್ಥಾಪನೆ ಮಾಡಬೇಕು. ಸಮರ್ಪಕವಾಗಿ ಪಡಿತರ ವಿತರಣೆಯಾಗುವಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ರಸ್ತೆ ತಡೆಯಿಂದ ಕೆಲಕಾಲ ಸಂಚಾರದಲ್ಲಿ ಅಸ್ತವ್ಯಸ್ತವಾಯಿತು, ನಂತರ ಪೊಲೀಸರು ಮಾತುಕತೆ ನಡೆಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿತ್ತು, ಕೆಲ ಅಧಿಕಾರಿಗಳು ಬಂದು ಸಮಸ್ಯೆಗಳನ್ನು ಆಲಿಸಿದರು.