ಗುಣಮಟ್ಟ, ಪ್ರಮಾಣ ತಿಳಿದುಕೊಂಡು ವಸ್ತುಗಳ ಖರೀದಿಸಿ: ನ್ಯಾ.ವೇಲಾ

KannadaprabhaNewsNetwork | Published : Mar 22, 2025 2:04 AM

ಸಾರಾಂಶ

ಯಾವುದೇ ಒಂದು ವಸ್ತುವನ್ನು ಖರೀದಿಸಿದರೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆಯೂ ನಾವು ತಿಳಿದುಕೊಳ್ಳುವ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಗ್ರಾಹಕರಾಗಿ ಯಾವುದನ್ನು ಖರೀದಿಸಬೇಕು, ಯಾವುದನ್ನು ಖರೀದಿಸಬಾರದು ಎಂದು ತಿಳಿದರೆ ಸಮಾಜ ಅಭಿವೃದ್ಧಿಗೊಳ್ಳಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೇಲಾ ದಾಮೋದರ್ ಖೋಡೆ ಹೇಳಿದ್ದಾರೆ.

- ಆರ್‌.ಎಲ್‌. ಕಾನೂನು ಕಾಲೇಜಿನಲ್ಲಿ ವಿಶ್ವ ಗ್ರಾಹಕರ ಹಕ್ಕು ದಿನಾಚರಣೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಯಾವುದೇ ಒಂದು ವಸ್ತುವನ್ನು ಖರೀದಿಸಿದರೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆಯೂ ನಾವು ತಿಳಿದುಕೊಳ್ಳುವ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಗ್ರಾಹಕರಾಗಿ ಯಾವುದನ್ನು ಖರೀದಿಸಬೇಕು, ಯಾವುದನ್ನು ಖರೀದಿಸಬಾರದು ಎಂದು ತಿಳಿದರೆ ಸಮಾಜ ಅಭಿವೃದ್ಧಿಗೊಳ್ಳಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೇಲಾ ದಾಮೋದರ್ ಖೋಡೆ ಹೇಳಿದರು.

ನಗರದ ಪಿ.ಜೆ. ಬಡಾವಣೆಯ ಅಕ್ಕಮಹಾದೇವಿ ರಸ್ತೆಯ ಆರ್.ಎಲ್.ಕಾನೂನು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ ವಿಶ್ವ ಗ್ರಾಹಕರ ಹಕ್ಕು ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ವಸ್ತುಗಳನ್ನು ಖರೀದಿಸಿ, ಉಪಯೋಗಿಸುವುದರ ಬಗ್ಗೆ ಗ್ರಾಹಕರಿಗೆ ಶಿಕ್ಷಣದ ಅಗತ್ಯವಿದೆ ಎಂದರು.

ಆಯ್ಕೆ ಮಾಡುವುದು ಒಂದು ಕಲೆ. ಶಾಪಿಂಗ್ ಎಲ್ಲರಿಗೂ ಇಷ್ಟ. ಆನ್‌ಲೈನ್ ಶಾಪಿಂಗ್ ಮಾಡುವಾಗ ಗುಣಮಟ್ಟ ಮತ್ತು ಪ್ರಮಾಣ ತಿಳಿದುಕೊಳ್ಳಬೇಕು. ಗ್ರಾಹಕರು ವಸ್ತುಗಳನ್ನು ಖರೀದಿಸುವ ವಿಚಾರದಲ್ಲಿ ಆಕರ್ಷಣೆಗೆ ಒಳಗಾಗುವ ಜೀವನ ಶೈಲಿ ಬೆಳೆಸಿಕೊಳ್ಳಬಾರದು. ಯಾವುದೇ ಒಂದು ವಸ್ತುಗಳನ್ನು ಖರೀದಿಸುವಾಗ ಅದರ ಮುಕ್ತಾಯದ ದಿನಾಂಕ ನೋಡುವ ತಾಳ್ಮೆ ಮುಖ್ಯ. ವಸ್ತುಗಳು ಖರೀದಿಸಿ, ಸಮಸ್ಯೆಯಾದರೆ ಕೇಳುವ ಹಕ್ಕು ಗ್ರಾಹಕರಿಗೆ ಇದೆ. ಆರೋಗ್ಯಕ್ಕೆ ಪೂರಕವಾದ ವಸ್ತುಗಳನ್ನು ಖರೀದಿಸಬೇಕು. ಇಂದು ನಾವು ಖರೀದಿಸಿದ್ದು, ನಮ್ಮ ಮುಂದಿನ ಪೀಳಿಗೆ ಮೇಲೆ ಪರಿಣಾಮ ಬೀರಲಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಎಂ. ಕರೆಣ್ಣವರ್ ಮಾತನಾಡಿ, ವ್ಯಾಪಾರಿಗಳು ಕಡಿಮೆ ಬೆಲೆ ಸೇರಿದಂತೆ ಇತರೆ ಆಕರ್ಷಣೆಗಳಿಂದ ಗೊಂದಲಕ್ಕೀಡು ಮಾಡುವ ಜೊತೆಗೆ ಅಟ್ಟಕ್ಕೆ ಏರಿಸುತ್ತಾರೆ. ಆದರೆ ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ ಅದರ ಗುಣಮಟ್ಟ, ತೂಕವನ್ನು ಪರಿಶೀಲಿಸುವುದರ ಜೊತೆಗೆ ನಮ್ಮ ಆರೋಗ್ಯಕ್ಕೆ ಪೂರಕವಾಗಿರಬೇಕು. ಕಂಪನಿಗಳು ತಮ್ಮ ವಸ್ತುಗಳು ಮಾರಾಟವಾಗಲು ಅನೇಕ ರೀತಿಯ ಆಕರ್ಷಕ ಪ್ರಚಾರಗಳನ್ನು ಮಾಡುತ್ತಾರೆ. ಗ್ರಾಹಕರು ಅದರ ಬಗ್ಗೆ ಗಂಭೀರವಾಗಿ ಯೋಚಿಸಿ ಖರೀದಿಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಇಂದಿನ ಕಾಲದಲ್ಲಿ ರೇಟಿಂಗ್ ನೋಡಿ ಖರೀದಿಸುವವರೇ ಹೆಚ್ಚು. ರೇಟಿಂಗ್‌ನಲ್ಲೂ ಮೋಸ ನಡೆಯುತ್ತಿದ್ದು, ಗ್ರಾಹಕರು ಎಚ್ಚರಿಕೆಯಿಂದಿರಬೇಕು. ವಸ್ತುಗಳ ಮೇಲೆ ನಿಗಧಿಪಡಿಸಿದ ದರಕ್ಕಿಂದಲೂ ಒಂದು ರೂಪಾಯಿ ಹೆಚ್ಚು ಕೇಳಿದರೂ ನಾವು ಪ್ರಶ್ನೆ ಮಾಡಬೇಕು. ಏನೇ ಸಬೂಬು ಹೇಳಿದರೂ ದರಕ್ಕಿಂತ ಹೆಚ್ಚು ಕೊಡಬಾರದು ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್ ಕುಮಾರ್, ಕಾಲೇಜಿನ ಪ್ರಾಚಾರ್ಯ ಜಿ.ಎಸ್.ಯತೀಂದ್ರ, ಹಿರಿಯ ವಕೀಲರಾದ ಎಚ್.ವಿ.ರಾಮದಾಸ್ ಸೇರಿದಂತೆ ಇತರರು ಇದ್ದರು.ವಿದ್ಯಾರ್ಥಿನಿ ಬಿಂದು ಶ್ರೀ ಪ್ರಾರ್ಥಿಸಿದರೆ, ಸಹಾಯಕ ಪ್ರಾಧ್ಯಾಪಕ ಕೆ.ಎನ್.ಪ್ರದೀಪ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ತಸ್ವಿಯಾ ಕಾರ್ಯಕ್ರಮ ನಿರೂಪಿಸಿದರು.

- - -

ಕೋಟ್‌ ಕಾನೂನು ವಿದ್ಯಾರ್ಥಿಗಳು ಗ್ರಂಥಾಲಯಗಳಿಗೆ ಭೇಟಿ ನೀಡಿ ಪುಸ್ತಕ ಓದುವ ಮೂಲಕ ಕಾನೂನು ಬಗ್ಗೆ ತಿಳಿದುಕೊಳ್ಳಬೇಕು. ಹಳ್ಳಿ ಜನರು ವಕೀಲರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿಲ್ಲ. ಹಾಗಾಗಿ, ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಕೌಶಲ್ಯ ಕಾನೂನು ವಿದ್ಯಾರ್ಥಿಗಳು ಇಂದಿನಿಂದಲೇ ಬೆಳೆಸಿಕೊಳ್ಳಬೇಕು

- ವೇಲಾ ದಾಮೋದರ್ ಖೋಡೆ, ನ್ಯಾಯಾಧೀಶೆ

- - - -21ಕೆಡಿವಿಜಿ38.ಜೆಪಿಜಿ:

ದಾವಣಗೆರೆಯ ಆರ್.ಎಲ್. ಕಾನೂನು ಕಾಲೇಜಿನಲ್ಲಿ ನಡೆದ ವಿಶ್ವ ಗ್ರಾಹಕರ ಹಕ್ಕು ದಿನ ಕಾರ್ಯಕ್ರಮವನ್ನು ನ್ಯಾಯಾಧೀಶರಾದ ವೇಲಾ ದಾಮೋದರ್ ಖೋಡೆ ಉದ್ಘಾಟಿಸಿದರು.

Share this article