ಕನ್ನಡಪ್ರಭ ವಾರ್ತೆ ಮಂಡ್ಯ
ನವೆಂಬರ್ 6 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ನ.12 ಕೊನೆ ದಿನ. ನ.13 ರಂದು ನಾಮಪತ್ರಗಳ ಪರಿಶೀಲನೆ, ನ.15 ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆ ದಿನವಾಗಿದೆ.
ಮತದಾನದ ಅವಶ್ಯವಿದ್ದರೆ ನ.23 ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಆಯಾ ಗ್ರಾಪಂ ವ್ಯಾಪ್ತಿ ಗ್ರಾಮಗಳಲ್ಲಿ ನಡೆಸಲಾಗುವುದು. ಮತ ಎಣಿಕೆ ನ.26 ರಂದು ಬೆಳಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.ಚುನಾವಣೆ ನಡೆಯುವ ಗ್ರಾಮಗಳು:
ಪಾಂಡವಪುರ ತಾಲೂಕಿನಲ್ಲಿ 3- ಬೆಳ್ಳಾಳೆ, 2- ವಳಗೆರೆ ದೇವರಹಳ್ಳಿ, 3- ಹೊಸಹಳ್ಳಿ, 5-ಕುರಹಟ್ಟಿ, 3-ಬಸವನಗುಡಿಕೊಪ್ಪಲು, 6- ಹೊಸಸಾಯಪ್ಪನಹಳ್ಳಿ, ಶ್ರೀರಂಗಪಟ್ಟಣ ತಾಲೂಕಿನಲ್ಲಿ ಬೆಳಗೊಳ- 4, 2-ಗಾಮನಹಳ್ಳಿ, 4- ನೀಲನಕೊಪ್ಪಲು, 06-ಮರಳಗಾಲ, ನಾಗಮಂಗಲ ತಾಲೂಕಿನಲ್ಲಿ 5- ಹೊನ್ನೇನಹಳ್ಳಿ, 4- ಶಿಖರನಹಳ್ಳಿ, 8-ಅಲ್ಪಹಳ್ಳಿ, ಕೆ.ಆರ್ ಪೇಟೆ ತಾಲೂಕಿನ 7-ಚಿಕ್ಕೋನಹಳ್ಳಿ, 5-ಕಾಮನಹಳ್ಳಿ, 10-ಪೂವನಹಳ್ಳಿ, 2-ಪುರ ಜಿಲ್ಲೆಯಲ್ಲಿ ಒಟ್ಟು 35 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಚುನಾವಣಾ ನೀತಿ ಸಂಹಿತೆ ಚುನಾವಣೆ ನಡೆಯುವ ಗ್ರಾಪಂ ವ್ಯಾಪ್ತಿಯಲ್ಲಿ ನವೆಂಬರ್ 6 ರಿಂದ 26 ವರೆಗೆ ಜಾರಿಯಲ್ಲಿರುತ್ತದೆ. ಗ್ರಾಮ ಪಂಚಾಯ್ತಿಯ ಎಲ್ಲಾ ಸ್ಥಾನಗಳಿಗೆ ಚುನಾವಣೆ ನಡೆಯದ ಅಥವಾ ಅವಿರೋಧ ಆಯ್ಕೆಯಾಗಿ ಚುನಾವಣಾಧಿಕಾರಿಗಳು ಫಲಿತಾಂಶ ಘೋಷಿಸಿದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದು ನಿಂತು ಹೋಗುತ್ತದೆ.
ಗ್ರಾಪಂ ಉಪ ಚುನಾವಣೆಯು ಮತಪತ್ರಗಳ ಮೂಲಕ ನಡೆಯಲಿದೆ. ಮತಪತ್ರದಲ್ಲಿ ‘ನೋಟಾ’ಗೆ ಅವಕಾಶವಿಲ್ಲ. ನೀತಿ ಸಂಹಿತೆಯು ಜಾರಿಯಲ್ಲಿರುವ ಪ್ರದೇಶಗಳಲ್ಲಿ ಮತದಾನವು ಮುಕ್ತಾಯಗೊಳ್ಳುವ 48 ಗಂಟೆಗಳ ಮೊದಲಿನ ಅವಧಿಯಲ್ಲಿ ಎಲ್ಲಾ ಮದ್ಯದ ಅಂಗಡಿಗಳು ಮತ್ತು ಮದ್ಯ ತಯಾರಿಕ ಘಟಕಗಳನ್ನು ಅದರ ಮಾಲೀಕರು, ಅದಿಭೋಗದಾರರು ಸಂದರ್ಭಾನುಸಾರ ಅದರ ವ್ಯವಸ್ಥಾಪಕರು ಮುಚ್ಚತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.