ಮುಂಡರಗಿ: ಸರ್ಕಾರ ಮೆಕ್ಕಜೋಳವನ್ನು ಸಂಪೂರ್ಣವಾಗಿ ಖರೀದಿ ಮಾಡಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ರಸ್ತೆ ದುರಸ್ತಿ, ಪ್ರತಿ ಗ್ರಾಮಗಳಲ್ಲಿಯೂ ಕಣಗಳ ನಿರ್ಮಾಣ, ಕಡಲೆ ಖರೀದಿ ಕೇಂದ್ರ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದಿಂದ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ಮಾತನಾಡಿ, ಸರ್ಕಾರ ಎಲ್ಲ ರೈತರ ಮೆಕ್ಕೆಜೋಳ ಖರೀದಿಸುವಂತೆ ಮುಂದಿನ 7ರಿಂದ 15 ದಿನಗಳಲ್ಲಿ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ತಾಲೂಕಿನ ರೈತರೊಂದಿಗೆ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ಶರಣಪ್ಪ ಕಂಬಳಿ ಮಾತನಾಡಿ, ಸರ್ಕಾರ ಕೆಲವೇ ಕೆಲವು ಕ್ವಿಂಟಲ್ ಮೆಕ್ಕೆಜೋಳ ಖರೀದಿಸುವ ಮೂಲಕ ರೈತರ ಮೂಗಿಗೆ ತುಪ್ಪ ಹಚ್ಚಲು ಮುಂದಾಗಿದೆ. ಇದನ್ನು ನಿಲ್ಲಿಸಿ ರೈತರಿಗೆ ನಿಜವಾದ ನ್ಯಾಯವನ್ನು ದೊರಕಿಸಿ ಕೊಡಬೇಕು ಎಂದರು.ಸರ್ಕಾರವು ಸಂಪೂರ್ಣವಾಗಿ ಮೆಕ್ಕೆಜೋಳ ಖರೀದಿ ಮಾಡಬೇಕು. ಆನ್‌ಲೈನ್‌ನಲ್ಲಿ ಕೇವಲ 1600ರಿಂದ 1800 ರೈತರಿಂದ ಮಾತ್ರ ಅರ್ಜಿ ಪಡೆಡಿದೆ. ಇನ್ನುಳಿದ ರೈತರ ಮೆಕ್ಕೆಜೋಳವನ್ನು ಖರೀದಿ ಮಾಡದೇ ಹೋದರೆ ಪ್ರತಿ ಕ್ವಿಂಟಲ್‌ಗೆ ಸರ್ಕಾರ ₹800ರಂತೆ ಪ್ರೋತ್ಸಾಹಧನ ನೀಡಬೇಕು. ಶೀಘ್ರವೇ ಕಡಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಚಂದ್ರಪ್ಪ ಬಳ್ಳಾರಿ, ಹುಚ್ಚಪ್ಪ ಹಂದ್ರಾಳ, ಗುಡದಪ್ಪ ಕರಿಗಾರ, ದೇವೇಂದ್ರಪ್ಪ ಹಳ್ಳಿ, ಭೀಮಣ್ಣ ಆರೇರ್, ಹನುಮಂತಪ್ಪ ನಿಟ್ಟಾಲಿ, ಶೇಖಪ್ಪ ಮೈನಳ್ಳಿ, ಮಾರುತಿ ನಾಗಣ್ಣವರ, ಎಚ್.ಆರ್. ಜಮಾದಾರ್, ಅಂದಪ್ಪ ವಾಲಿಕಾರ, ಲಕ್ಷ್ಮಣ ಪೂಜಾರ, ಸಿದ್ದಲಿಂಗಪ್ಪ ಅಳವಂಡಿ, ಮುದಿಯಪ್ಪ ಗೌಡ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.