ಕನ್ನಡಪ್ರಭ ವಾರ್ತೆ ಬೆಂಗಳೂರು:
ಶನಿವಾರ ನಗರದ ಅರಮನೆ ಮೈದಾನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿದ್ದ ‘ನಮ್ಮಭಿಮಾನದ ಅಭಿನಂದನೆ’ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ನನ್ನ ಹಾಗೂ ಪರಮೇಶ್ವರ್ ಅವರ ಮುಂದೆ ಬೇಡಿಕೆಗಳನ್ನು ಇಟ್ಟಿದ್ದೀರಿ, ಅದರ ಬಗ್ಗೆ ನಾವು ಆಲೋಚನೆ ಮಾಡುತ್ತೇವೆ. ಹಳೆ ಪಿಂಚಣಿ ಯೋಜನೆ ಮರುಜಾರಿ ಮಾಡುವ ಕುರಿತು ಅಧ್ಯಯನ ನಡೆಸಲು ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದೆ. ಸಮಿತಿ ವರದಿ ಬಂದ ಮೇಲೆ ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಸಿ ನಂತರ ನಿಮ್ಮ ಜೊತೆಯೂ ಚರ್ಚೆ ನಡೆಸಲಾಗುವುದು. ನಮ್ಮ ಕೈಯಲ್ಲಿ ಏನು ಸಹಾಯ ಆಗುವುದೋ ಅದನ್ನು ಮಾಡುತ್ತೇವೆ. ಎಲ್ಲದಕ್ಕೂ ಶುಭ ಕಾಲ, ಶುಭಗಳಿಗೆ ಬರಬೇಕು. ಬಸವಣ್ಣನ ನಾಡಿನಲ್ಲಿ ಹುಟ್ಟಿರುವವರು ನಾವು ಕೊಟ್ಟ ಮಾತು ಉಳಿಸಿಕೊಳ್ಳುವವರು. ನುಡಿದಂತೆ ನಡೆವ ಸರ್ಕಾರ ಕಾಂಗ್ರೆಸ್ ಸರ್ಕಾರ ಮಾತ್ರ. ಇದು ನಿಮ್ಮ ಸರ್ಕಾರ ಎಂದರು.ಮಾತು ಉಳಿಸಿಕೊಳ್ಳುವುದು ಮುಖ್ಯ:
ನಾನು ಅಧಿಕಾರ ಸ್ವೀಕಾರ ಮಾಡಿದ ಬಳಿಕ ಹೊಸ ಇಲಾಖೆ ರಚನೆ ಮಾಡಿದ್ದೇನೆ. ನಮ್ಮ ರಾಜ್ಯದಲ್ಲಿ ಅನೇಕ ಹೋರಾಟಗಳು ನಡೆಯುತ್ತವೆ. ನೀವು ನಮ್ಮ ಬೇಡಿಕೆ ನಮ್ಮ ಮುಂದೆ ಇಟ್ಟಾಗ, ಇದನ್ನು ಕಾನೂನು ಚೌಕಟ್ಟಿನಲ್ಲಿ ಹೇಗೆ ಬಗೆಹರಿಸಬಹುದು, ಆರ್ಥಿಕ ಪರಿಸ್ಥಿತಿ ಏನು ಎಂದು ಪರಿಶೀಲನೆ ಮಾಡಲಾಗುವುದು. ಹೀಗೆ ಜನಸಾಮಾನ್ಯರ ನೋವು ಬಗೆಹರಿಸಲು ಪ್ರಜಾಸೇವೆ ಎಂಬ ಪ್ರತ್ಯೇಕ ಸಚಿವಾಲಯ ಪ್ರಾರಂಭಕ್ಕೆ ತೀರ್ಮಾನಿಸಲಾಗಿದೆ. ಎಲ್ಲಾ ಮಂತ್ರಿಗಳು ಮೊದಲನೇ ಹಾಗೂ ಮೂರನೇ ಶನಿವಾರ ಒಂದೊಂದು ತಾಲೂಕು ಕಚೇರಿಗೆ ಹೋಗಿ ಅಲ್ಲಿನ ಜನರ ಸಮಸ್ಯೆ ಆಲಿಸಬೇಕು. ಜನರ ಮನೆ ಬಾಗಿಲಿಗೆ ಸರ್ಕಾರ ಕೊಂಡೊಯ್ಯಲು ಈ ತೀರ್ಮಾನ ಮಾಡಲಾಗಿದೆ.
ನಾನು ಹಾಗೂ ಪರಮೇಶ್ವರ್ ಅವರು ನಿಮ್ಮ ಜೊತೆ ಇರುತ್ತೇವೆ ಎಂದು ಮಾತು ಕೊಡುತ್ತೇನೆ. ನಮ್ಮ ನಡುವಿನ ಈ ಒಪ್ಪಂದಕ್ಕೆ ನಿರ್ಮಲಾನಂದನಾಥ ಹಾಗೂ ಸಿದ್ದಲಿಂಗ ಸ್ವಾಮೀಜಿಗಳಿಬ್ಬರು ಸಾಕ್ಷಿ. ಪರಮೇಶ್ವರ್ ಅವರ ಬಳಿ ಬಾಂಡ್ ಪೇಪರ್ ಇದೆ. ಎಲ್ಲರೂ ಸೇರಿ ಇದಕ್ಕೆ ಸಹಿ ಹಾಕಬೇಕು. ಅದರಲ್ಲಿ ಮುಂದಿನ ಬಾರಿಗೆ ನಿಮ್ಮ-ನಮ್ಮ ಸರ್ಕಾರ ಒಟ್ಟಿಗೆ ಕೆಲಸ ಮಾಡಬೇಕು. ಯಾವುದೇ ಹೆಚ್ಚು ಕಡಿಮೆ ಆಗುವುದಿಲ್ಲ ತಾನೇ? ನಾವು ನಿಮ್ಮ ಜೊತೆ ನಿಲ್ಲುತ್ತೇವೆ. ಪರಮೇಶ್ವರ್ ಅವರ ಬಾಂಡ್ ಪೇಪರ್ ಅನ್ನು ಭದ್ರವಾಗಿ ಇಟ್ಟುಕೊಳ್ಳಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕೇಂದ್ರ ಸರ್ಕಾರಿ ನೌಕರರಿಗೂ ರಾಜ್ಯ ಸರ್ಕಾರಿ ನೌಕರರಿಗೂ ವೇತನ ಶ್ರೇಣಿಯಲ್ಲಿ ಭಾರೀ ಅಂತರವಿದೆ. ರಾಜ್ಯದ ನೌಕರರಿಗೆ ಕೇಂದ್ರಕ್ಕೆ ಸಮಾನವಾದ ವೇತನ ನೀಡಬೇಕು. 8ನೇ ವೇತನ ಆಯೋಗ ರಚಿಸಿ, ಪಡೆದ ವರದಿಯನ್ನು ಅನುಷ್ಠಾನ ಮಾಡುವಾಗ ವೇತನ ತಾರತಮ್ಯ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. 4.70 ಲಕ್ಷ ನಿವೃತ್ತ ನೌಕರರು ಹಾಗೂ ಅವರ ಅವಲಂಬಿತರಿಗೆ ಸಂಧ್ಯಾ ಕಿರಣ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಸರ್ಕಾರಕ್ಕೆ ಮನವಿ ಮಾಡಿದರು.
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳನ್ನು ಐದು ವರ್ಷಗಳಲ್ಲಿ ಭರ್ತಿ ಮಾಡಲಾಗುವುದು. ಈ ಪೈಕಿ ಸುಮಾರು 72,186 ಹುದ್ದೆಗಳ ನೇಮಕಾತಿಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಿ, ನೇಮಕಾತಿ ಆದೇಶಗಳನ್ನು ನೀಡಲು ಈಗಾಗಲೇ ಪ್ರಕ್ರಿಯೆಗಳು ಆರಂಭವಾಗಿವೆ. ಉಳಿದ ಹುದ್ದೆಗಳನ್ನೂ ಹಂತ-ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದರು.