2028ಕ್ಕೆ ರಾಜ್ಯವನ್ನು ಡ್ರಗ್ಸ್‌ ಮುಕ್ತವಾಗಿಸುವ ಗುರಿ: ಡಿಕೆಶಿ

KannadaprabhaNewsNetwork |  
Published : Jul 01, 2026, 01:45 AM IST
Drugs 37 | Kannada Prabha

ಸಾರಾಂಶ

ಕರ್ನಾಟಕವನ್ನು 2028ರ ವೇಳೆ ಮಾದಕ ವಸ್ತು ಮುಕ್ತ-ನಶೆ ಮುಕ್ತ ರಾಜ್ಯವನ್ನಾಗಿಸುವುದು ನಮ್ಮ ಗುರಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಕರ್ನಾಟಕವನ್ನು 2028ರ ವೇಳೆ ಮಾದಕ ವಸ್ತು ಮುಕ್ತ-ನಶೆ ಮುಕ್ತ ರಾಜ್ಯವನ್ನಾಗಿಸುವುದು ನಮ್ಮ ಗುರಿ. ಅದನ್ನು ಸಾಧಿಸಲು ಸಾರ್ವಜನಿಕರು, ಯುವಜನತೆ ಮತ್ತು ವಿದ್ಯಾರ್ಥಿಗಳು ಸರ್ಕಾರದ ಜತೆ ಕೈ ಜೋಡಿಸಿದರೆ ದಂಧೆಯನ್ನು ಬುಡಸಮೇತ ಕಿತ್ತು ಹಾಕಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.ರಾಜ್ಯ ಪೊಲೀಸ್‌ ಇಲಾಖೆಯಿಂದ ಮಂಗಳವಾರ ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನ 2026 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಶೆ ಬಿಡಿ ಖುಷಿ ಪಡಿ ಎಂಬುದು ನಮ್ಮ ಪರಿಕಲ್ಪನೆ. ನಮ್ಮ ಜೀವನದ ಆದರ್ಶವನ್ನು ನಾವೇ ರೂಪಿಸಿಕೊಳ್ಳಬೇಕು. ಅನೇಕರು ನಮ್ಮ ಮೇಲೆ ಒತ್ತಡ ಹೇರಬಹುದು. ಆದರೆ, ಯುವಜನರು ದೇಹ, ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಮಾನಸಿಕ ಸ್ಥಿಮಿತ ಕಳೆದುಕೊಳ್ಳಬಾರದು. ಕಳೆದ ಮೂರು ವರ್ಷಗಳಲ್ಲಿ ಹಿಂದಿನ ಗೃಹ ಸಚಿವರಾಗಿದ್ದ ಡಾ.ಪರಮೇಶ್ವರ್‌ ಅವರ ನೇತೃತ್ವದಲ್ಲಿ 89 ಕೋಟಿ ರು. ಮೊತ್ತದ ಮಾದಕ ವಸ್ತು ನಾಶ ಮಾಡಲಾಗಿದೆ. ಈ ಜಾಲ ಬೇಧಿಸಿದ ಎಲ್ಲ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸಮಾಜದಲ್ಲಿ ಗೌರವ ಹಾಳಾಗುತ್ತದೆ ಎಂದು ಮಕ್ಕಳ ಪೋಷಕರು ಯಾವುದೇ ವಿಚಾರ ಮುಚ್ಚಿಟ್ಟುಕೊಳ್ಳಬಾರದು. ಪೊಲೀಸರಿಗೆ ವಿಚಾರ ತಿಳಿಸಿ ಮೂಲವನ್ನು ಕಂಡು ಹಿಡಿಯಲು ಸಹಾಯ ಮಾಡಬೇಕು. ಈ ಜಾಲದಿಂದ ಮಕ್ಕಳನ್ನು ಕಾಪಾಡಬೇಕು. ಮಕ್ಕಳ ಹೆಸರು ಬಹಿರಂಗಗೊಳ್ಳದಂತೆ ಪೊಲೀಸ್‌ ಇಲಾಖೆ ಕೆಲಸ ಮಾಡಲಿದೆ. ಆ ಬಗ್ಗೆ ನಾನು ನಿರ್ದೇಶನ ನೀಡುತ್ತೇನೆ ಎಂದರು.

ಮಾಹಿತಿ ನೀಡಿದರೆ ಬಹುಮಾನ:

ಮಾದಕ ವಸ್ತುಗಳ ಸೇವನೆ ಕುರಿತು ಸಾರ್ವಜನಿಕರು ಗುಪ್ತ ಮಾಹಿತಿ ನೀಡಿದರೆ ಪೊಲೀಸ್‌ ಇಲಾಖೆಯಿಂದ ಅವರಿಗೆ ಬಹುಮಾನ ನೀಡಲಾಗುವುದು. ಅದರಿಂದ ಮಾದಕ ವಸ್ತು ಸರಬರಾಜು ಜಾಲ ಪತ್ತೆ ಮಾಡಿ ಹತ್ತಿಕ್ಕಲು ಸಾಧ್ಯವಾಗಲಿದೆ. ಮಾದಕ ವಸ್ತುಗಳ ವಿರುದ್ಧದ ಹೋರಾಟದಿಂದ ಕುಟುಂಬ, ಊರು, ಪರಿಸರ ಮತ್ತು ರಾಜ್ಯಕ್ಕೆ ಒಳ್ಳೆಯದಾಗಲಿದೆ ಎಂದು ಶಿವಕುಮಾರ್‌ ತಿಳಿಸಿದರು.

ಪಾನ್‌ ಮಸಾಲಾ, ಗುಟ್ಕಾದಲ್ಲೂ ಅಮಲು ಪದಾರ್ಥಗಳನ್ನು ಬೆಸರೆಸುವುದು ಗಮನಕ್ಕೆ ಬಂದಿದೆ. ದೂರವಾಣಿ ಮೂಲಕ ಸಂಪರ್ಕಿಸಿ ಮನೆಗಳಿಗೇ ಅಮಲು ಪದಾರ್ಥಗಳನ್ನು ತಲುಪಿಸುತ್ತಿರುವ ಮಾಹಿತಿಯಿದೆ. ಪಾನ್‌ ಮಸಾಲಾ, ಗುಟ್ಕಾದಲ್ಲಿ ಅಮಲು ಪದಾರ್ಥ ಬೆರೆಸುವುದು ತಿಳಿದುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

184 ಕೋಟಿ ರು. ಮೌಲ್ಯದ ಮಾದಕ ವಸ್ತು ಜಪ್ತಿ

ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನ ಅಂಗವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆ 97.90 ಕೋಟಿ ರು. ಮೌಲ್ಯದ 4,276.405 ಕೆ.ಜಿ. ಮಾದಕ ವಸ್ತುಗಳನ್ನು ನಾಶಪಡಿಸಿದೆ. 2025ರಲ್ಲಿ ಆರೋಪಿಗಳ ವಿರುದ್ಧ 9064 ಕೇಸ್‌ ದಾಖಲಾಗಿದ್ದು, 216.93 ಕೋಟಿ ರು. ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಲಾಗಿದೆ. 2026 ಮೇ ವರೆಗೆ 6,651 ಕೇಸ್‌ಗಳಲ್ಲಿ 1,84.72 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ರಾಜ್ಯದಲ್ಲಿ ಬೇಡ ಬ್ರೋ ಅಭಿಯಾನ:

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ರಾಜ್ಯ ಸರ್ಕಾರ ಜೀರೋ ಟಾಲರೆನ್ಸ್‌ ನೀತಿ ಜಾರಿಗೆ ತಂದಿದೆ. ಗೃಹ ಇಲಾಖೆ ಜಾರಿಗೆ ತಂದಿರುವ ಆಪರೇಷನ್‌ ರೈಸ್‌ ಕಾರ್ಯಕ್ರಮ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲಿದೆ. ಜತೆಗೆ ಯುವಜನರಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಲು ‘ಬೇಡ ಬ್ರೋ’ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು. ಈ ಅಭಿಯಾನದಡಿ ಎಲ್ಲ ಶಿಕ್ಷಣ ಸಂಸ್ಥೆಗಳು ಮತ್ತು ಯುವ ಸಮುಯದಾಯ ಹೆಚ್ಚಿರುವ ಪ್ರದೇಶಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ವಿವರಿಸಿದರು.

ಶಾಸಕ ರಿಜ್ವಾನ್‌ ಅರ್ಷದ್‌, ಪೊಲೀಸ್‌ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌, ರಾಜ್ಯ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಆರ್‌. ಹಿತೇಂದ್ರ ಇತರರಿದ್ದರು.ವಿದ್ಯಾರ್ಥಿಗಳೊಂದಿಗೆ ಸಿಎಂ ಸೆಲ್ಫಿ

ಕಾರ್ಯಕ್ರಮದಲ್ಲಿ ಏರ್ಪಡಿಸಲಾಗಿದ್ದ ಪ್ರದರ್ಶನವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವೀಕ್ಷಣೆ ಮಾಡಿದರು. ಈ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಸಿಎಂ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಪ್ರತಿಯೊಬ್ಬರೊಂದಿಗೂ ಡಿ.ಕೆ. ಶಿವಕುಮಾರ್‌ ಫೋಟೋ ಪೋಸ್‌ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಪರ್ಧಾತ್ಮಕ ಪರೀಕ್ಷೆಗೆ ಪಿಯುಸಿಯಿಂದಲೇ ಅಣಿಯಾಗಿ
ಪಾವಗಡದಲ್ಲಿ ಕಾಯಂ ಶಿಕ್ಷಕರ ಕೊರತೆ