ಕೋಳಿ ಮಾರಾಟ ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಡೀಸಿ ಸೂಚನೆ

KannadaprabhaNewsNetwork |  
Published : Mar 05, 2025, 12:31 AM IST
4ಎಚ್ಎಸ್ಎನ್17 :  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಯಾವುದೇ ಹಕ್ಕಿ ಜ್ವರ ಪ್ರಕರಣಗಳು ಕಂಡುಬಂದಿಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ. ಆದರೂ ಮುಂಜಾಗ್ರತಾ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪೌಲ್ಟ್ರಿ ಫಾರಂಗಳಲ್ಲಿ ಕರ್ತವ್ಯ ನಿರ್ವಹಿಸುವ ಕಾರ್ಮಿಕರ ಆರೋಗ್ಯದ ಹಿತದೃಷ್ಠಿಯಿಂದ ಸುರಕ್ಷತಾ ಸಲಕರಣೆಗಳನ್ನು ನೀಡುವಂತೆ ಮಾಲೀಕರಿಗೆ ತಿಳಿಸಿದರಲ್ಲದೆ, ಪೌಲ್ಟ್ರಿ ಮಾಲೀಕರೆಲ್ಲರಿಗೂ ಅರಿವು ಮೂಡಿಸಿ, ತಮ್ಮ ತಮ್ಮ ಫಾರಂಗಳಲ್ಲಿ ಕಡ್ಡಾಯವಾಗಿ ಜೈವಿಕ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯಲ್ಲಿ ಯಾವುದೇ ಹಕ್ಕಿ ಜ್ವರ ಪ್ರಕರಣಗಳು ಕಂಡುಬಂದಿಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ. ಆದರೂ ಮುಂಜಾಗ್ರತಾ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು ನಗರ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೋಳಿ ಮಾರಾಟ ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರಲ್ಲದೆ, ನಗರಸಭೆ ವತಿಯಿಂದ ಮಾರುಕಟ್ಟೆಗಳಲ್ಲಿ ಫಾಗಿಂಗ್ ಮಾಡಿಸಲು ಕ್ರಮವಹಿಸುವಂತೆ ನಗರಸಭೆ ಆಯುಕ್ತರಿಗೆ ತಿಳಿಸಿದರು.

ಪೌಲ್ಟ್ರಿ ಫಾರಂಗಳಲ್ಲಿ ಕರ್ತವ್ಯ ನಿರ್ವಹಿಸುವ ಕಾರ್ಮಿಕರ ಆರೋಗ್ಯದ ಹಿತದೃಷ್ಠಿಯಿಂದ ಸುರಕ್ಷತಾ ಸಲಕರಣೆಗಳನ್ನು ನೀಡುವಂತೆ ಮಾಲೀಕರಿಗೆ ತಿಳಿಸಿದರಲ್ಲದೆ, ಪೌಲ್ಟ್ರಿ ಮಾಲೀಕರೆಲ್ಲರಿಗೂ ಅರಿವು ಮೂಡಿಸಿ, ತಮ್ಮ ತಮ್ಮ ಫಾರಂಗಳಲ್ಲಿ ಕಡ್ಡಾಯವಾಗಿ ಜೈವಿಕ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ತಿಳಿಸಿದರು.

ಜಿಲ್ಲೆಯಲ್ಲಿರುವ ಕೋಳಿ ಫಾರಂಗಳ ಸಂಖ್ಯೆ, ಮಾಲೀಕರ ವಿಳಾಸ, ಕೋಳಿಗಳ ಸಂಖ್ಯೆ ಇತ್ಯಾದಿ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಸಿದ್ಧಪಡಿಸಿ ಇಟ್ಟುಕೊಳ್ಳುವಂತೆ ಪಶುಪಾಲನ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರಲ್ಲದೆ, ಜಿಲ್ಲೆಗಳಲ್ಲಿರುವ ಪಕ್ಷಿಧಾಮಗಳು, ವಲಸೆ ಹಕ್ಕಿಗಳು ಕಂಡುಬರುವ ಸ್ಥಳಗಳು, ಕೆರೆ, ಹೊಂಡ ಇತ್ಯಾದಿಗಳ ವಿವರವನ್ನು ಸಿದ್ಧಪಡಿಸಿಕೊಂಡು, ಕಣ್ಗಾವಲು ಕಾರ್ಯ ನಡೆಸುವಂತೆ ತಿಳಿಸಿದರು.

ಹಕ್ಕಿ ಜ್ವರ ಅಥವಾ ಕೋಳಿ ಶೀತ ಜ್ವರ ಎಚ್೫ಎನ್೧ ವೈರಸ್‌ನಿಂದ ಹರಡುವ ರೋಗ, ಇದು ಟರ್ಕಿ ಕೋಳಿ, ಗಿನಿ ಕೋಣ, ಬಾತು ಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವ ಕಾಯಿಲೆ. ಇದೊಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಸಾಮಾನ್ಯವಾಗಿ ಹಕ್ಕಿಗಳಿಂದ ಹಕ್ಕಿಗಳಿಗೆ ಹರಡುತ್ತದೆ. ಕೆಲವೊಮ್ಮೆ ರೋಗ ಪೀಡಿತ ಹಕ್ಕಿಗಳ ಸಂಪರ್ಕದಿಂದ ಮನುಷ್ಯರಲ್ಲೂ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.ರೋಗ ಪೀಡಿತ ಕೋಳಿ ಅಥವಾ ಹಕ್ಕಿಗಳ ಮಾಂಸವನ್ನು ಸರಿಯಾಗಿ ಬೇಯಿಸದೇ ತಿನ್ನುವುದರಿಂದ, ಸೋಂಕಿರುವ ಹಸಿ ಮೊಟ್ಟೆಗಳನ್ನು ಸೇವಿಸುವುದರಿಂದ ಹಾಗೂ ಕೋಳಿಗಳ ಹಿಪ್ಪೆಗಳು, ಮನುಷ್ಯರು ಕುಡಿಯುವ ನೀರಿನೊಂದಿಗೆ ಬೆರೆತು ಕಲುಷಿತಗೊಂಡಾಗ ಈ ಕಾಯಿಲೆ ಹರಡುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಗಾಳಿಯ ಮೂಲಕವೂ ಮನುಷ್ಯರಿಗೆ ಹರಡುತ್ತದೆ ಎಂದರು.ರೋಗ ಲಕ್ಷಣಗಳು:

ಹಕ್ಕಿ ಜ್ವರದ ಲಕ್ಷಣಗಳು ಸಾಮನ್ಯವಾಗಿ ಎಚ್೧ಎನ್೧ ಜ್ವರದ ಲಕ್ಷಣಗಳಂತೆಯೇ ಇರುತ್ತವೆ, ಜ್ವರ ಮತ್ತು ಕೆಮ್ಮು, ಶೀತ, ತಲೆನೋವು, ಗಂಟಲು ಕೆರೆತ, ನೆಗಡಿ, ಸ್ನಾಯುಗಳಲ್ಲಿ ನೋವು, ಆಯಾಸ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಾಂತಿ ಮತ್ತು ಭೇದಿಯೂ ಆಗಬಹುದು ಉಸಿರಾಟದಲ್ಲಿ ತೊಂದರೆ ಕಾಣಿಸಬಹುದು.ಮುನ್ನೆಚ್ಚರಿಕೆ ಕ್ರಮಗಳು:

ಹಕ್ಕಿಜ್ವರ ಪೀಡಿತ ಪ್ರದೇಶಗಳಲ್ಲಿ ನಾಗರಿಕರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಹಕ್ಕಿ ಜ್ವರದ ಸೋಂಕು ಹರಡದಂತೆ ತಡೆಯಬಹುದು, ಶಂಕಿತ ಹಕ್ಕಿ ಜ್ವರ ಪೀಡಿತ ಕೋಳಿಗಳು, ಹಕ್ಕಿಗಳು ಹಾಗೂ ಬಾತುಕೋಳಿಗಳ ಸಂಪರ್ಕಕ್ಕೆ ಬರದಂತೆ ಎಚ್ಚರ ವಹಿಸುವುದು, ಬೇರೆಯವರ ಮನೆಗೆ ಭೇಟಿ ನೀಡಿದಾಗ ಅಲ್ಲಿರುವ ಶಂಕಿತ ಹಕ್ಕಿಜ್ವರ ಪೀಡಿತ ಕೋಳಿ ಅಥವಾ ಹಕ್ಕಿಗಳನ್ನು ಸ್ಪರ್ಶಿಸಬಾರದು, ಹಕ್ಕಿ ಜ್ವರ ಶಂಕಿತ ಅಥವಾ ಪೀಡಿತ ಫಾರಂಗಳಿಗೆ ಭೇಟಿ ನೀಡಬಾರದು.ಹಕ್ಕಿಜ್ವರ ಹರಡಿರುವ ಫಾರಂನ ವಾತಾವರಣದ ಸಂಪರ್ಕಕ್ಕೆ ಬಂದಲ್ಲಿ ತಕ್ಷಣ ತಮ್ಮ ಕೈಕಾಲು ಮತ್ತು ಮುಖವನ್ನು ತೊಳೆದುಕೊಂಡು ಬಟ್ಟೆಯನ್ನು ಬದಲಾಯಿಸಿಕೊಳ್ಳುವುದು ಮತ್ತು ಮುಂದಿನ ನಾಲ್ಕು ದಿನಗಳ ವರೆಗೆ ತಮ್ಮ ದೇಹದ ಉಷ್ಣಾಂಶದಲ್ಲಾಗುವ ಬದಲಾವಣೆಗಳನ್ನು ಗಮನಿಸುವುದು. ಒಂದು ವೇಳೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು. ಸೊಂಕಿರುವ ಪ್ರದೇಶದಲ್ಲಿ ಯಾವುದೇ ವಸ್ತುವನ್ನು ಮುಟ್ಟಿದಾಗ ಯಾವಾಗಲೂ ಕೈಗಳನ್ನು ಸೋಪಿನಿಂದ ತೊಳೆಯಬೇಕು ಎಂದರು.

ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ೭೦ ಡಿಗ್ರಿ ಸೆಂಟಿಗ್ರೇಡ್ ಗೂ ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ನಂತರವೇ ಸೇವಿಸಬೇಕು, ಅಡುಗೆಗಾಗಿ ಕೋಳಿ ಮಾಂಸವನ್ನು ಸಿದ್ಧಪಡಿಸಿದ ನಂತರ ಕೈಗಳನ್ನು ನಂಜು ನಾಶಕದಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು, ಸೋಂಕಿತ ಹಸಿ ಮೊಟ್ಟೆಯನ್ನು ಸೇವಿಸಬಾರದು, ಹಕ್ಕಿ ಜ್ವರ ಸಾಂಕ್ರಾಮಿಕ ರೋಗ ಮುನ್ನೆಚ್ಚರಿಕೆಯಿಂದ ತಡೆಯಬಲ್ಲ ಕಾಯಿಲೆ ಆದ್ದರಿಂದ ಕಾಯಿಲೆಯ ಲಕ್ಷಣಗಳು ಕೋಳಿಗಳಲ್ಲಿ ಕಾಣಿಸಿಕೊಂಡ ಕೂಡಲೇ ಹತ್ತಿರದ ಮಾಹಿತಿ ಕೇಂದ್ರ ಅಥವಾ ಪಶು ವೈದ್ಯಕೀಯ ಸಂಸ್ಥೆಗೆ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು. ಡಾ.ಎಸ್ ಸುಂದರೇಶನ್, ಮುಖ್ಯ ಪಶುವೈದ್ಯಾಧಿಕಾರಿಗಳು, ಉಪನಿರ್ದೇಶಕರ ಕಚೇರಿ, ಪಶುಪಾಲನಾ ಇಲಾಖೆ, ಹಾಸನ, ಇವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದೆ ಮೊ.ಸಂ ೮೦೭೩೭೦೫೯೭೭ ಸಂಪರ್ಕಿಸಬಹುದಾಗಿದೆ.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಡಾ. ರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅನಿಲ್ ಕುಮಾರ್, ಕುಕ್ಕುಟೋಧ್ಯಮ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಹರೀಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''