2025-30ರ ಸ್ಟಾರ್ಟ್‌ ಅಪ್‌ ನೀತಿಗೆ ಕ್ಯಾಬಿನೆಟ್‌ ಒಪ್ಪಿಗೆ

KannadaprabhaNewsNetwork |  
Published : Nov 07, 2025, 02:00 AM ISTUpdated : Nov 07, 2025, 07:33 AM IST
HK Patil

ಸಾರಾಂಶ

ರಾಜ್ಯವನ್ನು ಜಾಗತಿಕ ನಾವೀನ್ಯತಾ ಕೇಂದ್ರವಾಗಿ ಬಲಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರೂಪಿಸಿರುವ ‘ಕರ್ನಾಟಕ ನವೋದ್ಯಮ ನೀತಿ- 2025-2030’ಕ್ಕೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು, ನೀತಿಯಡಿ ಮುಂದಿನ 5 ವರ್ಷದಲ್ಲಿ 25,000 ಸ್ಟಾರ್ಟ್‌ ಅಪ್‌ ಹುಟ್ಟು ಹಾಕುವ ಗುರಿ ಹೊಂದಲಾಗಿದೆ.

  ಬೆಂಗಳೂರು :  ರಾಜ್ಯವನ್ನು ಜಾಗತಿಕ ನಾವೀನ್ಯತಾ ಕೇಂದ್ರವಾಗಿ ಬಲಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರೂಪಿಸಿರುವ ‘ಕರ್ನಾಟಕ ನವೋದ್ಯಮ ನೀತಿ- 2025-2030’ಕ್ಕೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು, ನೀತಿಯಡಿ ಮುಂದಿನ 5 ವರ್ಷದಲ್ಲಿ 25,000 ಸ್ಟಾರ್ಟ್‌ ಅಪ್‌ ಹುಟ್ಟು ಹಾಕುವ ಗುರಿ ಹೊಂದಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ನೀತಿಗೆ ಅನುಮೋದನೆ ನೀಡಿದ್ದು, ಈ ಹೊಸ ನೀತಿ ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ 25,000 ಹೊಸ ಸ್ಟಾರ್ಟ್‌ಅಪ್‌ಗಳನ್ನು ಹುಟ್ಟು ಹಾಕುವ ಗುರಿ ಹೊಂದಿದ್ದು, ಇದಕ್ಕೆ ಪ್ರೋತ್ಸಾಹ ನೀಡಲು 518.27 ಕೋಟಿ ರು. ಅನುದಾನ ಮೀಸಲಿಡಲಾಗಿದೆ.

ನವೋದ್ಯಮ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನಕ್ಕೆ

ಈ ಬಗ್ಗೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್‌, ರಾಜ್ಯವನ್ನು ನವೋದ್ಯಮ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನಕ್ಕೆ ಕೊಂಡೊಯ್ಯಲು ನೀತಿ ಸಹಕಾರಿ. ಬೆಂಗಳೂರಿನ ಹೊರಗೂ ನಾವೀನ್ಯತೆ ವಿಸ್ತರಿಸಲು ವಿಶೇಷ ಒತ್ತು ನೀಡಲಾಗುತ್ತದೆ. ಸ್ಥಾಪನೆಯಾಗಲಿರುವ 25 ಸಾವಿರ ಸ್ಟಾರ್ಟ್‌ಅಪ್‌ಗಳ ಪೈಕಿ ಕನಿಷ್ಠ 10ಸಾವಿರ ಸ್ಟಾರ್ಟ್‌ಅಪ್‌ಗಳನ್ನು ಬೆಂಗಳೂರಿನ ಹೊರಗಿನ ಕ್ಲಸ್ಟರ್‌ಗಳಿಂದ ಉತ್ತೇಜಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದು ರಾಜ್ಯದಲ್ಲಿ ಸಮಾನ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಸಹಕಾರಿ ಎಂದರು.ಕರ್ನಾಟಕ ನವೋದ್ಯಮ ನೀತಿಯು ಭವಿಷ್ಯದ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಬ್ಲಾಕ್‌ಚೈನ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ನಾವೀನ್ಯತೆಗೆ ಪ್ರೋತ್ಸಾಹಿಸಲು ಗಮನಹರಿಸಲಿದೆ. ರಾಜ್ಯದ ಯಶಸ್ವಿ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಈ ನೀತಿ ರೂಪಿಸಲಾಗಿದೆ ಎಂದರು.

ಈ ನೀತಿ ಅಡಿ ಸ್ಟಾರ್ಟ್‌ಅಪ್‌ಗಳಿಗೆ ಎಲಿವೇಟ್ ಗ್ರಾಂಟ್-ಇನ್-ಏಡ್, ಸೀಡ್ ಫಂಡ್, ಫಂಡ್ ಆಫ್ ಫಂಡ್ಸ್, ಜಿಎಸ್‌ಟಿ ಮರುಪಾವತಿ, ಪೇಟೆಂಟ್ ಫೈಲಿಂಗ್ ವೆಚ್ಚ, ಗುಣಮಟ್ಟ ಪ್ರಮಾಣೀಕರಣ ವೆಚ್ಚ, ಮತ್ತು ಪಿಎಫ್ ಮರುಪಾವತಿಯಂತಹ ಹಲವಾರು ಆರ್ಥಿಕ ಪ್ರೋತ್ಸಾಹಗಳನ್ನು ನೀಡಲಾಗುತ್ತದೆ.

ಅಲ್ಲದೇ, ದೇಶದ ಸ್ಟಾರ್ಟ್‌ಅಪ್ ರಾಜಧಾನಿಯಾಗಿರುವ ಬೆಂಗಳೂರು, ಜಾಗತಿಕ ಮಟ್ಟದಲ್ಲಿ 10ನೇ ಸ್ಥಾನದಲ್ಲಿದ್ದು, ಈ ನೀತಿ ಕರ್ನಾಟಕದ ನಾಯಕತ್ವವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಾವೀನ್ಯತೆಯಲ್ಲಿ ರಾಜ್ಯದ ಪರಂಪರೆ ಮುಂದುವರೆಸಿಕೊಂಡು ಹೋಗಲು ಈ ನೀತಿ ಒಂದು ಮಹತ್ವದ ಹೆಜ್ಜೆ ಎಂದು ಮಾಹಿತಿ ನೀಡಿದರು.

ಬಂಧಿತ ವ್ಯಕ್ತಿಗಳ ವಿವರ ನಿರ್ವಹಣೆ ಕಡ್ಡಾಯ

ರಾಜ್ಯದ ಯಾವುದೇ ಪೊಲೀಸ್ ಠಾಣೆಯು ವ್ಯಕ್ತಿಯೊಬ್ಬರನ್ನು ಬಂಧಿಸಿದಾಗ ನಿಯಮಿತ ನಮೂನೆಯಲ್ಲಿ ಬಂಧಿತ ವ್ಯಕ್ತಿಯ ಮಾಹಿತಿ ನಿರ್ವಹಿಸುವುದು ಕಡ್ಡಾಯಗೊಳಿಸುವ ನಿಯಮಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಬಂಧಿತ ವ್ಯಕ್ತಿ ಮಾಹಿತಿ ಒಳಗೊಂಡ ದಾಖಲೆ ನಿರ್ವಹಣೆ ಕಡ್ಡಾಯ ನಿಯಮಾವಳಿ -2025ಕ್ಕೆ ಸಂಪುಟ ಅನುಮೋದನೆ ನೀಡಿದೆ.

 ಸಂಪುಟದ ಇತರ ತೀರ್ಮಾನಗಳು:

-ಒಬಿಸಿ ವರ್ಗಗಳಿಗೆ ಮೀಸಲಿದ್ದರೂ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದ ಹಿನ್ನೆಲೆಯಲ್ಲಿ 67 ಉರ್ದು ಶಿಕ್ಷಕರ ಹುದ್ದೆಯನ್ನು ಸಾಮಾನ್ಯ ವರ್ಗಕ್ಕೆ ಪರಿವರ್ತಿಸಲು ನಿರ್ಧಾರ.

- ಕೊರಟಗೆರೆ ಪಟ್ಟಣ ಪಂಚಾಯ್ತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ನಿರ್ಧಾರ.

- ಯಾದಗಿರಿಯ ದೋರನಹಳ್ಳಿ ಗ್ರಾಪಂ ಅನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಲು ತೀರ್ಮಾನ.

- ವಿಜಯಪುರ ಮಹಾನಗರ ಪಾಲಿಕೆಗೆ ಹೆಚ್ಚುವರಿ ಗ್ರಾಮಗಳನ್ನು ಸೇರ್ಪಡೆ ಮಾಡಲು ನಿರ್ಧಾರ.

- ಬೀದರ್‌ನ ರಾಜೇಶ್ವರಿ ಗ್ರಾ.ಪಂ.ಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಲು ಒಪ್ಪಿಗೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ