ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ದಿಂಡಾವರ ಗ್ರಾಮದ ಲಕ್ಕಮ್ಮ ದೇವಸ್ಥಾನದಲ್ಲಿ ದಿಂಡಾವರ, ಯಲ್ಲದಕೆರೆ ಹಾಗೂ ಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಸಭೆ ಸೇರಿ ಕಲ್ವಳ್ಳಿ ಭಾಗದ ಗಾಯಿತ್ರಿ ಜಲಾಶಯ ಸೇರಿದಂತೆ 16 ಕೆರೆಗಳಿಗೆ ನೀರು ತುಂಬಿಸಲು ಮುಂದಿನ ಹೋರಾಟದ ಬಗ್ಗೆ ಚರ್ಚಿಸಿದರು.

ಸಭೆಯನ್ನು ಉದ್ದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಕಲ್ವಳ್ಳಿ ಭಾಗದ ಕೆರೆಗಳನ್ನು ತುಂಬಿಸುವಂತೆ ಅನೇಕ ಬಾರಿ ಚಳುವಳಿ ಹೋರಾಟಗಳನ್ನು ಮಾಡಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಈಗ ವಾಟರ್ ಅಲೋಕೇಶನ್ ಆಗಿ ಡಿಪಿಆರ್ ಅನುಮೋದನೆ ಆಗಿದೆ. ಕ್ಯಾಬಿನೆಟ್ ಅನುಮೋದನೆ ದೊರೆತು ಟೆಂಡರ್ ಕರೆದು ತುರ್ತಾಗಿ ಕಾಮಗಾರಿ ಪ್ರಾರಂಭ ಮಾಡಬೇಕಾಗಿದೆ. ಇದನ್ನು ಸರ್ಕಾರ ಕೂಡಲೇ ಕಾರ್ಯಗತಗೊಳಿಸಬೇಕು. ಹಿರಿಯೂರು ನಗರದಲ್ಲಿ ಸುಮಾರು 1 ಲಕ್ಷದಷ್ಟು ಜನ ಸೇರಿಸಿ ಮಾಡುವ ಸಮಾವೇಶಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮತ್ತು ನೀರಾವರಿ ಸಚಿವರು ಬಂದು ಮನವಿ ಸ್ವೀಕರಿಸಬೇಕು.

ಈ ಯೋಜನೆ ಕೂಡಲೇ ಕಾರ್ಯಗತಗೊಳಿಸದೆ ಇದ್ದಲ್ಲಿ ಚಿತ್ರದುರ್ಗ ಜಿಲ್ಲೆಯ ಪ್ರಾರಂಭದಿಂದ ಹಿಡಿದು ಚಿತ್ರದುರ್ಗದ ಕೊನೆ ಗಡಿಯವರೆಗೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುವುದು. ನೀರಿಗಾಗಿ ಆಗ್ರಹಿಸಿ ಆಯೋಜನೆ ಮಾಡಲಾಗುವ ಸಮಾವೇಶಕ್ಕೆ ಜಿಲ್ಲೆಯ 6 ತಾಲೂಕಿನಿಂದ ರೈತರು, ರೈತ ಮುಖಂಡರು ಆಗಮಿಸುವ ಜೊತೆಗೆ ರಾಜ್ಯದ ಎಲ್ಲ ರೈತ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಹಾಗಾಗಿ ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗಿಯಾಗಬೇಕು ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಬಳಗಟ್ಟೆ ವೆಂಕಟೇಶ್, ಗೌರವಾಧ್ಯಕ್ಷ ಆಲೂರು ಸಿದ್ದರಾಮಣ್ಣ, ಸಿದ್ದೇಗೌಡರು, ಓಬಳಾಪುರ ಹನುಮಣ್ಣ, ದ್ಯಾಮಣ್ಣ, ಸಣ್ಣ ತಿಮ್ಮಣ್ಣ, ಕೃಷ್ಣಪ್ಪ ಸೂರಪ್ಪನಹಟ್ಟಿ, ಗಿರೀಶ್, ಚಂದ್ರಗಿರಿ, ವಿರುಪಾಕ್ಷಿ, ಪುಟ್ಟಮ್ಮ, ಸಂಜು,ಗಿರಿಯಮ್ಮ ಮುಂತಾದವರು ಹಾಜರಿದ್ದರು.