ಚನ್ನಪಟ್ಟಣ: ತಾಲೂಕಿನ ದೇವರಹಳ್ಳಿಯಲ್ಲಿ ನಾಡಪ್ರಭು ಕೆಂಪೇಗೌಡರ ಬ್ಯಾನರ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಘಟನೆಗೆ ಕಾರಣರಾದವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಯಿತು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು ಮಾತನಾಡಿ, ನಾಡಪ್ರಭು ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ ಹಾಕಿರುವ ಕಿಡಿಗೇಡಿಗಳ ಬಂಧನ ಆಗುವವರೆಗೆ ನಾವು ಪ್ರತಿಭಟನೆ ಕೈಬಿಡುವುದಿಲ್ಲ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಇದನ್ನು ಖಂಡಿಸಿ ಹೋರಾಟ ಮಾಡುತ್ತೇವೆ, ಒಕ್ಕಲಿಗರ ಸ್ವಾಭಿಮಾನದ ಸಂಕೇತವಾಗಿರುವ ಕೆಂಪೇಗೌಡರ ಇತಿಹಾಸ ತಿಳಿಯದ ಹೇಡಿಗಳು ಈ ಕೆಲಸ ಮಾಡಿದ್ದಾರೆ. ಅವರಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಬೇಕು.
ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ ಹಾಕಿದ ಸ್ಥಳದಲ್ಲೇ ಅವರ ಪ್ರತಿಮೆ ನಿರ್ಮಿಸಿ ಅವರಿಗೆ ಗೌರವ ಸಲ್ಲಿಸಬೇಕು, ಈ ವೃತ್ತಕ್ಕೆ ಕೆಂಪೇಗೌಡ ವೃತ್ತ ಎಂದು ಹೆಸರಿಡಬೇಕು ಎಂದು ಗ್ರಾಮದ ಮುಖಂಡರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎನ್.ಆನಂದಸ್ವಾಮಿ, ಮುಖಂಡರಾದ ಮಾಳಗಾಳು ರಾಜಪ್ಪ, ಎಲೇಕೇರಿ ರವೀಶ್, ರಾಂಪುರ ಧರಣೀಶ್, ಪ್ರಮೋದ್, ಪಿ.ಡಿ.ರಾಜು, ಹರಿದಾಸ್, ರೇಖಾ ಉಮಾಶಂಖರ್, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ರಮೇಶ್‌ಗೌಡ ಇತರರಿದ್ದರು.
ಚನ್ನಪಟ್ಟಣ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ಬ್ಯಾನರ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಖಂಡಿಸಿ ಒಕ್ಕಲಿಗ ಮುಖಂಡರು ಪ್ರತಿಭಟನೆ ನಡೆಸಿದರು.