ರಾಮನಗರ: ರಾಜಕಾರಣಿಗಳು ಹಳ್ಳಿಗಳಿಗೆ ಬಂದಾಗ ರೈತರು ಕಲ್ಲಿನಲ್ಲಿ ಹೊಡೆದೋಡಿಸಿ... ನಮ್ಮ ಶಾಂತಿಯುತ ಹೋರಾಟವನ್ನು ರೈತರ ದೌರ್ಬಲ್ಯ ಅಂತ ಭಾವಿಸಬೇಡಿ. ಅನ್ನದಾತ ದಂಗೆ ಎದ್ದರೆ ಸಚಿವ ಸಂಪುಟದ ಯಾವ ಅನುಮೋದನೆಯೂ ಲೆಕ್ಕಕ್ಕೆ ಇರಲ್ಲ... ರೈತರ ಶಾಪಕ್ಕೆ ಗುರಿಯಾದರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪಶ್ಚಾತ್ತಾಪ ಪಡಬೇಕಾಗುತ್ತೆ...
ರೈತಸಂಘ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ಅನ್ನ ಕೊಡುವ ಭೂಮಿಯನ್ನು ಕಸಿದು ಅಲ್ಲಿ ಕಟ್ಟಡಗಳನ್ನು ಕಟ್ಟಿದರೆ ಏನು ಪ್ರಯೋಜನ. ಸರ್ಕಾರ ನಡೆಸಲು ಹಣ ಬೇಕಿರುವ ಕಾರಣ ರೈತರನ್ನು ಬಲಿ ಕೊಡಲು ಮುಂದಾಗಿದೆ. ರಾಜಕಾರಣಿಗಳು ಹಣದಾಸೆಗೆ ಬಿದ್ದು ರೈತರ ಹಿತಾಸಕ್ತಿ ಮರೆಯುತ್ತಿದ್ದಾರೆ. ಇನ್ನುಮುಂದೆ ರಾಜಕಾರಣಿಗಳು ಹಳ್ಳಿಗಳಿಗೆ ಬಂದರೆ ರೈತರು ಕಲ್ಲಿನಲ್ಲಿ ಹೊಡೆದು ಓಡಿಸಬೇಕು ಎಂದು ಕರೆ ನೀಡಿದರು.
ಈ ಭಾಗದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಸೇರಿದ 300 ಎಕರೆ ಜಮೀನು ಇದೆ. ಅದನ್ನು ಮಾರಿದರೆ ಕೋಟ್ಯಂತರ ರುಪಾಯಿ ಬರುತ್ತದೆ. ಈ ಕಾರಣಕ್ಕಾಗಿ ಅವರು ಟೌನ್ ಶಿಪ್ ಯೋಜನೆ ಜಾರಿಗೊಳಿಸಲು ಹಠಕ್ಕೆ ಬಿದ್ದಿದ್ದಾರೆ. ಅನ್ನ ಕೊಡುವ ಭೂಮಿಯನ್ನು ನಾಶ ಪಡಿಸಿದರೆ ರೈತರು ಮತ್ತು ಭೂಮಿಯ ಶಾಪಕ್ಕೆ ರಾಜ್ಯ ಸರ್ಕಾರ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಈ ಹಿಂದೆ ಹಲವು ಯೋಜನೆಗಳಿಗೆ ಭೂಮಿ ಕೊಟ್ಟ ರೈತರ ಮಕ್ಕಳು ಯಾರೂ ಉದ್ಧಾರವಾಗಿಲ್ಲ. ಅವರೆಲ್ಲರು ದೊಡ್ಡ ದೊಡ್ಡ ಕಂಪನಿಗಳಲ್ಲಿ ವಾಚ್ ಮನ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದು ನಮ್ಮ ಪೂರ್ವಜರ ಆಸ್ತಿಯಾಗಿದ್ದು, ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಬೆಂಗಳೂರು - ಮೈಸೂರು ಹೆದ್ದಾರಿ ಬಂದ್ ಮಾಡಿ ಚಳವಳಿ ತೀವ್ರಗೊಳಿಸುತ್ತೇವೆ. ಜೈಲಿಗೂ ಹೋಗಲು ಎಲ್ಲರೂ ಸಿದ್ಧರಾಗುವಂತೆ ಚೀಲೂರು ಮುನಿರಾಜು ರೈತರಿಗೆ ಕರೆ ನೀಡಿದರು.
ಧಮ್ಮದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಒಳ್ಳೆಯ ಆಡಳಿತ ನೀಡಲೆಂಬ ಉದ್ದೇಶದಿಂದ ಜನರು ಸರ್ಕಾರವನ್ನು ಆಯ್ಕೆ ಮಾಡುತ್ತೇವೆ. ಆ ಸರ್ಕಾರ ರೈತರು, ದೀನ ದಲಿತರು, ಶೋಷಿತರು ಸೇರಿದಂತೆ ಎಲ್ಲ ವರ್ಗಗಳ ಪರವಾಗಿ ಇರಬೇಕು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ದಲ್ಲಾಳಿಗಳು ಮತ್ತು ಬಂಡವಾಳ ಶಾಹಿಗಳ ಪರವಾಗಿದೆ ಎಂದು ಕಿಡಿಕಾರಿದರು.
ರೈತರ ಧ್ವನಿ ಕೇಳದ ಸರ್ಕಾರ ರೈತ ವಿರೋಧಿಯಾಗಿದೆ. ಮುಂದಿನ ಚುನಾವಣೆಯಲ್ಲಿ ಅನ್ಯ ಪಕ್ಷಗಳು ಅಧಿಕಾರಕ್ಕೆ ಬರಬೇಕಾದರೆ ರೈತರ ಪರವಾಗಿ ನಿಲ್ಲಲಿ. ಶಾಂತಿಯುತ ಹೋರಾಟವನ್ನು ರೈತರ ದೌರ್ಬಲ್ಯವೆಂದು ಭಾವಿಸಬೇಡಿ. ಅನ್ನದಾತರು ದಂಗೆ ಎದ್ದರೆ ಸಚಿವ ಸಂಪುಟದ ಯಾವ ಅನುಮೋದನೆಯೂ ಲೆಕ್ಕಕ್ಕೆ ಇರುವುದಿಲ್ಲ ಎಂದು ಮಲ್ಲಿಕಾರ್ಜುನ್ ಎಚ್ಚರಿಕೆ ನೀಡಿದರು. ಧರಣಿಯಲ್ಲಿ ಬೈರಮಂಗಲ - ಕಂಚುಗಾರನಹಳ್ಳಿ ಗ್ರಾಪಂಗಳ ರೈತರ ಭೂ ಹಿತರಕ್ಷಣಾ ಸಂಘದ ಅಧ್ಯಕ್ಷ ರಾಮಯ್ಯ, ಕರ್ನಾಟಕ ಪ್ರಾಂತ ರೈತಸಂಘ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ , ಮುಖಂಡರಾದ ಪ್ರಕಾಶ್ , ನಾಗರಾಜು, ಅಶ್ವತ್ಥ್ , ರಾಧಾಕೃಷ್ಣ, ಭೈರಪ್ಪ, ಹನುಮಂತು, ಶ್ರೀನಿವಾಸ್ ರೆಡ್ಡಿ, ಮಂಜುನಾಥ್ , ರೇವಣ್ಣ, ಬೈರೇಗೌಡ, ರಾಘವೇಂದ್ರ, ಸುಮಿತ್ರಮ್ಮ, ಶ್ವೇತಾ, ಸುಮಾ, ಜಯಮ್ಮ, ಭಾಗ್ಯ, ಚೈತ್ರಾ ಮತ್ತಿತರರು ಭಾಗವಹಿಸಿದ್ದರು.
ರೈತರ ಸಮಾಧಿ ಮೇಲೆ ಟೌನ್ ಶಿಪ್ ನಿರ್ಮಾಣಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಬಿಟ್ಟಿ ಭಾಗ್ಯಗಳನ್ನು ಕೊಟ್ಟು ಜನರ ತೆರಿಗೆ ಹಣ ವ್ಯಯ ಮಾಡಿ ಖಜಾನೆಯನ್ನು ಖಾಲಿ ಪಾತ್ರೆ ಮಾಡಿಟ್ಟಿದೆ. ಈಗ ಸರ್ಕಾರ ನಡೆಸಲು ರೈತರ ಭೂಮಿ ಮೇಲೆ ಕಣ್ಣು ಹಾಕಿದೆ. ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ, ಈಗ ರೈತ ವಿರೋಧಿ ಸಿದ್ದರಾಮಯ್ಯ ಆಗಿದ್ದಾರೆ ಎಂದು ಟೀಕಿಸಿದರು.
ರೈತರ ಅಭಿಪ್ರಾಯವನ್ನೂ ಕೇಳದೆ ರಾಜ್ಯ ಸರ್ಕಾರ ತರಾತುರಿಯಲ್ಲಿ ಯೋಜನೆಗೆ ಅನುಮೋದನೆ ನೀಡಿದೆ. ಕೃಷಿ ಭೂಮಿಯನ್ನು ಅಡವಿಟ್ಟು, ಆ ಹಣ ದೋಚುವುದು ಸರ್ಕಾರದ ಉದ್ದೇಶವಾಗಿದೆ. ರೈತರು ಆತ್ಮಸ್ಥೈರ್ಯ ಮತ್ತು ಒಗ್ಗಟ್ಟು ಕಾಪಾಡಿಕೊಂಡರೆ ಒಂದಿಂಚು ಭೂಮಿ ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.
ಅನಿರ್ದಿಷ್ಟಾವಧಿ ಧರಣಿಯಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿದರು.