3400 ಕೋಟಿ ವೆಚ್ಚದ ವಿವಿಧ ಯೋಜನೆಗೆ ಸಂಪುಟ ಒಪ್ಪಿಗೆ

KannadaprabhaNewsNetwork | Published : Jul 3, 2025 1:47 AMUpdated   : Jul 03 2025, 07:27 AM IST
Karnataka Chief Minister Siddaramaiah (File Photo/ANI)

ಸಾರಾಂಶ

ಬೆಂಗಳೂರು ವಿಭಾಗದ ವ್ಯಾಪ್ತಿಯ ಜಿಲ್ಲೆಗಳಲ್ಲಿ 2,050 ಕೋಟಿ ರು. ವೆಚ್ಚದ ವಿವಿಧ ಕಾಮಗಾರಿ ಸೇರಿ ಒಟ್ಟು 3,400 ಕೋಟಿ ರು. ವೆಚ್ಚದ ವಿವಿಧ ಯೋಜನೆಗಳಿಗೆ ನಂದಿಬೆಟ್ಟದಲ್ಲಿ ಬುಧವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ

 ನಂದಿಬೆಟ್ಟ :  ಬೆಂಗಳೂರು ವಿಭಾಗದ ವ್ಯಾಪ್ತಿಯ ಜಿಲ್ಲೆಗಳಲ್ಲಿ 2,050 ಕೋಟಿ ರು. ವೆಚ್ಚದ ವಿವಿಧ ಕಾಮಗಾರಿ ಸೇರಿ ಒಟ್ಟು 3,400 ಕೋಟಿ ರು. ವೆಚ್ಚದ ವಿವಿಧ ಯೋಜನೆಗಳಿಗೆ ನಂದಿಬೆಟ್ಟದಲ್ಲಿ ಬುಧವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ.

ವಿಶೇಷ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟ ಸಭೆಯಲ್ಲಿ ಒಟ್ಟು 48 ವಿಷಯಗಳ ಬಗ್ಗೆ ಒಪ್ಪಿಗೆ ನೀಡಿದ್ದು, ಈ ಪೈಕಿ 31 ಬೆಂಗಳೂರು ವಿಭಾಗದ ಜಿಲ್ಲೆಗಳಿಗೆ ಸೇರಿದ್ದಾಗಿದೆ ಎಂದರು.

ವಸತಿ ಶಾಲೆ, ಶಿಕ್ಷಣಕ್ಕೆ 1627 ಕೋಟಿ ರು:

ಮುಖ್ಯವಾಗಿ ಶಿಕ್ಷಣಕ್ಕೆ 1627.25 ಕೋಟಿ ರು. ವೆಚ್ಚದ ಯೋಜನೆಗಳನ್ನು ನೀಡಿದ್ದು, ಕಾರ್ಮಿಕ ಇಲಾಖೆಯಿಂದ ಪ್ರತೀ ಜಿಲ್ಲೆಯಲ್ಲಿ ಕಾರ್ಮಿಕರ ಮಕ್ಕಳಿಗೆ 1,125 ಕೋಟಿ ರು. ವೆಚ್ಚದಲ್ಲಿ31 ವಸತಿ ಶಾಲೆ ನಿರ್ಮಿಸಲು ತೀರ್ಮಾನಿಸಲಾಗಿದೆ.

ಇನ್ನು ಹಿಂದುಳಿದ ವರ್ಗದ ಅಭ್ಯರ್ಥಿಗಳು ಐಎಎಸ್‌, ಐಆರ್‌ಎಸ್‌, ಐಪಿಎಸ್‌ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯಲು 10 ಕೋಟಿ ರು. ವೆಚ್ಚದಲ್ಲಿ ಬೆಂಗಳೂರು ನಗರದಲ್ಲಿ ಎರಡು ವಸತಿ ಶಾಲೆ ಸಹಿತ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಿಂದ ಹಿಂದುಳಿದ ವರ್ಗದ 14 ವಸತಿ ಶಾಲೆ ನಿರ್ಮಾಣಕ್ಕೆ 306 ಕೋಟಿ ರು. ಅನುದಾನ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನಲ್ಲಿ ಮೊರಾರ್ಜಿ ವಸತಿ ಶಾಲೆ ಪ್ರಾರಂಭಕ್ಕೆ ಅನುಮೋದನೆ ನೀಡಲಾಗಿದ ಎಂದು ಸಿದ್ದರಾಮಯ್ಯ ಹೇಳಿದರು.

ನೀರಾವರಿ ಯೋಜನೆಗೆ 1,154 ಕೋಟಿ ರು:

ನೀರಾವರಿ ಯೋಜನೆಗಳಿಗೆ 1154 ಕೋಟಿ ರು. ನೀಡಿದ್ದೇವೆ. ಇದರಲ್ಲಿ 237 ಕೋಟಿ ರು. ಅನ್ನು ಬೆಂಗಳೂರಿನ ತ್ಯಾಜ್ಯ ನೀರು ಶುದ್ಧೀಕರಣ ಮಾಡಿ ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲೂಕಿನ 164 ಕೆರೆಗಳಿಗೆ ತುಂಬಿಸುವ ಯೋಜನೆಗೆ ಅನುಮೋದನೆ ನೀಡಿದ್ದೇವೆ.

ಈ ಭಾಗದಲ್ಲಿ ಅತಿ ಹೆಚ್ಚಾಗಿ ಗುಣಮಟ್ಟದ ಹೂ ಬೆಳೆಯುತ್ತಾರೆ. ಆದ್ದರಿಂದ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರವನ್ನು 10 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ. ಇದರ ಜೊತೆ ಚಿಕ್ಕಬಳ್ಳಾಪುರದಲ್ಲಿ ಎಪಿಎಂಸಿಯಿಂದ 141.5 ಕೋಟಿ ರು. ವೆಚ್ಚದಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆ ಸ್ಥಾಪಿಸಲು ಅನುಮತಿ ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ವೈದ್ಯಕೀಯ ಚಟುವಟಿಕೆಗೆ 123 ಕೋಟಿ ರು.:

ಆರೋಗ್ಯ ಸಂಬಂಧಿಸಿದ ಚಟುವಟಿಕೆಗೆ 123 ಕೋಟಿ ರು. ವೆಚ್ಚ ಮಾಡಲು ಅನುಮತಿ ನೀಡಿದ್ದು, ಹೊಸದಾಗಿ ಘೋಷಿಸಿರುವ ತಾಲೂಕುಗಳಾದ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು, ಧಾರವಾಡ ಜಿಲ್ಲೆಯ ಅಣ್ಣಿಗೇರಿ, ಅಳ್ನಾವರ, ಉಡುಪಿ ಜಿಲ್ಲೆಯ ಕಾಪು, ವಿಜಯಪುರ ಜಿಲ್ಲೆಯ ಬಬಲೇಶ್ವರ, ಕೊಲ್ಹಾರ, ಬಾಗಲಕೋಟೆ ಜಿಲ್ಲೆಯ ತೇರದಾಳ ಹಾಗೂ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಹುದಿಕೇರಿಯಲ್ಲಿನ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 46 ಕೋಟಿ ರು. ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲು ತೀರ್ಮಾನ ಮಾಡಲಾಗಿದೆ.ಕೆಂಪೇಗೌಡ ಕೋಟೆ ಅಭಿವೃದ್ಧಿಗೆ 103 ಕೋಟಿ:

ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿ, ಬೆಂ. ದಕ್ಷಿಣ ಜಿಲ್ಲೆ ಮಾಗಡಿಯಲ್ಲಿ ನಾಡಪ್ರಭು ಕೆಂಪೇಗೌಡ ಕೋಟೆ ನವೀಕರಣ ಹಾಗೂ ಸಮಗ್ರ ಅಭಿವೃದ್ಧಿಗೆ 103 ಕೋಟಿ ರು. ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದರು.

ಬಿಇಎಂಎಲ್‌ ಕಂಪನಿಗೆ ಮುದ್ರಾಂಕ

ಶುಲ್ಕದಲ್ಲಿ ಶೇ.50ರಷ್ಟು ವಿನಾಯಿತಿಬಿಇಎಂಎಲ್‌ ಸಂಸ್ಥೆಯ ಸ್ವತ್ತುಗಳನ್ನು ಹೊಸದಾಗಿ ಸೃಜಿಸಲಾದ ಬಿಇಎಂಎಲ್‌ ಲ್ಯಾಂಡ್‌ ಅಸೆಟ್ಸ್‌ ಲಿಮಿಟೆಡ್‌ (ಬಿಎಲ್‌ಎಎಲ್‌) ಎಂಬ ಕಂಪೆನಿಗೆ ವರ್ಗಾಯಿಸುವ ಕುರಿತ ನೋಂದಣಿ ಪ್ರಕ್ರಿಯೆಯಲ್ಲಿ ಮುದ್ರಾಂಕ ಶುಲ್ಕಕ್ಕೆ ಪೂರ್ಣವಿನಾಯಿತಿ ನೀಡುವ ಪ್ರಸ್ತಾಪಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿಲ್ಲ. ಬದಲಿಗೆ ಶೇ.50ರಷ್ಟು ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ.

ಇತರೆ ತೀರ್ಮಾನ:

  • - ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯ ಪಾತುಪಾಳ್ಯ ಹೋಬಳಿ ಮಲ್ಲಮ್ಮ ಕಣಿವೆಯಲ್ಲಿ 189 ಕೋಟಿ ರು. ವೆಚ್ಚದಲ್ಲಿ ಜಲಾಶಯ ನಿರ್ಮಾಣಕ್ಕೆ ಅನುಮೋದನೆ.
  • - ಚಿಂತಾಮಣಿಯ ಭಕ್ತರಹಳ್ಳಿ ಅರಸಿಕೆರೆಯ ಕೆಳಭಾಗದಲ್ಲಿ 36 ಕೋಟಿ ರು. ವೆಚ್ಚದಲ್ಲಿ ಹೊಸ ಕೆರೆ ನಿರ್ಮಾಣ.
  • - ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಹೋಟೆಲ್ ಹಾಗೂ ಇತರೆ ಸೌಲಭ್ಯಕ್ಕಾಗಿ 50 ಕೋಟಿ ರು.
  • -ಬೆಳಗಾವಿ ಜಿಲ್ಲೆ ಬೈಲಹೊಂಗಲ ಪುರಸಭೆ, ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ಪುರಸಭೆಯನ್ನು ನಗರಸಭೆಯಾಗಿ, ಕೊಪ್ಪಳ ಜಿಲ್ಲೆ ಹನುಮಸಾಗರ ಗ್ರಾಪಂ ಅನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಕೆ.
  • - ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಅಮರಾವತಿ ಗ್ರಾಮದಲ್ಲಿ ಬೆಂಗಳೂರು ಉತ್ತರ ವಿವಿಯ ನೂತನ ಕ್ಯಾಂಪಸ್ ಎರಡನೇ ಹಂತದ ಕಾಮಗಾರಿಗೆ 123 ಕೋಟಿ ರು. ವೆಚ್ಚದ ಕಾಮಗಾರಿಗೆ ಅನುಮೋದನೆ.
  • - ಚಳ್ಳಕೆರೆ ವೇದಾವತಿ ನದಿಗೆ ಗುಡಿಹಳ್ಳಿ ಮತ್ತು ತಪ್ಪಗೊಂಡನಹಳ್ಳಿ ಗ್ರಾಮಗಳ ನಡುವೆ 31.40 ಕೋಟಿ ರು. ವೆಚ್ಚದಲ್ಲಿ ಹಾಗೂ ಗೋಸಿಕೆರೆ ಗ್ರಾಮ ಸಮೀಪ 34.50 ಕೋಟಿ ರು. ವೆಚ್ಚದಲ್ಲಿ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಾಣ.

PREV
Read more Articles on