ಬ್ಯಾಡಗಿ: ಗಜೇಂದ್ರಗಡ- ಸೊರಬ ರಾಜ್ಯ ಹೆದ್ದಾರಿ- 136(ಪಟ್ಟಣದ ಮುಖ್ಯರಸ್ತೆ) ಅಗಲೀಕರಣ ಅಗುವ ವರೆಗೂ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಅನಿರ್ದಿಷ್ಟಾವಧಿವರೆಗೂ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗುವುದು. ಅಲ್ಲದೇ ಜೂ. 5ರಿಂದ ಆರಂಭವಾಗುವ ಬ್ಯಾಡಗಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಸಮಸ್ತ ವ್ಯಾಪಾರಸ್ಥರು ಪಾಲ್ಗೊಳ್ಳುವುದಾಗಿ ಮಾಜಿ ಶಾಸಕ ಹಾಗೂ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಘೋಷಿಸಿದರು.
ಬ್ಯಾಡಗಿ ಖ್ಯಾತಿ ಹಾಳು: ಪುರಸಭೆ ಸದಸ್ಯ, ವರ್ತಕ ಬಸವರಾಜ ಛತ್ರದ ಮಾತನಾಡಿ, ನನೆಗುದಿಗೆ ಬಿದ್ದಿರುವ ಮುಖ್ಯರಸ್ತೆ ಅಗಲೀಕರಣದಿಂದ ಬ್ಯಾಡಗಿಯ ಖ್ಯಾತಿ ಕೂಡ ಮಣ್ಣುಪಾಲಾಗುತ್ತಿದೆ. ನಮ್ಮ ತಾಳ್ಮೆ ಪರೀಕ್ಷಿಸಲಾಗುತ್ತಿದೆ. ಇನ್ನು ಮುಂದೆ ಮುಖ್ಯರಸ್ತೆ ಅಗಲೀಕರಣ ವಿಚಾರದಲ್ಲಿ ಸಂಧಾನ, ಸಭೆಗಳ ಪ್ರಶ್ನೆಯೇ ಇಲ್ಲ. ಹೋರಾಟದ ರೂಪುರೇಷೆಯೇ ಬದಲಾಗಲಿದೆ ಎಂದರು.ವರ್ತಕ ಬಾಲಚಂದ್ರ ಪಾಟೀಲ ಮಾತನಾಡಿ, ಅಗಲೀಕರಣ ಹೋರಾಟದಲ್ಲಿ 2 ದಿನ ಕೂಗಿ ಹೋಗುತ್ತಾರೆ ಎಂದು ಅಸಡ್ಡೆ ಹಾಗೂ ಹಗುರವಾಗಿ ಮಾತನಾಡುತ್ತಿರುವುದು ನಮ್ಮ ಕಿವಿಗೆ ಬಿದ್ದಿದೆ. ಹೋರಾಟಗಾರರ ತಾಳ್ಮೆ ಪರೀಕ್ಷಿಸಬೇಡಿ. ಮುಖ್ಯರಸ್ತೆ ನಿವಾಸಿಗಳು ಅರಿತುಕೊಂಡು ಸ್ವಯಂಪ್ರೇರಣೆಯಿಂದ ತೆರವುಗೊಳಿಸಿಕೊಂಡರೆ ಸರಿ. ಇಲ್ಲದಿದ್ದರೆ ಪ್ರತಿಭಟನೆ ಮೂಲಕ ಉತ್ತರವನ್ನು ನೀಡಲಿದ್ದೇವೆ ಎಂದರು.
ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಶಾಸಕರೊಂದಿಗೆ ರಾಜಿ ಸಂಧಾನದ ನಾಟಕವಾಗಿ ಅವರನ್ನೂ ಮೋಸದ ಜಾಲಕ್ಕೆ ಬೀಳಿಸಿದ್ದೀರಿ. ಅಗಲೀಕರಣ ವಿರೋಧಿಗಳಿಗೆ ಇನ್ನೂ ಕಾಲ ಮಿಂಚಿಲ್ಲ. ಇನ್ನಾದರೂ ಬದಲಾಗಿ. ಸ್ವಯಂಪ್ರೇರಿತರಾಗಿ ಸರ್ಕಾರದ ನಿಯಮಾನುಸಾರ ಅಗಲೀಕರಣಕ್ಕೆ ಸಹಕರಿಸಬೇಕು. ಇಲ್ಲದಿದ್ದರೆ ನಮ್ಮ ಪ್ರತಿರೋಧ ಎದುರಿಸುವಂತೆ ಎಚ್ಚರಿಸಿದರು.ಮುಖ್ಯರಸ್ತೆ ಅಗಲೀಕರಣಕ್ಕೆ ಬಿಜೆಪಿ ಬೆಂಬಲ: ಶಿವಯೋಗಿಬ್ಯಾಡಗಿ: ಮುಖ್ಯರಸ್ತೆ ಅಗಲೀಕರಣಕ್ಕಾಗಿ ಜೂ. 5ರಿಂದ ಅಗಲೀಕರಣ ಹೋರಾಟ ಸಮಿತಿ ಹಮ್ಮಿಕೊಂಡಿರುವ ಬ್ಯಾಡಗಿ ಪಟ್ಟಣ ಬಂದ್ ಹಾಗೂ ಅನಿರ್ದಿಷ್ಟಾವಧಿ ಹೋರಾಟಕ್ಕೆ ಬಿಜೆಪಿ ತಾಲೂಕು ಮಂಡಳದ ವತಿಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಪಕ್ಷದ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯರಸ್ತೆ ಅಗಲೀಕರಣ ಮಾಡುವ ನಿಟ್ಟಿನಲ್ಲಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ನಿರಂತರವಾಗಿ ಶ್ರಮಿಸಿದ್ದಾರೆ. ಆದರೆ ಅಗಲೀಕರಣ ಇನ್ನೇನು ಸಾಕಾರವಾಗಲಿದೆ ಎನ್ನುವ ಸಮಯದಲ್ಲಿ ಅಧಿಕಾರ ಅವಧಿ ಮುಗಿದು ಅಗಲೀಕರಣ ಸಾಧ್ಯವಾಗಲಿಲ್ಲ ಎನ್ನುವುದು ಬೇಸರದ ಸಂಗತಿ. ಈ ಬಾರಿ ಸಮಿತಿ ಹಮ್ಮಿಕೊಂಡಿರುವ ಹೋರಾಟಕ್ಕೆ ಸಹಕರಿಸಲಿದ್ದೇವೆ ಎಂದರು.
ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ಮಾತನಾಡಿ, ಈ ಹಿಂದೆ ನಡೆದ ಹಲವು ಹೋರಾಟಗಳಲ್ಲಿ ನಾವು ಬಿಜೆಪಿಯ ಪುರಸಭೆ ಸದಸ್ಯರೆಲ್ಲರೂ ಭಾಗಿಯಾಗಿದ್ದು, ಅಗಲೀಕರಣ ವಿಳಂಬ ನೀತಿಯನ್ನು ಖಂಡಿಸಿದ್ದೇವೆ. ಬಿಜೆಪಿಯ ಒಟ್ಟು 17 ಪುರಸಭೆ ಸದಸ್ಯರು ರಾಜೀನಾಮೆ ನೀಡಿದಲ್ಲಿ ಅಗಲೀಕರಣಕ್ಕೆ ಅನುಕೂಲವಾಗಲಿದೆ ಎಂದಾದರೆ ಈ ಹಿಂದೆ ಹೇಳಿದಂತೆ ನಾವು ಸಾಮೂಹಿಕ ರಾಜೀನಾಮೆ ನೀಡಲು ಸಿದ್ಧ ಎಂದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಛತ್ರದ, ವಿಜಯ್ ಭಾರತ ಬಳ್ಳಾರಿ ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಬಿಜೆಪಿ ತಾಲೂಕು ಉಪಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ, ಸುರೇಶ ಅಸಾದಿ, ಸುರೇಶ ಉದ್ಯೋಗಣ್ಣನವರ, ವಿಜಯ ಮಾಳಗಿ, ನಾಗರಾಜ ಹಾವನೂರ, ಪ್ರದೀಪ ಜಾಧವ, ಶಿವಯೋಗಿ ಗಡಾದ ಮಂಜುನಾಥ ಜಾಧವ, ಗಣೇಶ ಅಚಲಕರ, ಪರಶುರಾಮ ಉಜನಿಕೊಪ್ಪ, ಪ್ರಶಾಂತ್ ಯಾದವಾಡ, ಕುಮಾರ ಮಾಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.