ಮಂಡ್ಯದಲ್ಲಿ ಬಿವೈವಿ ಭತ್ತ ನಾಟಿ, ಮುದ್ದೆ ಊಟ

KannadaprabhaNewsNetwork | Published : Mar 5, 2025 12:31 AM

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಂಗಳವಾರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೊತ್ತತ್ತಿ ಗ್ರಾಮದಲ್ಲಿ ಭತ್ತ ನಾಟಿ ಮಾಡಿದರು. ಬಳಿಕ ರೈತರ ಜೊತೆಯೇ ಕುಳಿತು ಸಾಮೂಹಿಕ ಭೋಜನ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಂಗಳವಾರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೊತ್ತತ್ತಿ ಗ್ರಾಮದಲ್ಲಿ ಭತ್ತ ನಾಟಿ ಮಾಡಿದರು. ಬಳಿಕ ರೈತರ ಜೊತೆಯೇ ಕುಳಿತು ಸಾಮೂಹಿಕ ಭೋಜನ ಸ್ವೀಕರಿಸಿದರು.

ಕೊತ್ತತ್ತಿ ಗ್ರಾಮದ ಸುಕೇಂದ್ರ ಹಾಗೂ ಶಿವಬಸಪ್ಪ ಅವರಿಗೆ ಸೇರಿದ 2 ಎಕರೆ ಗದ್ದೆಯಲ್ಲಿ ಭತ್ತ ನಾಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶ್ವೇತ ವಸ್ತ್ರಧರಿಸಿ ಬಂದಿದ್ದ ವಿಜಯೇಂದ್ರ ಅವರು ಪಂಚೆಯನ್ನು ಸೊಂಟಕ್ಕೆ ಕಟ್ಟಿ, ಹಸಿರು ಟವೆಲ್‌ ಅನ್ನು ತಲೆಗೆ ಸುತ್ತಿಕೊಂಡು ಮಧ್ಯಾಹ್ನ ರೈತ ಮಹಿಳೆಯರೊಂದಿಗೆ ಭತ್ತದ ಪೈರುಗಳನ್ನು ಹಿಡಿದು ನಾಟಿ ಮಾಡಿದರು. ಈ ವೇಳೆ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಸತೀಶ್ ರೆಡ್ಡಿ, ಎಸ್.ಸಚ್ಚಿದಾನಂದ, ಡಾ.ಸಿದ್ದರಾಮಯ್ಯ, ಡಾ.ಎನ್.ಎ.ಸ್.ಇಂದ್ರೇಶ್ ಕೂಡ ಬೆಂಬಲ ನೀಡಿದರು.

ನಾಟಿ ಮಾಡಿದ ಬಳಿಕ ರೈತರ ಜೊತೆಯೇ ಕುಳಿತು ಅವರೆಕಾಳು ಕೂಟು, ಮುದ್ದೆ, ಅನ್ನ, ಸಾಂಬಾರ್, ಮೈಸೂರು ಪಾಕ್ ಸೇವಿಸಿದರು.

-ಬಾಕ್ಸ್‌-

ವಿಜಯೇಂದ್ರಗೆ ಬೃಹತ್‌ ಕಬ್ಬಿನ ಹಾರ

ಭತ್ತ ನಾಟಿ ಕಾರ್ಯಕ್ರಮಕ್ಕೆ ಆಗಮಿಸಿದ ವಿಜಯೇಂದ್ರ ಅವರನ್ನು ಕ್ರೇನ್ ಮೂಲಕ ಬೃಹತ್ ಕಬ್ಬಿನ ಹಾರ ಹಾಕಿ ಸ್ವಾಗತಿಸಲಾಯಿತು. ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಜಯೇಂದ್ರ ಪೂಜೆ ಸಲ್ಲಿಸಿದರು. ಗ್ರಾಮದಲ್ಲಿ ವಿಜಯೇಂದ್ರ ಅವರ ಮೆರವಣಿಗೆ ಆಯೋಜಿಸಲಾಗಿತ್ತು. ಈ ವೇಳೆ ಖುದ್ದು ಟ್ರ್ಯಾಕ್ಟರ್ ಚಲಾಯಿಸಿ ಬಿಜೆಪಿ ರಾಜ್ಯಾಧ್ಯಕ್ಷ ಸಂಭ್ರಮಿಸಿದರು. ರ್‍ಯಾಲಿಯಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು. ಕ್ರೇನ್ ಮೂಲಕ ಅಲ್ಲಲ್ಲಿ ವಿಜಯೇಂದ್ರ ಅವರಿಗೆ ಪುಷ್ಪವೃಷ್ಟಿ ಮಾಡಲಾಯಿತು. ಬಳಿಕ ಎತ್ತಿನಗಾಡಿ ಏರಿದರು. ಕೊಂಬು ಕಹಳೆ, ವೀರಗಾಸೆ, ಗಾರುಡಿ ಗೊಂಬೆ, ಪೂಜಾ ಕುಣಿತ, ಡೊಳ್ಳು ಕುಣಿತ, ನಾದಸ್ವರ ಸೇರಿ ವಿವಿಧ ಜಾನಪದ ಕಲಾತಂಡಗಳು ಹಾಗೂ ಮಹಿಳೆಯರ ಪೂರ್ಣ ಕುಂಭ ಸ್ವಾಗತದೊಂದಿಗೆ ಕರೆತರಲಾಯಿತು.

Share this article