ಸೋಮವಾರಪೇಟೆ: ಸಿ ಆ್ಯಂಡ್ ಡಿ ಮತ್ತು ಸೆಕ್ಷನ್-೪ ಸಮಸ್ಯೆ ರಾಜಕೀಯ ರಹಿತ ಹೋರಾಟಗಳ ಮೂಲಕ ಮತ್ತು ಪಕ್ಷಾತೀತವಾಗಿ ಬಗೆಹರಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹೇಳಿದರು.
ಸಿ ಆ್ಯಂಡ್ ಡಿ ಮತ್ತು ಸೆಕ್ಷನ್-೪ ಸಮಸ್ಯೆ ಬಹಳ ಹಿಂದಿನದು, ಆಗಿನ ಕಾಲದಲ್ಲಿ ತಾಲೂಕಿನವರೇ ಮುಖ್ಯಮಂತ್ರಿಗಳು, ಅರಣ್ಯ ಸಚಿವರು, ಇನ್ನು ಬೇರೆ ಬೇರೆ ಸಚಿವರುಗಳು ಇದ್ದರು. ಆಗ ಅವರು ಮನಸ್ಸು ಮಾಡಿದ್ದರೆ, ಒಂದು ಪೆನ್ಸಿಲ್ನಲ್ಲಿ ಬರೆದು ಸರಿಪಡಿಸ ಬಹುದಿತ್ತು. ಈಗ ಕಾನೂನುಗಳು ಬಲಿಷ್ಠವಾಗಿರುವ ಕಾರಣ ಒಂದಷ್ಡು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ರೈತರು ಆತಂಕ ಪಡುವ ಆಗತ್ಯವಿಲ್ಲ. ಸರ್ಕಾರ ರೈತಪರವಾಗಿದೆ ಎಂದು ಭರವಸೆ ನೀಡಿದರು.
ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಲ್ಲಿ ಸಾಕಷ್ಟು ಕಾಮಗಾರಿಗಳ ಬಗ್ಗೆ ಈ ಹಿಂದೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಶಾಸಕರ ಗಮನಕ್ಕೆ ತರಲಾಗಿತ್ತು. ಶಾಂತಳ್ಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಭಾಗವಾಗಿ ಮಲ್ಲಳ್ಳೀ ಜಲಪಾತಕ್ಕೆ ಕೇಬಲ್ ಕಾರ್ ಮಾಡಲು ಮನವಿ ಮಾಡಲಾಗಿತ್ತು. ಗ್ರಾಮೀಣ ಭಾಗಗಳ ಅಭಿವೃದ್ಧಿಗಾಗಿ ‘೧೦೦ ಹಳ್ಳಿ ೧೦೦ ರಸ್ತೆ’ ಹೆಸರಿನಲ್ಲಿ ಮನವಿ ಪತ್ರವನ್ನು ಶಾಸಕರಿಗೆ ಸಲ್ಲಿಸಲಾಗಿತ್ತು. ಇಲ್ಲಿಯವರೆಗೆ ಕೆಲವೊಂದು ಕಾಮಗಾರಿ ಪೂರ್ಣಗೊಳಿಸಿದ್ದು, ಕಾಮಗಾರಿ ನಡೆಯುತ್ತಿದೆ. ಪ್ರವಾಸೋಧ್ಯಮ ಅಭಿವೃದ್ಧಿ, ಒಳಾಂಗಣ ಕ್ರೀಡಾಂಗಣ ನಿರ್ಮಾಣ, ಶತಮಾನೋತ್ಸವ ಭವನ ಮುಂದುವರಿದ ಕಾಮಗಾರಿಗೆ ಅನುದಾನ, ಕುಂದಳ್ಳಿ, ಕೊಡ್ಲಿಪೇಟೆ ರಸ್ತೆ ಕಾಮಗಾರಿಗೆ ಅನುದಾನ, ನಾಡ್ನಳ್ಳಿ ಸೇತುವೆ ನಿರ್ಮಾಣ, ಮಲ್ಲಳ್ಳಿಯಲ್ಲಿ ಕೇಬಲ್ ಕಾರು ಯೋಜನೆ, ಆನೆ ಮಾನವ ಸಂಘರ್ಷ ತಡೆಗೆ ಶಾಶ್ವತ ಪರಿಹಾರದ ಬಗ್ಗೆ ಶಾಸಕರು ತಿಳಿಸಬೇಕೆಂದರು. ಮಡಿಕೇರಿ, ದೋಣಿಗಲ್ ಮಾರ್ಗದಲ್ಲಿ ೯೬ ಕಿ.ಮೀ. ರಸ್ತೆ ಕಾಮಗಾರಿ ೧೩೦೦ ಕೋಟಿ ರು.ಗಳ ವೆಚ್ಚದಲ್ಲಿ ನಡೆಯಲಿದ್ದು ಕೊಡಗಿನ ಇತಿಹಾಸದಲ್ಲೇ ಅತ್ಯಂತ ದೊಡ್ಡಮಟ್ಟದ ಯೋಜನೆ ಇದಾಗಿದೆ. ಸರ್ಕಾರದ ಸಚಿವ ಸಂಪುಟ ರಸ್ತೆ ನಿರ್ಮಿಸಲು ಅನುಮೋದನೆ ನೀಡಿದೆ. ಈ ಯೋಜನೆಯ ಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ನಿರ್ವಹಿಸಲಿದ್ದು, ಕೇಂದ್ರ ಸರ್ಕಾರದಿಂದ ಕೊಡುಗೆ ಏನೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮಲ್ಲಳ್ಳಿ ಜಲಪಾತದಲ್ಲಿ ಕೇಬಲ್ ಕಾರು ಯೋಜನೆ ಪ್ರಗತಿಯಲ್ಲಿದೆ. ಕುಂದಳ್ಳಿ, ಕೊಡ್ಲಿಪೇಟೆ ರಸ್ತೆ ಕಾಮಗಾರಿಗೆ ಅನುದಾನ ಒದಗಿಸಲಾಗಿದೆ. ಯಡೂರು ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನ ಜಾಗದಲ್ಲಿ ರು. ೯.೨೫ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಲಿದೆ. ಶತಮಾನೋತ್ಸವ ಭವನ ಮುಂದುವರಿದ ಕಾಮಗಾರಿಗೆ ರೂ. ೨ಕೋಟಿ ಅನುದಾನ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ ರು. ೧ ಕೋಟಿ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.ಪರಿಸರ ಸಂರಕ್ಷಣೆ ಅನಿವಾರ್ಯ-ಶಾಸಕ:ಪ್ರವಾಸೋದ್ಯಮಕ್ಕೆ ಪೂರಕವಾಗಿ ಅನುದಾನಗಳನ್ನು ನೀಡಿದರೆ, ಮಲ್ಲಳ್ಳಿ ಜಲಪಾತಕ್ಕೆ ಹೋಗುವ ರಸ್ತೆ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಆಗಲಿದೆ. ಪ್ರವಾಸೋದ್ಯಮದ ಅಭಿವೃದ್ದಿಯ ಜೊತೆಜೊತೆಗೆ, ಪರಿಸರ ಸಂರಕ್ಷಣೆ, ರಸ್ತೆ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಬೇಕಾದ ಅನಿವಾರ್ಯತೆ ಇದೆ ಎಂದು ಶಾಸಕರು ಹೇಳಿದರು.
ಕಳೆದ ಒಂದು ವರ್ಷದಿಂದ ರಾಜ್ಯ ಸರ್ಕಾರ ರೂ. ೫೦ಕೋಟಿ ಮಡಿಕೇರಿ ಕ್ಷೇತ್ರದಲ್ಲಿ ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನೀಡಿದೆ. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ರೂ.೧ಕೋಟಿ ಸರ್ಕಾರ ನೀಡಿದೆ. ಈಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೊಷಣೆಯಾಗಿರುವುದರಿಂದ ಇನ್ನೂ ತಾಲ್ಲೂಕಿಗೆ ಒಂದು ಕೋಟಿ ಹಣ ಬರಲಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬಹುದಾಗಿದೆ. ಈಗ ನಡೆದಿರುವ ಕಾಮಗಾರಿಗಳು ಜನರ ಕಣ್ಣು ಮುಂದೆ ಇದೆ. ಮುಂದಿನ ದಿನಗಳ ಉಳಿಕೆ ಕಾಮಗಾರಿಗಳು ಪ್ರಾರಂಭವಾಗಲಿವೆ ಎಂದು ಭರವಸೆ ನೀಡಿದರು.ಸಮಿತಿ ಉಪಾಧ್ಯಕ್ಷ ಕೆ.ಎನ್. ದೀಪಕ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಖಜಾಂಚಿ ತ್ರಿಶೂಲ್, ಕಾನೂನು ಸಲಹೆಗಾರ ಜೀವನ್ ಮತ್ತಿತರರು ಇದ್ದರು.