ಕನ್ನಡಪ್ರಭ ವಾರ್ತೆ ಮೈಸೂರು

ಪೊಲೀಸರು ಬರೆದರೆ ಬದುಕಿನ ಬಹಳ ದೊಡ್ಡ ಸತ್ಯವನ್ನು ಹೇಳಿದಂತೆ ಆಗುತ್ತದೆ. ಇದರಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಸಾಹಿತಿ ಡಾ. ಕೃಷ್ಣಮೂರ್ತಿ ಹನೂರು ತಿಳಿಸಿದರು.

ನಗರದ ಪೀಪಲ್ಸ್‌ ಪಾರ್ಕ್‌ ಕೇಂದ್ರ ಸಾರ್ವಜನಿಕ ಗ್ರಂಥಾಲಯದಲ್ಲಿ ಅಭಿರುಚಿ ಪ್ರಕಾಶನವು ಶುಕ್ರವಾರ ಆಯೋಜಿಸಿದ್ದ ಎಸ್.ಎಲ್. ಚನ್ನಬಸವಣ್ಣ ಅವರ ಅಲ್ಕೆಬುಲಾನದ ಹೃದಯದಿಂದ ದಕ್ಷಿಣ ಸುಡಾನಿನ ಅನುಭವ ಕಥನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಕೃತಿ ಕುರಿತು ಮಾತನಾಡಿದರು.

ಪೊಲೀಸ್ ಅಧಿಕಾರಿ ಎಸ್.ಎಲ್, ಚನ್ನಬಸವಣ್ಣನವರು ದಕ್ಷಿಣ ಸುಡಾನಿನ ಅನುಭವವನ್ನು ಹೃದಯದಿಂದ ಬರೆದಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಪ್ರವಾಸ ಕಥನಗಳಿವೆ. ಅವುಗಳು ಮನರಂಜನೆಯಿಂದ ಕೂಡಿವೆ. ಆದರೆ, ಚನ್ನಬಸವಣ್ಣನವರ ಆಫ್ರಿಕಾದ ಅನುಭವ ಕಥನ ಭಯಾನಕ ಮತ್ತು ರೋಚಕತೆಯಿಂದ ಕೂಡಿದೆ. ಸಮಸ್ಯೆಯನ್ನು ಆಹ್ವಾನಿಸಿಕೊಂಡು ಕರ್ತವ್ಯ ನಿರ್ವಹಿಸಿ ಆ ಅನುಭವವನ್ನು ದಾಖಲು ಮಾಡಿರುವುದು ಕನ್ನಡದ ಹೆಮ್ಮೆ ಎಂದರು.

ಅಧಿಕಾರಕ್ಕೆ ಕೊನೇ ಬರಬಹುದು. ಅಕ್ಷರಕ್ಕೆ ಅಳಿವಿಲ್ಲ. 2500 ವರ್ಷಗಳ ಹಿಂದೆ ವ್ಯಾಸ, ಮಹರ್ಷಿ ವಾಲ್ಮೀಕಿ ಬರೆದ ಮಹಾಕಾವ್ಯಗಳು ನಮ್ಮ ಕಣ್ಣ ಮುಂದಿವೆ. ನೆಲ-ಜಲ, ಬೆಟ್ಟ-ಗುಡ್ಡಗಳಿಗೆ ಹೆಸರಿಟ್ಟಿದ್ದೇವೆ. ಎಲ್ಲದರ ಮೇಲೆ ಪರಿಣಾಮ ಬೀರಿವೆ. ಹಾಗಾಗಿಯೇ ಗದಗಿನ ಕೋಳಿವಾಡದ ಕುಮಾರವ್ಯಾಸನ ಕಾವ್ಯವನ್ನು ಹಾರ್ವರ್ಡ್ ವಿವಿ ಪ್ರಕಟಿಸುತ್ತಿದೆ ಎಂದು ಅವರು ಹೇಳಿದರು.


ಪೊಲೀಸರು, ವೈದ್ಯರು ಸೇರಿ ಎಲ್ಲಾ ಕ್ಷೇತ್ರಗಳ ಜನರು ಬರೆಯಬೇಕು. ಲೇಖಕರ ಅನುಭವ ಮೇಲ್ಪಂಕ್ತಿಯದು. ಆಯಾಯ ಕ್ಷೇತ್ರಗಳವರು ಬರೆದಾಗ ಪೂರ್ಣ ಅನುಭವ ಇರುತ್ತದೆ. ಕನ್ನಡದ ಕಾವ್ಯ ಭಾಷಾಂತರ ಕಷ್ಟ. ಅದು ಕನ್ನಡದ ಘನತೆ ಮತ್ತು ಇಂಗ್ಲಿಷ್‌ನ ದೌರ್ಬಲ್ಯವೂ ಹೌದು. ಕುವೆಂಪು, ದಾ.ರಾ. ಬೇಂದ್ರೆ, ಕಾರಂತರಂತಹ ಲೇಖಕರನ್ನು ವರ್ತಮಾನದಲ್ಲಿ ಕಾಣುತ್ತಿಲ್ಲ. ಬಹಳ ಒಳ್ಳೆಯ ಕೃತಿಗಳು ಬರುತ್ತಿಲ್ಲ ಎಂದು ಅವರು ವಿಷಾದಿಸಿದರು.

ಕೃತಿಯ ಲೇಖಕರಾದ ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕ ಎಸ್.ಎಲ್. ಚನ್ನಬಸವಣ್ಣ ಮಾತನಾಡಿ, ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಅಧಿಕಾರಿಯಾಗಿ ವಿಭಿನ್ನವಾದ ಅನುಭವವನ್ನು ನಾನು ಪಡೆದುಕೊಂಡೆ. ಅನುಭವ ಗಂಭೀರವಾಗಿದ್ದರೂ ನೆನಪಿನ ಅಂಚಿಗೆ ಸರಿಯುತ್ತದೆ. ಕೃತಿಯಾದಾಗ ಇತಿಹಾಸದ ಭಾಗವಾಗುತ್ತದೆ. ಈ ಆಶಯದಲ್ಲಿ ಕೃತಿ ರೂಪುಗೊಂಡಿತು ಎಂದು ಹೇಳಿದರು.

ದಕ್ಷಿಣ ಸುಡಾನ್ ಜಗತ್ತಿನ ಅತ್ಯಂತ ಕಿರಿಯ ದೇಶ. ಈಗ ಅದರ ವಯಸ್ಸು 15. ಸುದೀರ್ಘ 36 ವರ್ಷಗಳ ಬಳಿಕ 2011ರಲ್ಲಿ ಸ್ಥಾಪನೆಯಾಯಿತು. ವಿಶ್ವದ ಬೇರೆ ಬೇರೆ ಕಡೆಗಳಿಂದ ಬಂದ 39 ದೇಶಗಳ ಪೊಲೀಸ್ ಅಧಿಕಾರಿಗಳು ಆಫ್ರಿಕಾದ ನೆಲದಲ್ಲಿ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿದ್ದರ ಅನುಭವವೇ ಅಲ್ಕೆಬುಲಾನದ ಹೃದಯದಿಂದ ಕೃತಿ. ಅಲ್ಕೆಬುಲಾನ ಎಂದರೆ ಕಪ್ಪುವರ್ಣೀಯರ ನೆಲ ಎಂದು ಅವರು ತಿಳಿಸಿದರು.

ಕೃತಿಯನ್ನು ನಿವೃತ್ತ ಡಿಐಜಿಪಿ ಡಾ.ಡಿ.ಸಿ. ರಾಜಪ್ಪ ಬಿಡುಗಡೆಗೊಳಿಸಿದರು. ಪ್ರಕಾಶಕ ಅಭಿರುಚಿ ಗಣೇಶ್ ಸ್ವಾಗತಿಸಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ವಂದಿಸಿದರು. ಕ್ರಾಂತಿರಾಜ್ ಒಡೆಯರ್ ನಿರೂಪಿಸಿದರು. ದೇವಾನಂದ ವರಪ್ರಸಾದ್, ಸಿದ್ದು ಬದನವಾಳು ಗೀತೆಗಳನ್ನು ಹಾಡಿದರು.