ಬೆಂಬಲ ಬೆಲೆಯಡಿ ಖರೀದಿಸಿ ತಿಂಗಳ ಬಳಿಕ ಗುಣಮಟ್ಟ ಸರಿ ಇಲ್ಲವೆಂದು ಹೆಸರು ವಾಪಸ್‌!

KannadaprabhaNewsNetwork |  
Published : Apr 21, 2026, 02:15 AM IST
ಹೆಸರು ಕಾಳು ಖರೀದಿ ಕೇಂದ್ರ | Kannada Prabha

ಸಾರಾಂಶ

ಬ್ಯಾಹಟ್ಟಿ ಕೇಂದ್ರದಲ್ಲಿ ಡಿಸೆಂಬರ್‌ 23ರಂದು 96 ರೈತರಿಂದ 1000 ಕ್ವಿಂಟಲ್‌ ಹೆಸರನ್ನು ಕ್ವಿಂಟಲ್‌ಗೆ ₹ 8768ರಂತೆ ಖರೀದಿಸಿತ್ತು. ಬಳಿಕ ಚೀಲಕ್ಕೆ ಬಾರ್‌ ಕೋಡ್‌ ನಮೂದಿಸಿ ಬ್ಯಾಹಟ್ಟಿಯಿಂದ ನರಗುಂದದ ಸರ್ಕಾರಿ ಗೋದಾಮಿಗೂ ರವಾನಿಸಲಾಗಿತ್ತು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಬೆಂಬಲ ಬೆಲೆ ಯೋಜನೆಯಡಿ ಹುಬ್ಬಳ್ಳಿ ತಾಲೂಕಿನಲ್ಲಿ ಖರೀದಿಸಿದ ಹೆಸರು ಬೆಳೆಯನ್ನು 1 ತಿಂಗಳ ಬಳಿಕ ಗುಣಮಟ್ಟ ಸರಿಯಿಲ್ಲ ಹಿಂತೆಗೆದುಕೊಂಡು ಹೋಗಿ ಎಂದು ರೈತರಿಗೆ ನೋಟಿಸ್‌ ನೀಡಲಾಗಿದೆ. ಇದನ್ನು ನೋಡಿದ ರೈತರು, ಗುಣಮಟ್ಟ ಸರಿಯಿಲ್ಲ ಎಂದಾದರೆ ಖರೀದಿಸಿದ್ದು ಏಕೆ ಎಂದು ಪ್ರಶ್ನಿಸಿದ್ದು ಹಣ ಕೊಡಿಸುವಂತೆ ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ.

ಆಗಿರುವುದೇನು?:

ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಹೆಸರು ಬೆಳೆ ಉತ್ತಮ ಇಳುವರಿ ಬಂದಿತ್ತು. ಆದರೆ, ಮಾರುಕಟ್ಟೆಯಲ್ಲಿ ಸೂಕ್ತ ದರವಿಲ್ಲದ ಕಾರಣ ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿಯು ನಾಪೇಡ್‌ ವತಿಯಿಂದ ಜಿಲ್ಲೆಯಲ್ಲಿ 22 ಕೇಂದ್ರ ತೆರೆದು ಹೆಸರು ಖರೀದಿಸಿತ್ತು. ಅದರಂತೆ ಬ್ಯಾಹಟ್ಟಿ ಕೇಂದ್ರದಲ್ಲಿ ಡಿಸೆಂಬರ್‌ 23ರಂದು 96 ರೈತರಿಂದ 1000 ಕ್ವಿಂಟಲ್‌ ಹೆಸರನ್ನು ಕ್ವಿಂಟಲ್‌ಗೆ ₹ 8768ರಂತೆ ಖರೀದಿಸಿತ್ತು. ಬಳಿಕ ಚೀಲಕ್ಕೆ ಬಾರ್‌ ಕೋಡ್‌ ನಮೂದಿಸಿ ಬ್ಯಾಹಟ್ಟಿಯಿಂದ ನರಗುಂದದ ಸರ್ಕಾರಿ ಗೋದಾಮಿಗೂ ರವಾನಿಸಲಾಗಿತ್ತು.

ದುಡ್ಡು ಬರಲಿಲ್ಲ-ನೋಟಿಸ್‌ ಬಂತು:

ಒಂದೆರೆಡು ವಾರದಲ್ಲಿ ದುಡ್ಡು ಬರುತ್ತದೆ. ಮುಂಗಾರು ಬಿತ್ತನೆಗೆ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಲು ಅನುಕೂಲವಾಗುತ್ತದೆ ಎಂದು ರೈತರು ಎದುರು ನೋಡುತ್ತಿದ್ದರು. ಆದರೆ, 2026 ಜನವರಿ 15ರ ಬಳಿಕ ಮಾರಾಟ ಮಾಡಿದ ರೈತರಿಗೆ ನೋಟಿಸ್‌ ಕಳುಹಿಸಿರುವ ಅಧಿಕಾರಿಗಳು, ನೀವು ನೀಡಿದ ಬೆಳೆ ಗುಣಮಟ್ಟದಿಂದ ಕೂಡಿಲ್ಲ. ಹೀಗಾಗಿ ಅವುಗಳನ್ನು ಹಿಂತೆಗೆದುಕೊಂಡು ಹೋಗಿ ಎಂದು ತಿಳಿಸಲಾಗಿದೆ. ಅದರಂತೆ ನರಗುಂದದಿಂದ ಬ್ಯಾಹಟ್ಟಿ ಕೇಂದ್ರಕ್ಕೆ ಮೂರು ಲಾರಿಯಲ್ಲಿ ಹೆಸರ ಬೆಳೆಯನ್ನು ವಾಪಸ್‌ ಕಳುಹಿಸಲಾಗಿದೆ. ಈ ಕುರಿತು ಕೇಂದ್ರದ ಅಧಿಕಾರಿಗಳನ್ನು ಪಶ್ನಿಸಿದರೆ ಮೇಲಾಧಿಕಾರಿಗಳನ್ನೇ ಕೇಳಿಕೊಳ್ಳಿ ಎಂದು ಹೇಳುತ್ತಿದ್ದಾರೆ.

ಜಿಲ್ಲಾಡಳಿತದ ಮೊರೆ:

ಹೆಸರು ಬೆಳೆ ಮಾರಾಟ ಮಾಡಿದ ಹಣ ಕೊಡಿಸಿ ಎಂದು ರೈತರು ಜಿಲ್ಲಾಡಳಿತದ ಮೊರೆ ಹೋಗಿದ್ದು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳಿಗೆ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಅತ್ತ ಪರಿಶೀಲಿಸಿ ವರದಿ ಸಲ್ಲಿಸುವಂತೆ ಮಾರಾಟ ಮಂಡಳಿಯ ಉಪನಿರ್ದೇಶಕರಿಗೆ ಉಪವಿಭಾಗಾಧಿಕಾರಿ ನಿರ್ದೇಶನ ನೀಡಿದ್ದಾರೆ. ಆದರೆ, ಈ ವರೆಗೂ ಮಾರಾಟ ಮಂಡಳಿ ತನಿಖಾ ಹಂತದಲ್ಲೇ ಇದೆ ಎಂದು ತಿಳಿಸುತ್ತದೆಯೇ ಹೊರತು ಕ್ರಮಕೈಗೊಳ್ಳುತ್ತಿಲ್ಲ.

ಗುಣಮಟ್ಟ ಪರಿಶೀಲಿಸಿ ಖರೀದಿಸಿದ ಮೇಲೆ ಇದೇನು ಹೊಸ ರಗಳೆ ಎಂಬ ಪ್ರಶ್ನೆಗೆ, ರೈತರು ಒತ್ತಡ ಹಾಕಿ ಮಾರಾಟ ಮಾಡಿದ್ದಾರೆ ಎಂದು ಮಾರಾಟ ಮಂಡಳಿ ಅಧಿಕಾರಿಗಳು ತಿಳಿಸುತ್ತಾರೆ. ನಿಮ್ಮ ಸಿಬ್ಬಂದಿ ಮೇಲೆ ಒತ್ತಡ ಹೇರಲು ಸಾಧ್ಯವೇ? ಎಂಬ ಪ್ರಶ್ನೆಗೆ ಅಧಿಕಾರಿ ಬಳಿ ಉತ್ತರವಿಲ್ಲ.

ಒಟ್ಟಿನಲ್ಲಿ ರೈತರ ಬೆಳೆ ಖರೀದಿಸಿದ ಬಳಿಕ ಗುಣಮಟ್ಟ ಇಲ್ಲ ಎಂದರೆ ಹೇಗೆ? ಎಂಬ ರೈತರ ಪ್ರಶ್ನೆಗೆ ಸರ್ಕಾರ ಉತ್ತರ ಕೊಡಬೇಕಿದೆ.ಗುಣಮಟ್ಟ ಪರಿಶೀಲಿಸಿದ ಬಳಿಕ ಖರೀದಿಸಿದ್ದ ಹೆಸರನ್ನು ವಾಪಸ್‌ ತೆಗೆದುಕೊಂಡು ಹೋಗಿ ಎಂದು ರೈತರಿಗೆ ನೋಟಿಸ್‌ ನೀಡಲಾಗಿದೆ. ಗುಣಮಟ್ಟ ಸರಿಯಿಲ್ಲ ಎಂದಾದರೆ ಖರೀದಿಸಿದ್ದು ಏಕೆ? ತಕ್ಷಣವೇ ರೈತರಿಗೆ ಹಣ ಕೊಡಬೇಕು. ಇಲ್ಲದಿದ್ದರೆ ಹೋರಾಟ ಖಚಿತ.

ವೀರೇಶ ಸೊಬರದಮಠ, ಅಧ್ಯಕ್ಷರು, ರೈತಸೇನಾ ಕರ್ನಾಟಕಖರೀದಿಸಿದ ಕೆಲ ದಿನಗಳಲ್ಲಿ ವಾಪಸ್‌ ತೆಗೆದುಕೊಂಡು ಹೋಗಿ ಎಂದು ರೈತರಿಗೆ ನೋಟಿಸ್‌ ಕೊಡಲಾಗಿದೆ ಎಂದು ದೂರು ಬಂದಿದೆ. ಪರಿಶೀಲಿಸಿ ವರದಿ ಸಲ್ಲಿಸುವಂತೆ ಮಾರಾಟ ಮಂಡಳಿ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.

ಶಾಲಂ ಹುಸೇನ್‌, ಉಪವಿಭಾಗಾಧಿಕಾರಿಗಳು ಧಾರವಾಡ

ರೈತರು ಒತ್ತಡ ಹಾಕಿ ಹೆಸರು ಬೆಳೆ ಮಾರಾಟ ಮಾಡಿದ್ದಾರೆ ಎಂದು ಖರೀದಿ ಕೇಂದ್ರದಿಂದ ನಮಗೆ ಅರ್ಜಿ ಬಂದಿದೆ. ಅದರ ತನಿಖೆ ನಡೆಯುತ್ತಿದೆ. ತನಿಖೆ ಮುಗಿದ ಮೇಲೆ ಹೇಳಲಾಗುವುದು.

ವಿನಯ ಪಾಟೀಲ, ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿಯಲ್ಲಿ ಕಿಡಿಗೇಡಿಗಳಿಂದ ಮಹಾತ್ಮ ಗಾಂಧೀಜಿಯವರ ಪುತ್ಥಳಿ ಧ್ವಂಸ
ವಚನಗಳು ಸರ್ವಕಾಲಕ್ಕೂ ಶ್ರೇಷ್ಠ: ಅಪರ ಜಿಲ್ಲಾಧಿಕಾರಿ