ಉದ್ಯಮಿಗೆ ಬರೋಬ್ಬರಿ 1.81 ಕೋಟಿ ರು. ವಂಚಿಸಿದ ಸಿಎ

KannadaprabhaNewsNetwork |  
Published : Apr 24, 2026, 03:30 AM ISTUpdated : Apr 24, 2026, 06:16 AM IST
money

ಸಾರಾಂಶ

ನಗರದ ಉದ್ಯಮಿಯೊಬ್ಬರಿಗೆ 1.81 ಕೋಟಿ ರು.ಗೂ ಅಧಿಕ ಹಣ ವಂಚನೆ ಮಾಡಿದ ಆರೋಪದ ಮೇಲೆ ಲೆಕ್ಕಪರಿಶೋಧಕ (ಸಿ.ಎ) ವಿರುದ್ಧ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಬೆಂಗಳೂರು :  ನಗರದ ಉದ್ಯಮಿಯೊಬ್ಬರಿಗೆ 1.81 ಕೋಟಿ ರು.ಗೂ ಅಧಿಕ ಹಣ ವಂಚನೆ ಮಾಡಿದ ಆರೋಪದ ಮೇಲೆ ಲೆಕ್ಕಪರಿಶೋಧಕ (ಸಿ.ಎ) ವಿರುದ್ಧ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಚ್‌ಎಸ್‌ಆರ್ ಲೇಔಟ್ ನಿವಾಸಿಯಾಗಿರುವ ಗೋಪಾಲ್ ಕೆ.ಆರ್‌. ಸಲುಜಾ ಎಂಬುವರು ನೀಡಿದ ದೂರಿನನ್ವಯ ಶೇಷಾದ್ರಿಪುರಂ ನಿವಾಸಿಯಾಗಿರುವ ಚಾರ್ಟರ್ಡ್ ಅಕೌಂಟೆಂಟ್ ರಿಷಿ ಜೈನ್‌ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ದೂರುದಾರರಾದ ಗೋಪಾಲ್ ಅವರು ಮಾನವಶಕ್ತಿ ಸಲಹಾ ಸಂಸ್ಥೆ ನಡೆಸುತ್ತಿದ್ದು, 2008 ರಿಂದ ಇವರ ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸಲು ಶೇಷಾದ್ರಿಪುರದ ನಿವಾಸಿಯಾದ ಚಾರ್ಟರ್ಡ್ ಅಕೌಂಟೆಂಟ್‌ ರಿಷಿ ಆರ್ ಜೈನ್ ಅವರನ್ನು ನೇಮಿಸಿಕೊಂಡಿದ್ದರು. ಇವರ ಸಂಸ್ಥೆಯ ವೃತ್ತಿಪರ ತೆರಿಗೆ ಲೆಕ್ಕಾಚಾರಗಳು, ಫೈಲಿಂಗ್‌ಗಳು ಮತ್ತು ರಿಟರ್ನ್ಸ್ ಇವರೇ ಮಾಡುತ್ತಿದ್ದರು. ಇದಕ್ಕೆ ದೂರುದಾರರು ಶುಲ್ಕವನ್ನು ಪಾವತಿಸುತ್ತಿದ್ದರು. ಈ ತೆರಿಗೆ ವಿಷಯಗಳ ಬಗ್ಗೆ ದೂರುದಾರರಿಗೆ ಹೆಚ್ಚಿನ ಜ್ಞಾನವಿಲ್ಲದ ಕಾರಣ, ಆತನನ್ನು ಸಂಪೂರ್ಣವಾಗಿ ನಂಬಿದ್ದರು. ಫೈಲಿಂಗ್‌ ಮತ್ತು ಪಾವತಿಗಳಿಗೆ ಆತನ ಮೇಲೆಯೇ ಅವಲಂಬಿತರಾಗಿದ್ದರು.

ವಾಟ್ಸ್‌ ಆ್ಯಪ್‌ ಮತ್ತು ಇ-ಮೇಲ್ ಮೂಲಕ  ಸಂವಹನ

ವಾಟ್ಸ್‌ ಆ್ಯಪ್‌ ಮತ್ತು ಇ-ಮೇಲ್ ಮೂಲಕ ಯಾವಾಗಲೂ ದೂರುದಾರರೊಂದಿಗೆ ಸಂವಹನ ನಡೆಸುತ್ತಿದ್ದರು. ಸಿಎ ಅವರ ಸೂಚನೆಗಳ ಆಧಾರದ ಮೇಲೆ ಎಲ್ಲ ಅಗತ್ಯ ದಾಖಲೆಗಳನ್ನು ಒದಗಿಸಿದ್ದರು. 2025 ರ ಜುಲೈನಲ್ಲಿ ಲೆಕ್ಕಪರಿಶೋಧನೆಯ ಸಮಯದಲ್ಲಿ ಅನೇಕ ವ್ಯತ್ಯಾಸಗಳು ಕಂಡುಬಂದಿತ್ತು. ಆದಾಯ ತೆರಿಗೆ, ಜಿಎಸ್‌ಟಿ, ಬ್ಯಾಂಕಿಗೆ ಪಾವತಿಸಿರುವ ನಕಲಿ ಚಲನ್‌ಗಳನ್ನು ನೀಡಿ ದೂರುದಾರರಿಗೆ ಹಂತ ಹಂತವಾಗಿ ಒಟ್ಟು 1.81 ಕೋಟಿ ರು. ವಂಚಿಸಿರುವುದು ಬೆಳಕಿಗೆ ಬಂದಿತ್ತು. ತಾನು ವಂಚನೆಗೊಳಗಾಗಿರುವುದನ್ನು ಅರಿತ ಗೋಪಾಲ್‌ ಅವರು ದೂರು ದಾಖಲಿಸಿದ್ದರು.

ನನ್ನ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ನನಗೆ ತೀವ್ರ ಆರ್ಥಿಕ ನಷ್ಟ ಉಂಟು ಮಾಡಿರುವ ರಿಷಿ ಆರ್ ಜೈನ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉದ್ಯಮಿ ಗೋಪಾಲ್ ಸಲುಜಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅಡ್ಡಮತದಾನ ಮಾಡಿದ 6-7 ಶಂಕಿತ ಶಾಸಕರ ಪಟ್ಟಿ ಇಂದು ವರಿಷ್ಠರಿಗೆ?
26ಕ್ಕೆ ಆಗಲ್ಲ, 27ಕ್ಕೆ ಬಿಡದಿ ರೈತರ ಎದುರೇ ಚರ್ಚೆಗೆ ಬನ್ನಿ: ಡಿಕೆಗೆ ಎಚ್‌ಡಿಕೆ