ಕನ್ನಡಪ್ರಭ ವಾರ್ತೆ ಬೆಂಗಳೂರು:
ಸಾರಿಗೆ ನಿಗಮಗಳ ಲೆಕ್ಕದ ಪ್ರಕಾರ 2026ರ ಮಾ. 31ರ ವೇಳೆಗೆ 7130.80 ಕೋಟಿ ರು. ಹೊಣೆಗಾರಿಕೆಯಿದೆ. ಅದರಲ್ಲಿ ನೌಕರರ ಭವಿಷ್ಯ ನಿಧಿ ಬಾಕಿ 2298.20 ಕೋಟಿ ರು. ಮತ್ತು ಇಂಧನ ಪಾವತಿ ಬಾಕಿ 822.26 ಕೋಟಿ ರು. ಕೂಡ ಸೇರಿದೆ. ಆ ಮೊತ್ತ ಇದೀಗ ಮತ್ತಷ್ಟು ಹೆಚ್ಚಾಗಿದೆ.
ಅದರ ಜತೆಗೆ ಇದೀಗ ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣವಿದ್ದ ಕಾರಣದಿಂದಾಗಿ ನಿರಂತರ ಡೀಸೆಲ್ ಬೆಲೆ ಹೆಚ್ಚಳದಿಂದ ನಿಗಮಗಳ ಇಂಧನ ವೆಚ್ಚದ ಮೇಲೆ ಪರಿಣಾಮ ಬೀರುವಂತಾಗಿದೆ. ಡೀಸೆಲ್ ಬೆಲೆ ಹೆಚ್ಚಳದಿಂದಾಗಿ ನಾಲ್ಕೂ ನಿಗಮಗಳಿಗೆ ಇಂಧನಕ್ಕಾಗಿ ಹೆಚ್ಚುವರಿಯಾಗಿ ಮಾಸಿಕ ಅಂದಾಜು 40 ಕೋಟಿ ರು. ವೆಚ್ಚವಾಗುತ್ತಿದೆ. ಇದು ಹೀಗೆ ಮುಂದುವರಿದರೆ ವರ್ಷಕ್ಕೆ 500 ಕೋಟಿ ರು. ಆಸುಪಾಸಿನಲ್ಲಿ ಹೆಚ್ಚುವರಿ ಹೊರೆ ಬೀಳಲಿದೆ.ಇದರ ನಡುವೆಯೇ 2025ರ ಏ.1ರಿಂದ ಅನ್ವಯವಾಗುವಂತೆ ನಾಲ್ಕೂ ನಿಗಮಗಳ 1.05 ಲಕ್ಷ ನೌಕರರ ವೇತನ ಶೇ. 12.50ರಷ್ಟು ಹೆಚ್ಚಿಸಲಾಗಿದೆ. ಇದರಿಂದ ಮಾಸಿಕ 72.80 ಕೋಟಿ ರು. ಹಾಗೂ ವಾರ್ಷಿಕ 873.64 ಕೋಟಿ ರು. ಹೆಚ್ಚುವರಿ ವೆಚ್ಚವಾಗಲಿದೆ. ಉಳಿದಂತೆ 2023ರ ಮಾರ್ಚ್ 1ರಿಂದ ವೇತನ ಪರಿಷ್ಕರಣೆಯ 26 ತಿಂಗಳ ಹಿಂಬಾಕಿ ಮೊತ್ತ 1271.92 ಕೋಟಿ ರು. ಅನ್ನು ಸರ್ಕಾರದ ನೆರವಿನೊಂದಿಗೆ ನೌಕರರಿಗೆ ಪಾವತಿಸಲಾಗುತ್ತಿದೆ. ಸದ್ಯ ನಾಲ್ಕೂ ನಿಗಮಗಳ ಆದಾಯದಲ್ಲಿ ಸರಿಸುಮಾರು ಶೇ.85ರಷ್ಟನ್ನು ಸಿಬ್ಬಂದಿ ವೆಚ್ಚ ಮತ್ತು ಡೀಸೆಲ್ ವೆಚ್ಚಕ್ಕಾಗಿ ಬಳಸಲಾಗುತ್ತಿವೆ.
ಪ್ರಯಾಣ ದರ ಹೆಚ್ಚಳ ಸಂಬಂಧ ಈವರೆಗೆ ನಿಗಮಗಳಿಂದ ಸರ್ಕಾರಕ್ಕೆ ಯಾವುದೇ ಅಧಿಕೃತ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಆದರೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೊದಲ ಸಭೆಯಲ್ಲಿ ನಿಗಮಗಳ ಆರ್ಥಿಕ ಪರಿಸ್ಥಿತಿ ಮತ್ತು ಪ್ರಯಾಣ ದರ ಹೆಚ್ಚಳದ ಅನಿವಾರ್ಯತೆ ಕುರಿತು ಅಧಿಕಾರಿಗಳು ಪ್ರಸ್ತಾಪಿಸಿದ್ದರು. ಜತೆಗೆ ಪ್ರಯಾಣ ದರ ಹೆಚ್ಚಳದಿಂದ ನಿಗಮಗಳಿಗಾಗುವ ಲಾಭದ ಬಗ್ಗೆಯೂ ಸಿಎಂ ಅವರಿಗೆ ಮನವರಿಕೆ ಮಾಡುವ ಕೆಲಸ ಮಾಡಿದ್ದರು. ಅದಕ್ಕಾಗಿಯೇ ಡಿ.ಕೆ.ಶಿವಕುಮಾರ್ ಅವರು ಕೂಡ ಈ ಬಗ್ಗೆ ಚರ್ಚಿಸಿ ನಿರ್ಧರಿಸೋಣ ಎಂದು ಪ್ರತಿಕ್ರಿಯಿಸಿದ್ದರು.
ವೆಚ್ಚ ಹೆಚ್ಚಾದರೆ ಪ್ರಯಾಣ ದರ ಹೆಚ್ಚಳವಾಗುವ ನಿರೀಕ್ಷೆ:
18 ತಿಂಗಳ ಹಿಂದೆ ಹೆಚ್ಚಳ:ಈ ಹಿಂದೆ 2025ರ ಜನವರಿ 5ರಂದು ಶೇ.15ರಷ್ಟು ಬಸ್ ಪ್ರಯಾಣ ದರ ಹೆಚ್ಚಿಸಿ ಸರ್ಕಾರ ಆದೇಶಿಸಿತ್ತು. ಅದಕ್ಕೂ ಮುನ್ನ 2014ರಲ್ಲಿ ಬಿಎಂಟಿಸಿ ಹಾಗೂ 2020ರಲ್ಲಿ ಕೆಎಸ್ಸಾರ್ಟಿಸಿ, ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಪ್ರಯಾಣ ದರ ಹೆಚ್ಚಿಸಲಾಗಿತ್ತು. ಅಂದರೆ 10 ವರ್ಷಗಳ ನಂತರ ಬಿಎಂಟಿಸಿಯಲ್ಲಿ ಹಾಗೂ ಉಳಿದ ನಿಗಮಗಳಲ್ಲಿ 5 ವರ್ಷಗಳ ನಂತರ ದರ ಏರಿಕೆ ಮಾಡಲಾಗಿತ್ತು. ಅಲ್ಲದೆ, ಕಳೆದ ವರ್ಷ ಪ್ರಯಾಣ ದರ ಹೆಚ್ಚಳ ಮಾಡುವಾಗ ಡೀಸೆಲ್ ದರ 89 ರು. ಆಗಿತ್ತು. ಅದೇ ಈಗ 98ರಿಂದ 100 ರು.ಗೆ ತಲುಪಿದೆ. ಡೀಸೆಲ್ ಬೆಲೆ 10 ರು. ಹೆಚ್ಚಳವಾಗಿದೆ.