2028ಕ್ಕೆ ರಾಜ್ಯ ಬಿಜೆಪಿಯಿಂದಲೂ ಗ್ಯಾರಂಟಿ?

KannadaprabhaNewsNetwork |  
Published : May 07, 2026, 02:00 AM IST
ಅಶೋಕ್‌ | Kannada Prabha

ಸಾರಾಂಶ

2028ರ ವಿಧಾನಸಭಾ ಚುನಾವಣೆಯಲ್ಲಿ ಮುಳ್ಳನ್ನು ಮುಳ್ಳಿಂದಲೇ ತೆಗೆಯುತ್ತೇವೆ ಎನ್ನುವ ಮುಖಾಂತರ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಅವರು ಪರೋಕ್ಷವಾಗಿ ಕಾಂಗ್ರೆಸ್‌ ಪಕ್ಷದ ಮಾದರಿಯಲ್ಲಿ ಗ್ಯಾರಂಟಿಗಳನ್ನು ಘೋಷಿಸುವ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

2028ರ ವಿಧಾನಸಭಾ ಚುನಾವಣೆಯಲ್ಲಿ ಮುಳ್ಳನ್ನು ಮುಳ್ಳಿಂದಲೇ ತೆಗೆಯುತ್ತೇವೆ ಎನ್ನುವ ಮುಖಾಂತರ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಅವರು ಪರೋಕ್ಷವಾಗಿ ಕಾಂಗ್ರೆಸ್‌ ಪಕ್ಷದ ಮಾದರಿಯಲ್ಲಿ ಗ್ಯಾರಂಟಿಗಳನ್ನು ಘೋಷಿಸುವ ಸೂಚನೆ ನೀಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಪಕ್ಷದ ಕೇಂದ್ರದ ನಾಯಕರು ಗ್ಯಾರಂಟಿಗಳ ಘೋಷಣೆಗೆ ಅವಕಾಶ ನೀಡಲಿಲ್ಲ. ಈಗ ಎಲ್ಲ ಕಡೆ ಗ್ಯಾರಂಟಿಗಳ ಘೋಷಣೆ ನಡೆಯುತ್ತಿದೆ. 2028ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಕೌಂಟರ್‌ ಆಗಿ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೇವೆ. ಮುಳ್ಳನ್ನು ಮುಳ್ಳಿಂದಲೇ ತೆಗೆಯುತ್ತೇವೆ. ಅವರು ಸಣ್ಣ ಮುಳ್ಳು ಹಾಕಿದರೆ, ನಾವು ದೊಡ್ಡ ಮುಳ್ಳು ಹಾಕುತ್ತೇವೆ. ಏನಾಗಲಿದೆ ಎಂದು ಕಾದು ನೋಡಿ. ಅವರೇ ದಾರಿ ತೋರಿಸಿಕೊಟ್ಟಿದ್ದಾರೆ ಎಂದರು.

ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷದವರು ಐದು ಗ್ಯಾರಂಟಿ ಘೋಷಿಸಿದ್ದರು. ನಾವು ಒಂದೂ ಗ್ಯಾರಂಟಿ ಘೋಷಿಸಲಿಲ್ಲ. ಹೀಗಾಗಿ ಕಾಂಗ್ರೆಸ್‌ ಗ್ಯಾರಂಟಿಗಳ ಮೇಲೆ ಚುನಾವಣೆ ಗೆದ್ದಿದೆ. ನಾವು ಗ್ಯಾರಂಟಿಗಳ ವಿರೋಧಿಗಳಲ್ಲ. ಇನ್ನೂ 25 ಗ್ಯಾರಂಟಿ ಕೊಡಿ ಎಂದು ಸಲಹೆ ನೀಡುತ್ತೇನೆ. ನಾನು ಗ್ಯಾರಂಟಿಗಳನ್ನು ಎಂದೂ ವಿರೋಧಿಸಿಲ್ಲ. ಅವೈಜ್ಞಾನಿಕ ಗ್ಯಾರಂಟಿಗಳ ಬಗ್ಗೆ ನನ್ನ ವಿರೋಧವಿದೆ. ಗ್ಯಾರಂಟಿ ಘೋಷಿಸುವ ಮುನ್ನ ಅದರ ಪರಿಣಾಮಗಳು ಏನು ಎನ್ನುವುದರ ಬಗ್ಗೆ ಹೇಳಬೇಕು ಎಂಬುದು ನಮ್ಮ ವಾದವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೈ ಎಲೆಕ್ಷನಲ್ಲಿ ಆಡಳಿತ ಪಕ್ಷದ ಗೆಲುವು ಸಾಮಾನ್ಯ:

ಉಪಚುನಾವಣೆ ಸೋಲಿನ ಬಗ್ಗೆ ಪರಾಮರ್ಶನಾ ಸಭೆ ಮಾಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಶೋಕ್‌, ನಮ್ಮದು ರಾಷ್ಟ್ರೀಯ ಪಕ್ಷ. ಸೋಲಿನ ಪರಾಮರ್ಶನಾ ಸಭೆ ಮಾಡಿ ಚರ್ಚಿಸುತ್ತೇವೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರು ಮೃತಪಟ್ಟ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿದೆ. ಸಹಜವಾಗಿ ಮತದಾರರಲ್ಲಿ ಅನುಕಂಪ ಇರುತ್ತದೆ. ಅದರಂತೆ ಎರಡೂ ಕಡೆ ಮತ್ತೆ ಕಾಂಗ್ರೆಸ್‌ ಗೆದ್ದಿದೆ. ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ 16 ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವು 15 ಕಡೆ ಗೆದ್ದಿದ್ದೆವು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 5 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಉಪಚುನಾವಣೆಯಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಗಳ ಗೆಲುವು ಸರ್ವೆ ಸಾಮಾನ್ಯ. ಆದರೂ ನಾವು ಪ್ರಯತ್ನ ಮಾಡಿ ದಾವಣಗೆರೆಯಲ್ಲಿ ಗೆಲುವಿನ ಹತ್ತಿರ ಬಂದಿದ್ದೇವೆ. ನಮ್ಮಲ್ಲಿ ಯಾವುದೇ ವಿವಾದ ಇಲ್ಲದೆ ಚುನಾವಣೆ ಮಾಡಿದ್ದೇವೆ ಎಂದು ಹೇಳಿದರು.

ಉಪಚುನಾವಣೆ ಸೋಲಿನಿಂದ ಹೆದರಿ ಓಡಿ ಹೋಗುವ ಪ್ರಶ್ನೆಯೇ ಇಲ್ಲ. ಗೆಲ್ಲಲು ಕಾಂಗ್ರೆಸ್‌ ಏನು ಮಾಡಿದೆ ಎಂಬುದು ಜನರಿಗೆ ಗೊತ್ತಿದೆ. ಅದರ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ನಾವು ಸೋಲನ್ನು ಸ್ವೀಕರಿಸಿದ್ದೇವೆ. ಪರಾಮರ್ಶೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಇನ್ನೂ ಗಟ್ಟಿಯಾಗಿ ಕೆಲಸ ಮಾಡುತ್ತೇವೆ. 2028ಕ್ಕೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಶತಃಸಿದ್ಧ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೂಡ್ಸ್‌ ಶೆಡ್ ಲಾರಿ ನಿಲುಗಡೆ ಜಾಗ ಉಳಿಸಿ
ಶೀಘ್ರ ಕಾಮಗಾರಿ ಪೂರ್ಣಗೊಳಿಸಿ: ರಾವ್