ಇಂದು ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಬ್ಯಾಡಗಿ ಬಂದ್‌

KannadaprabhaNewsNetwork |  
Published : Jun 05, 2025, 02:07 AM IST
ಫೋಟೊ-04ಬಿವೈಡಿ1- | Kannada Prabha

ಸಾರಾಂಶ

ಪ್ರತಿಭಟನೆ ಹಿನ್ನೆಲೆ ಬ್ಯಾಡಗಿ ಸಂಪೂರ್ಣ ಬಂದ್ ಆಗಲಿದೆ. ಎಲ್ಲ ವ್ಯಾಪಾರ ವಹಿವಾಟು ಬಂದ್ ಆಗಲಿದೆ ಎಂದು ವರ್ತಕರ ಸಂಘ ಘೋಷಣೆ ಮಾಡಿ ಹೋರಾಟಕ್ಕೆ ಬೆಂಬಲ ನೀಡಲಿದೆ.

ಬ್ಯಾಡಗಿ: ಪಟ್ಟಣದಲ್ಲಿ ಹಾದುಹೋಗಿರುವ ಗಜೇಂದ್ರಗಡ- ಸೊರಬ ರಾಜ್ಯ ಹೆದ್ದಾರಿ- 36(ಮುಖ್ಯರಸ್ತೆ) ಅಗಲೀಕರಣ ವಿಳಂಬ ಹಿನ್ನೆಲೆ ಜೂ. 5ರಿಂದ ಅಗಲೀಕರಣ ಹೋರಾಟ ಸಮಿತಿಯು ಗುರುವಾರ ವಿವಿಧ ಸಂಘಟನೆಗಳು ಪಟ್ಟಣದ ಬಂದ್‌ಗೆ ಕರೆ ನೀಡಿವೆ. ಅದೇ ರೀತಿ ಅನಿರ್ದಿಷ್ಟಾವಧಿವರೆಗೆ ಹೋರಾಟ ಆರಂಭಿಸಲಿದ್ದು, ಹೀಗಾಗಿ ಹೋರಾಟದ ಕಾವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.ಸುಗಮ ಸಂಚಾರ ಹಾಗೂ ಪಟ್ಟಣದ ಜನತೆಯ ಹಿತ ಕಾಪಾಡುವ ನಿಟ್ಟಿನಲ್ಲಿ ಮುಖ್ಯರಸ್ತೆ ಅಗಲೀಕರಣ ಅನಿವಾರ‍್ಯ. ಆದರೆ ಮುಖ್ಯರಸ್ತೆಯಲ್ಲಿನ ಕೆಲವೆ ಕೆಲವು ಜನರು ಮಾಡುತ್ತಿರುವ ವಿರೋಧದಿಂದ ಅಗಲೀಕರಣ ಗಗನಕುಸುಮವಾಗಿ ಉಳಿದಿದೆ. ಈ ಹಿನ್ನೆಲೆ ಗುರುವಾರದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಸಿದ್ದೇಶ್ವರ ದೇವಸ್ಥಾನ ಮೆರವಣಿಗೆ: ಗುರುವಾರ ಬೆಳಗ್ಗೆ 10 ಗಂಟೆಗೆ ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಶುರುವಾಗಲಿದೆ. ಅಲ್ಲಿಂದ ಮೆರವಣಿಗೆ ಎಪಿಎಂಸಿ ರಸ್ತೆ, ಹಳೆ ಪುರಸಭೆ ಹಾಗೂ ಮುಖ್ಯರಸ್ತೆಯಲ್ಲಿ ಸಾಗಿ ಗಜಾನನ ಬ್ಯಾಂಕ್ ಎದುರು ಹಾಕಲಾಗಿರುವ ವೇದಿಕೆಗೆ ಸಾಗಿ ಅಲ್ಲಿಂದ ನಿರಂತರವಾಗಿ ಅನಿರ್ದಿಷಾವಧಿವರೆಗೆ ಧರಣಿ ಆರಂಭವಾಗಲಿದೆ.14 ವರ್ಷಗಳ ನಿರಂತರ ಹೋರಾಟ: ಸಾರ್ವಜನಿಕರ ಪಾಲಿಗೆ ನರಕವಾಗಿ ಪರಿಣಮಿಸಿರುವ ಮುಖ್ಯರಸ್ತೆ ಅಗಲೀಕರಣ 14 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಹಲವು ಬಾರಿ ಬ್ಯಾಡಗಿ ಬಂದ್, ಕತ್ತೆ ಮೆರವಣಿಗೆ, ಉಪವಾಸ ಹೋರಾಟ, ಧರಣಿ, ಎಮ್ಮೆ ಹೋರಾಟ, ಸೇರಿದಂತೆ ಹಲವು ಹೋರಾಟಗಳನ್ನು ಮಾಡಲಾಗಿದೆ. ಇಷ್ಟಾದರೂ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಅಗಲೀಕರಣ ಇನ್ನುವರೆಗೂ ಸಾಕಾರಗೊಂಡಿಲ್ಲ.ಹಲವು ಸಂಘಗಳ ಸಂಪೂರ್ಣ ಬೆಂಬಲ: ಗುರುವಾರದ ಪ್ರತಿಭಟನೆಗೆ ತಾಲೂಕಿನ ರೈತ ಸಂಘ, ಆಟೋ ಚಾಲಕರ ಸಂಘ, ಟ್ಯಾಕ್ಸಿ ಚಾಲಕರ ಮಾಲೀಕರ ಸಂಘ, ಉಪ್ಪಾರ ಸಮಾಜ, ಬಿಜೆಪಿ, ಕಾಂಗ್ರೆಸ್, ಹಾಗೂ ಜೆಡಿಎಸ್ ಪಕ್ಷಗಳು, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ, ಪಟ್ಟಸಾಲಿ ನೇಕಾರ ಸಮಾಜ, ಮುದ್ರಣಕಾರರ ಸಂಘ, ಕರವೇ, ವಾಲ್ಮೀಕಿ ಸಮಾಜ, ಲಾರಿ ಟ್ರಾನ್ಸ್‌ಪೋರ್ಟ್‌, ದೇವಾಂಗ ಸಮಾಜ, ಮಾಜಿ ಸೈನಿಕರ ಸಂಘ, ಪರಿಸರಸ್ನೇಹಿ ಬಳಗ, ವರ್ತಕರ ಸಂಘ, ನ್ಯಾಯವಾದಿಗಳ ಸಂಘ ಸೇರಿದಂತೆ ಹಲವು ಸಂಘಗಳು ಪ್ರತಿಭಟನೆಗೆ ಸಾಥ್ ನೀಡಲಿವೆ.ರಸ್ತೆ ಸಂಚಾರ ಬಂದ್: ಪಟ್ಟಣದ ಮುಖ್ಯರಸ್ತೆಯಲ್ಲಿಯೆ ಪ್ರತಿಭಟನೆ ಹಾಗೂ ಧರಣಿ ನಡೆಯುತ್ತಿರುವ ಹಿನ್ನೆಲೆ ಹೋರಾಟ ಮುಗಿಯುವರೆಗೆ ಪಟ್ಟಣಕ್ಕ ಬರುವ ವಾಹನಗಳ ಸಂಚಾರ ದುಸ್ತರವಾಗಲಿದೆ. ಸುಭಾಷ ಸರ್ಕಲ್ ಹಾಗೂ ಹಳೆ ಪುರಸಭೆ ಬಳಿ ಸಹ ಹೋರಾಟ ನಡೆಯುತ್ತಿರುವ ಕಾರಣ ಕದರಮಂಡಲಗಿ ರಸ್ತೆ ಮೂಲಕವೇ ಬಸ್ ಹಾಗೂ ವಾಹನ ಸಂಚಾರ ಮಾಡಬೇಕಿದೆ. ಇದರಿಂದ ಮೋಟೆಬೆನ್ನೂರು, ಕಾಕೋಳ, ಮಾರ್ಗದ ಸಂಚಾರ ಬಂದ್ ಆಗಲಿದೆ.ಬ್ಯಾಡಗಿ ಬಂದ್: ಪ್ರತಿಭಟನೆ ಹಿನ್ನೆಲೆ ಬ್ಯಾಡಗಿ ಸಂಪೂರ್ಣ ಬಂದ್ ಆಗಲಿದೆ. ಎಲ್ಲ ವ್ಯಾಪಾರ ವಹಿವಾಟು ಬಂದ್ ಆಗಲಿದ್ದು ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಯಾವುದೇ ವ್ಯಾಪಾರ, ವಹಿವಾಟು ನಡೆಸುವುದಿಲ್ಲ ಎಂದು ವರ್ತಕರ ಸಂಘ ಘೋಷಣೆ ಮಾಡಿ ಹೋರಾಟಕ್ಕೆ ಬೆಂಬಲ ನೀಡಲಿದೆ. ಇದರೊಟ್ಟಿಗೆ ಪಟ್ಟಣದಲ್ಲಿನ ಸರ್ಕಾರಿ ಖಾಸಗಿ ಶಾಲಾ- ಕಾಲೇಜುಗಳಿಗೂ ಶಿಕ್ಷಣ ಇಲಾಖೆ ರಜೆ ಘೋಷಣೆ ಮಾಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ