ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ತಾಲೂಕು ಕಚೇರಿ ಎದುರು ಸಮಿತಿ ಸದಸ್ಯರು ಸೇರಿ ಕಾವೇರಿ ನೀರು ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರ ರೈತರಿಗೆ ನೇಣು ಕುಣಿಕೆ ನೀಡಿದೆ ಎಂದು ಕೈಯಲ್ಲಿ ಕುಣಿಕೆ ಹಿಡಿದು ಆಕ್ರೋಶ ಹೊರ ಹಾಕಿದರು.
ಹಿರಿಯ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದಿದ್ದರೂ ಕಾವೇರಿ ಪ್ರಾಧಿಕಾರಗಳು ಕೆಆರ್‌ಎಸ್ ನಿಂದ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿದ್ದು, ಈ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದು ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.ಈಗಾಗಲೇ ಪ್ರಾಧಿಕಾರಗಳ ಆದೇಶವನ್ನು ಪಾಲಿಸಿ ಪ್ರತಿ ದಿನ 15 ಸಾವಿರ ಕ್ಯುಸೆಕ್ ಗೂ ಹೆಚ್ಚು ನೀರನ್ನು ತಮಿಳುನಾಡಿಗೆ ಬಿಡುವ ಮೂಲಕ ಸರ್ಕಾರ ಎಲ್ಲಾ ಭಾಗ್ಯಗಳ ಜೊತೆ ರೈತರಿಗೆ ನೇಣು ಭಾಗ್ಯ ನೀಡಿದೆ. ಸರ್ಕಾರ ಈಗಾಗಲೇ ಜಲಾಶಯದಿಂದ 30 ಟಿಎಂಸಿ ನೀರನ್ನು ಹರಿಸಿದ್ದು, ಮತ್ತೆ ಸುಪ್ರೀಂ ಕೋರ್ಟ್ ಹೇಳಿರುವ ಆದೇಶದಂತೆ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಿ ಪಾಲಿಸಿದರೆ, ಜಲಾಶಯದ ನೀರು ತಳಮಟ್ಟ ತಲುಪಿ ಬರಿದಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಮಿತಿ ಅಧ್ಯಕ್ಷ ಬಿ.ಸಿ. ಕೃಷ್ಣೇಗೌಡ ಮಾತನಾಡಿ, ಮಂತ್ರಿ ಸ್ಥಾನಗಳನ್ನು ಉಳಿಸಿಕೊಳ್ಳಲು ಕೆಆರ್‌ಎಸ್ ಜಲಾಶಯದಿಂದ ಕದ್ದು ಮುಚ್ಚಿ ನೀರು ಹರಿಸುತ್ತಿರುವ ಸರ್ಕಾರದ ಜೊತೆ ನಮ್ಮ ಜನ ಪ್ರತಿನಿಧಿಗಳು ಸಹ ತಮ್ಮ ಅಧಿಕಾರ ಉಳಿಸಿಕೊಳ್ಳಲು ರೈತರೊಂದಿಗೆ ಚೆಲ್ಲಾಟ ವಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನದಿ ನೀರಿನ ವಿಚಾರವಾಗಿ ಪ್ರಾಧಿಕಾರಕ್ಕೆ ಮಳೆಯ ಕೊರತೆ, ಜಲಾಶಯದ ನೀರಿನ ಬಗ್ಗೆ ಸರಿಯಾದ ಮಾಹಿತಿಗಳನ್ನು ಕೊಡದೆ ತಪ್ಪು ಮಾಹಿತಿ ನೀಡಿರುವ ಸರ್ಕಾರ ಮುಂಗಾರು ಮಳೆ ಕೊರತೆ ಇದ್ದರೂ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಬಿಡುತ್ತಿದೆ. ಸುಳ್ಳಿನ ಮನೆ ಮಾಡಿಕೊಂಡು ನೀರು ಹರಿಸಿಲ್ಲ ಎಂದು ಆಣೆ ಪ್ರಮಾಣಗಳ ಮಾಡಿ ಕದ್ದು ಮುಚ್ಚಿ ನೀರು ಬಿಡುತ್ತಿದ್ದಾರೆ ಎಂದು ರಾಜ್ಯದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.