ಲಕ್ಷ್ಮೇಶ್ವರ: 12ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ಹೇರಳವಾಗಿದ್ದ ಸಮಯದಲ್ಲಿ ಬಸವೇಶ್ವರರು ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಿ ಪ್ರತಿಯೊಬ್ಬರೂ ಸಮಾನರು ಎಂಬ ಸಂದೇಶವನ್ನು ಸಾರಿದರು ಎಂದು ತಹಸೀಲ್ದಾರ್ ಧನಂಜಯ ಎಂ. ತಿಳಿಸಿದರು.ಸೋಮವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಸಮ ಸಮಾಜದ ಹರಿಕಾರ, 12ನೇ ಶತಮಾನದಲ್ಲಿಯೇ ಸಂವಿಧಾನಕ್ಕೆ ಸಮನಾದ ಅನುಭವ ಮಂಟಪದಲ್ಲಿ ಹೆಣ್ಣು- ಗಂಡು ಎಂಬ ಭೇದವಿಲ್ಲದೆ ಎಲ್ಲ ಧರ್ಮಿಯರಿಗೂ ಸಮಾನ ಅವಕಾಶ ನೀಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಹೇಳಿದ ಅವರು, ಮುಂದಿನ ವರ್ಷದಿಂದ ಬಸವೇಶ್ವರ ಜಯಂತಿಯನ್ನು ಸಾರ್ವಜನಿಕರು ಜತೆಗೂಡಿ ಅದ್ಧೂರಿಯಾಗಿ ಆಚರಿಸೋಣ ಎಂದರು.ಈ ವೇಳೆ ಹಿರಿಯರಾದ ಬಸವರಾಜ ಬೆಂಡಿಗೇರಿ, ಚಂಬಣ್ಣ ಬಾಳಿಕಾಯಿ, ಪೂರ್ಣಾಜಿ ಕರಾಟೆ, ಪ್ರವೀಣ ಬಾಳಿಕಾಯಿ ಮಾತನಾಡಿ, ಶರಣರ ಜಯಂತಿಗಳು ಜಾತಿಗೆ ಸೀಮಿತವಾಗಿರದೆ ಎಲ್ಲರೂ ಸೇರಿ ಆಚರಣೆ ಮಾಡುವಂತಾಗಲಿ. ಶರಣರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿಕೊಂಡು ಬಂದರು. ಆದರೂ ಸಹಿತ ಜಾತಿ ಜಾತಿ ಎಂದು ಬಡಿದಾಡಿಕೊಳ್ಳುತ್ತಿದ್ದೇವೆ. ಶರಣರು ಮೊದಲು ನಡೆದು ನಂತರ ನುಡಿಯುವುದು ಅವರ ಜೀವನಾದರ್ಶನವಾಗಿತ್ತು. ಬಸವೇಶ್ವರ ವಚನಗಳ ತತ್ವಗಳನ್ನು ಜನರು ಪಾಲಿಸಬೇಕು. ಶೈಕ್ಷಣಿಕದಲ್ಲಿ ಶರಣರ ವಿಚಾರ ವಚನಗಳನ್ನು ಅಳವಡಿಸಿಕೊಳ್ಳಬೇಕು. ಎಂತಹ ಬಡವನಾದರೂ ಸರಿಯೇ, ಕಾಯಕ ಮಾಡಿ ಹೆಮ್ಮೆಯಿಂದ ಬದುಕು ಸಾಗಿಸಬೇಕೆಂದರು ಬಸವಣ್ಣ ಹೇಳಿದ್ದರು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.ಈ ವೇಳೆ ಕುಬೇರಪ್ಪ ಮಹಾಂತಶೆಟ್ಟರ, ಎಸ್. ಬಿ. ಅಣ್ಣಿಗೇರಿ, ಈರಣ್ಣ ಅಂಕಲಕೋಟಿ, ಶರಣು ಗೋಡಿ, ಎಂ.ಕೆ. ಕಳ್ಳಿಮಠ, ನಿಂಗಪ್ಪ ಬನ್ನಿಕೊಪ್ಪ, ಟಾಕಪ್ಪ ಸಾತಪುತೆ, ಬಸವರಾಜ ಮೆಣಸಿನಕಾಯಿ, ಬಸವರಾಜ ಅಣ್ಣಿಗೇರಿ, ಅನಿಲ ಮುಳಗುಂದ, ಶಿವಯೋಗಿ ಅಂಕಲಕೋಟಿ, ಶಿದ್ದನಗೌಡ ಬಳ್ಳೊಳ್ಳಿ, ವೀರಣ್ಣ ಕಠಾರಿ, ಚನ್ನವೀರಪ್ಪ ದಾನಿ, ದೇವಪ್ಪ ಪೂಜಾರ, ಯೋಗೇಶ ಅಣ್ಣಿಗೇರಿ, ವನಿತಾ ವಡಕಣ್ಣವರ ಹಾಗೂ ತಹಸೀಲ್ದಾರ್ ಕಚೇರಿ ಸಿಬ್ಬಂದಿ, ಅನೇಕರು ಇದ್ದರು.