ರಾಜ್ಯ ಶಿಕ್ಷಣ ನೀತಿ ಆಯೋಗದ ಅಂತಿಮ ವರದಿ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವಿಶೇಷ ಚರ್ಚೆ ನಡೆಯಲಿದ್ದು, ದ್ವಿಭಾಷಾ ನೀತಿ ಅನುಷ್ಠಾನ ಸೇರಿದಂತೆ ವಿವಿಧ ವಿಷಯಗಳ ಕುರಿತ ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಶಿಕ್ಷಣ ನೀತಿ ಆಯೋಗದ ಅಂತಿಮ ವರದಿ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವಿಶೇಷ ಚರ್ಚೆ ನಡೆಯಲಿದ್ದು, ದ್ವಿಭಾಷಾ ನೀತಿ ಅನುಷ್ಠಾನ ಸೇರಿದಂತೆ ವಿವಿಧ ವಿಷಯಗಳ ಕುರಿತ ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಬದಲಿಗೆ ರಾಜ್ಯ ಮಟ್ಟದ ಶಿಕ್ಷಣ ನೀತಿ ಜಾರಿ ಮಾಡಲು ವರದಿ ನೀಡುವಂತೆ ರಾಜ್ಯ ಸರ್ಕಾರವು 2023ರಲ್ಲಿ ಪ್ರೊ.ಸುಖದೇವ್ ಥೋರಟ್ ನೇತೃತ್ವದಲ್ಲಿ ಆಯೋಗ ರಚನೆ ಮಾಡಿತ್ತು.
ಈ ಆಯೋಗವು ನೀಡಿದ್ದ ಮಧ್ಯಂತರ ವರದಿ ಆಧಾರದ ಮೇಲೆ ಎನ್‌ಇಪಿಯಲ್ಲಿನ ನಾಲ್ಕು ವರ್ಷಗಳ ಪದವಿ ಬದಲಿಗೆ ಮೂರು ವರ್ಷಗಳ ಪದವಿಯನ್ನು ಈಗಾಗಲೇ ರಾಜ್ಯ ಸರ್ಕಾರ ಜಾರಿ ಮಾಡಿದೆ.
ಇದೀಗ ಅಂತಿಮ ವರದಿ ಆಧಾರದ ಮೇಲೆ ಯಾವೆಲ್ಲಾ ಶಿಫಾರಸುಗಳನ್ನು ಒಳಗೊಂಡಂತೆ ರಾಜ್ಯ ಶಿಕ್ಷಣ ನೀತಿ ಜಾರಿ ಮಾಡಲಿದೆ. ಈ ಬಗ್ಗೆ ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಮಾಡಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.
ಏಕೆಂದರೆ, ರಾಜ್ಯ ಶಿಕ್ಷಣ ನೀತಿ ಆಯೋಗದ ಅಂತಿಮ ವರದಿ ಬಗ್ಗೆ ಈ ಮೊದಲೇ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಆದರೆ, ಕೆಲ ತಿದ್ದುಪಡಿಗಳೊಂದಿಗೆ ವರದಿ ಮಂಡಿಸುವಂತೆ ಎರಡು ಬಾರಿ ವಿಷಯವನ್ನು ಸಂಪುಟ ಸಭೆಯಲ್ಲಿ ಮುಂದೂಡಲಾಗಿತ್ತು. ಇದೀಗ ಸಂಪುಟ ಸಭೆಯಲ್ಲಿ ವಿಶೇಷ ಚರ್ಚೆ ನಡೆಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವರದಿಯಲ್ಲಿರುವ ಶಿಫಾರಸುಗಳೇನು?
ಮೂಲಗಳ ಪ್ರಕಾರ, ರಾಜ್ಯದ ಶಾಲೆಗಳಲ್ಲಿ ದ್ವಿಭಾಷಾ ನೀತಿಯನ್ನು ಅನುಷ್ಠಾನಗೊಳಿಸಬೇಕು. ಇದರಲ್ಲಿ ಒಂದು ಮಾತೃಭಾಷೆ ಅಥವಾ ಕನ್ನಡ ಕಡ್ಡಾಯವಾಗಿರಬೇಕು. ಜತೆಗೆ, ಖಾಸಗಿ ಅನುದಾನರಹಿತ ಸಂಸ್ಥೆಗಳಲ್ಲೂ ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿ ನಿಯಮ ಅನ್ವಯಿಸಬೇಕು ಎಂದು ಎರಡು ಸಂಪುಟಗಳ 2,197 ಪುಟಗಳ ಶಿಕ್ಷಣ ನೀತಿಯ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಜತೆಗೆ ಎಲ್ಲ ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿಯವರೆಗೆ ಕನ್ನಡ/ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸಬೇಕು.
ಶಾಲಾ ಶಿಕ್ಷಣದಲ್ಲಿ 2+8+4 ರಚನೆ (ಪೂರ್ವ ಪ್ರಾಥಮಿಕ- 2 ವರ್ಷ, ಪ್ರಾಥಮಿಕ- 8 ವರ್ಷ ಮತ್ತು ಮಾಧ್ಯಮಿಕ ಶಿಕ್ಷಣ- 4 ವರ್ಷ) ಅಳವಡಿಕೆ ಮಾಡಬೇಕು. ರಾಜ್ಯಾದ್ಯಂತ ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಬೇಕು. ಕೆಲವು ಪರೋಕ್ಷ ತೆರಿಗೆಗಳ ಮೇಲೆ ಶಿಕ್ಷಣ ಸರ್ಚಾರ್ಜ್ ಪರಿಗಣಿಸಿ ಶಿಕ್ಷಣ ಬಜೆಟ್ ಹೆಚ್ಚಳ ಮಾಡಬೇಕು ಎಂದು ಹೇಳಲಾಗಿದೆ.
ಶುಲ್ಕ ನಿಯಂತ್ರಿಸಲು ಪ್ರಾಧಿಕಾರ:
ಇನ್ನು ಪದವಿಪೂರ್ವ ಕಾರ್ಯಕ್ರಮಗಳಲ್ಲಿ ಸಮಗ್ರ ಲೈಂಗಿಕ ಶಿಕ್ಷಣವನ್ನು ಪರಿಚಯಿಸಬೇಕು. ಖಾಸಗಿ ಸಂಸ್ಥೆಗಳಲ್ಲಿ ಶುಲ್ಕ ನಿಯಂತ್ರಣಕ್ಕೆ ಶಾಶ್ವತ ನಿಯಂತ್ರಣ ವ್ಯವಸ್ಥೆ ಸ್ಥಾಪಿಸಬೇಕು ಎಂದು ಶಿಫಾರಸು ಮಾಡಲಾಗಿದೆ. ಇಷ್ಟೆಲ್ಲಾ ಅಂಶಗಳಿರುವ ವರದಿಯ ಬಗ್ಗೆ ಸಂಪುಟ ಸಭೆ ಯಾವ ರೀತಿ ನಿರ್ಧಾರ ಕೈಗೊಳ್ಳಲಿದೆ ಎಂಬುದು ಇದೀಗ ಚರ್ಚೆಗೆ ಕಾರಣವಾಗಿದೆ.
ಇತರೆ ವಿಷಯಗಳು:
ಸಭೆಯಲ್ಲಿ ಶಿಕ್ಷಣ ನೀತಿ ಹೊರತುಪಡಿಸಿ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಟೌನ್‌ಶಿಪ್‌ಗೆ ಬಸವಸಾಗರ ಅಣೆಕಟ್ಟಿನಿಂದ 132 ಕೋಟಿ ರು. ವೆಚ್ಚದಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆಯುವ ಸಾಧ್ಯತೆಯಿದೆ.
ಜತೆಗೆ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ತಿದ್ದುಪಡಿ ವಿಧೇಯಕ -2026ಕ್ಕೆ ಅಂಗೀಕಾರ ನೀಡುವ ನಿರೀಕ್ಷೆ ಇದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.