ಲೋಕಲ್‌ ಫೈಟ್‌ಗೆ ಲೆಕ್ಕಾಚಾರ ಶುರು, ಕಾರ್ಯಕರ್ತರಲ್ಲಿ ಅಸಮಾಧಾನ

KannadaprabhaNewsNetwork |  
Published : Nov 05, 2026, 01:15 AM IST
ಫೋಟೋ- ಆರ್ಟಿಕಲ್‌ 371 | Kannada Prabha

ಸಾರಾಂಶ

ಚಿಕ್ಕಮಗಳೂರುರಾಜ್ಯ ಸರ್ಕಾರ ಹೊರಡಿಸಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ವರ್ಗಾವಾರು ಮೀಸಲಾತಿ ಅಧಿಸೂಚನೆ ಕೆಲವು ಆಕಾಂಕ್ಷಿಗಳಲ್ಲಿ ನಿರೀಕ್ಷೆ ಹುಟ್ಟಹಾಕಿದ್ದರೆ, ಹಲವರಿಗೆ ನಿರಾಸೆಯನ್ನೂ ಮೂಡಿಸಿದೆ.

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ರಾಜ್ಯ ಸರ್ಕಾರ ಹೊರಡಿಸಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ವರ್ಗಾವಾರು ಮೀಸಲಾತಿ ಅಧಿಸೂಚನೆ ಕೆಲವು ಆಕಾಂಕ್ಷಿಗಳಲ್ಲಿ ನಿರೀಕ್ಷೆ ಹುಟ್ಟಹಾಕಿದ್ದರೆ, ಹಲವರಿಗೆ ನಿರಾಸೆಯನ್ನೂ ಮೂಡಿಸಿದೆ.ಅ.7ರಂದು ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯ 36 ಕ್ಷೇತ್ರಗಳು ಮತ್ತು ತಾಲೂಕು ಪಂಚಾಯಿತಿಯ 100 ಕ್ಷೇತ್ರಗಳಿಗೆ ವರ್ಗಾವಾರು ಮೀಸಲಿರಿಸಿರುವ ಸ್ಥಾನಗಳ ಸಂಖ್ಯೆ ನಿಗದಿ ಪಡಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಇದಾದ ಬಳಿಕ ಅ.9 ರಂದು ಕ್ಷೇತ್ರಗಳ ಸ್ಥಾನಗಳನ್ನು ವರ್ಗಾವಾರು ಮೀಸಲು ಇರಿಸಿ ಅಧಿಸೂಚನೆ ಹೊರಡಿಸಲಾಗಿದೆ. ಈ ಆದೇಶ ಪತ್ರ ಹೊರ ಬೀಳುತ್ತಿದ್ದಂತೆಯೇ ಸ್ಥಳೀಯ ರಾಜಕಾರಣದ ರಾಜಕೀಯ ಲೆಕ್ಕಾಚಾರ ಸದ್ದಿಲ್ಲದೆ ಆರಂಭಗೊಂಡಿದೆ. ಇದರಲ್ಲಿ ಕೆಲವರಿಗೆ ರಾಜಕೀಯ ಭವಿಷ್ಯದ ನಿರೀಕ್ಷೆ ಮೂಡಿದರೆ, ಹಲವರಿಗೆ ನಿರಾಸೆ ಎದುರಾಗಿದೆ.ಆಕಾಂಕ್ಷಿಗಳ ವಲಯದೊಳಗೇನಾಗುತ್ತಿದೆ?:

ರಾಜಕಾರಣದಲ್ಲಿ ಚುನಾವಣೆ ಸ್ಪರ್ಧೆ ಬಹುದಿನಗಳ ಗುರಿಯಾಗಿರುತ್ತದೆ. ಕೆಲವೇ ಕೆಲವು ಸಂದರ್ಭಗಳಲ್ಲಿ ತಕ್ಷಣ ಕೈಗೊಂಡ ನಿರ್ಧಾರವಾಗಿರುತ್ತದೆ. ರಾಜಕಾರಣಕ್ಕೆ ಬರುವುದು, ಸಂಘಟನೆ ಮಾಡುವುದು, ಸಮಾಜಸೇವೆಯಲ್ಲಿ ತೊಡಗುವುದು, ಪಕ್ಷದ ಜವಾಬ್ದಾರಿ ನಿಭಾಯಿಸುವುದು ಅಂತಿಮವಾಗಿ ಚುನಾವಣೆಗೆ ಸ್ಪರ್ಧೆ ಮಾಡುವುದು ಗುರಿ. ಬಹುತೇಕರು ಈ ಮಾರ್ಗದಲ್ಲೇ ಸಾಗುತ್ತಿದ್ದಾರೆ. ಜಿ.ಪಂ ಮತ್ತು ತಾ.ಪಂ ಚುನಾವಣೆಗಳಿಗೆ ಸ್ಪರ್ಧೆ ಮಾಡಬೇಕೆಂದು ಬಹುದಿನಗಳಿಂದ ಗುರಿ ಇಟ್ಟುಕೊಂಡಿ ರುವವರಿಗೆ ಸೂಕ್ತವಾಗುವಂತೆ ಕ್ಷೇತ್ರದ ಮೀಸಲು ಪ್ರಕಟವಾಗಿರುವುದು ನಿರೀಕ್ಷೆಯನ್ನೂ ಹುಟ್ಟುಹಾಕಿದೆ. ಆದರೆ ಇನ್ನು ಕೆಲವರಿಗೆ ಮೀಸಲು ಪ್ರಕಾರ ಅವಕಾಶ ಕೈತಪ್ಪುತ್ತಿರುವುದು ನಿರಾಸೆ ಮೂಡಿಸಿದೆ. ಹೀಗಾಗಿ ಆಕಾಂಕ್ಷಿಗಳ ವಲಯದಲ್ಲಿ ಮೀಸಲು ಪ್ರಕಟವಾಗಿರುವ ಅಧಿಸೂಚನೆಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಅವಕಾಶವಿರುವ ಆಕಾಂಕ್ಷಿಗಳಲ್ಲಿ ರಾಜಕೀಯ ಲೆಕ್ಕಾಚಾರ ಆರಂಭಗೊಂಡಿದೆ. ತಮಗೆ ಸೂಕ್ತವಾದ ಕ್ಷೇತ್ರದಲ್ಲಿ ಬೇರೆ ಯಾವ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲು ಆಸಕ್ತಿ ಹೊಂದಿದ್ದಾರೆ, ಮೀಸಲು ಪ್ರಕಾರ ಯಾರಿಗೆ ಅವಕಾಶ ಸಿಗಬಹುದು ಎನ್ನು ವುದನ್ನು ಅಂದಾಜಿಸಲಾಗುತ್ತಿದೆ. ಆದರೆ, ಜಿ.ಪಂ ಮತ್ತು ತಾ.ಪಂ ಚುನಾವಣೆ ಭವಿಷ್ಯದ ದೃಷ್ಟಿಯಿಂದ ಒಂದು ಕ್ಷೇತ್ರವನ್ನು ಸಜ್ಜುಗೊಳಿಸಿಕೊಂಡು ಕೊನೆಗೆ ಮೀಸಲು ಪ್ರಕಾರ ಬೇರೆಯವರಿಗೆ ಅವಕಾಶ ಕೊಡಬೇಕಾಗಿ ಬಂದಿರುವವರಿಗೆ ಬೇಸರ ಮೂಡಿಸಿದೆ.

----ಬಾಕ್ಸ್---ರಾಜಕಾರಣಿಗಳ ಮಕ್ಕಳಿಗೆ ಕ್ಷೇತ್ರ?ಜಿಲ್ಲಾ ಪಂಚಾಯಿತಿಯಲ್ಲಿನ 36 ಕ್ಷೇತ್ರಗಳ ಪೈಕಿ ನಾಲ್ಕೈ ದು ಕ್ಷೇತ್ರಗಳನ್ನು ಹಾಲಿ ಹಾಗೂ ಮಾಜಿ ಶಾಸಕರು, ವಿಧಾನ ಪರಿಷತ್ತು ಸದಸ್ಯರ ಮಕ್ಕಳಿಗೆ ಅನುಕೂಲವಾಗುವಂತೆ ಕ್ಷೇತ್ರಗಳ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪಡಿಸಲಾಗಿದೆ ಎಂಬ ಆರೋಪ ದೊಡ್ಡ ಮಟ್ಟದಲ್ಲಿ ಕೇಳಿ ಬಂದಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಅಂಬಳೆ ಜಿಪಂ ಕ್ಷೇತ್ರ ಈ ಹಿಂದೆ ಮೀಸಲಾತಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಎಸ್ಸಿ ಗೆ ಮೀಸ ಲಿಡಲಾಗಿತ್ತು. ಇದೀಗ, ಬಿಸಿಎಂ (ಎ) ಮಹಿಳಾ ಅಭ್ಯರ್ಥಿಗೆ ಮೀಸಲಿಡಲಾಗಿದೆ. ಸರ್ಕಾರದ ಮೇಲೆ ಒತ್ತಡ ಹಾಕಿ ಈ ರೀತಿ ಮೀಸಲಾತಿ ನಿಗದಿ ಪಡಿಸಲಾಗಿದೆ.

ಅದೇ ರೀತಿಯಲ್ಲಿ ಕೆಲವು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಬದಲಾವಣೆ ಮಾಡಿ ಪ್ರಭಾವಿ ರಾಜಕಾರಣಿಗಳು ತಮ್ಮ ಮಕ್ಕಳು ಮತ್ತು ಕುಟುಂಬಸ್ಥರಿಗೆ ಅನುಕೂಲ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿವೆ.... ಬಾಕ್ಸ್‌....

ರಾಜಕಾರಣಗಳ ಮಕ್ಕಳಿಗೆ ಜಿಪಂ ಮೂಲಕ ವೇದಿಕೆ

ಈಗಾಗಲೇ ಜಿಲ್ಲಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿರುವ ವಿಧಾನಪರಿಷತ್ತಿನ ಮಾಜಿ ಉಪ ಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಅವರ ಪುತ್ರ ಸೋನಲ್‌ ಗೌಡ ಸಖರಾಯಪಟ್ಟ ಅಥವಾ ದೇವನೂರು ವ್ಯಾಪ್ತಿಯಲ್ಲಿ ಜಿಪಂ ಕ್ಷೇತ್ರದಿಂದ ಸ್ಪರ್ಧೆಗೆ ತಯಾರಿ ಆರಂಭಿಸಲಾಗಿದೆ. ಇನ್ನೂ ಹಾಲಿ ವಿಧಾನಪರಿಷತ್ತು ಸದಸ್ಯ ಎಸ್‌.ಎಲ್‌.ಭೋಜೇಗೌಡ ಅವರು ವಸ್ತಾರೆ ಕ್ಷೇತ್ರದಿಂದ ಪುತ್ರನನ್ನು ಕಣಕ್ಕೀಳಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಇನ್ನೂ ತರೀಕೆರೆ ಶಾಸಕ ಶ್ರೀನಿವಾಸ್‌ ಅವರ ಪುತ್ರಿ ರಚನಾ ಶ್ರೀನಿವಾಸ್‌ ಅವರು ಲಿಂಗದಹಳ್ಳಿ ಜಿಪಂ ಕ್ಷೇತ್ರದಿಂದ ಸ್ಪರ್ಧೆ ನಡೆಸಲು ತಯಾರಿ ಮಾಡಿಕೊಂಡಿದ್ದಾರೆ. ಇನ್ನು ಇದೇ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಶ್ರೀನಿವಾಸ್‌ ಎದುರು ಪರಾಜಿತಗೊಂಡ ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ ಅವರ ಪತ್ನಿ ಅನುಸೂಯ ಕಣಕ್ಕೀಳಿಸುವುದಕ್ಕೆ ತಯಾರಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಡೂರು ಕೃಷ್ಣ ಮೂರ್ತಿ ಎಂದು ಹೆಸರುವಾಸಿಯಾಗಿದ್ದ ಮಾಜಿ ಶಾಸಕ ಕೃಷ್ಣ ಮೂರ್ತಿ ಅವರ ಪುತ್ರ ಶರತ್‌ ಕೃಷ್ಣ ಮೂರ್ತಿ ಯಗಟಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.-- ಬಾಕ್ಸ್‌---

ಲೋಕಲ್‌ ನಲ್ಲೂ ವಂಶ ಪಾರಂಪರ್ಯ ರಾಜಕಾರಣ

ಜಿಪಂ, ತಾಪಂ ಕ್ಷೇತ್ರದ ಚುನಾವಣೆ ಸ್ಪರ್ಧೆಗೂ ರಾಜಕಾರಣಿಗಳು ತಮ್ಮ ಕುಟುಂಬಸ್ಥರಿಗೆ ಅನುಕೂಲವಾಗುವಂತೆ ಮೀಸ ಲಾತಿ ನಿಗದಿಯಾಗುವಂತೆ ಪ್ರಭಾವ ಉಂಟು ಮಾಡಿರುವುದು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಬೇಸರ ಉಂಟಾಗಿದೆ. ಪಕ್ಷದ ಬಾವುಟ ಕಟ್ಟಿ, ಜೈಕಾರ ಹಾಕುವುದಕ್ಕೆ ಕಾರ್ಯಕರ್ತರ ಹೆಸರಿನ ಕಾರ್ಮಿಕರು ಬೇಕು, ಅಧಿಕಾರ, ಅವಕಾಶಗಳನ್ನು ಪಡೆಯುವುದಕ್ಕೆ ಕುಟುಂಬಸ್ತರು ಬೇಕಾ ಎಂಬ ಪ್ರಶ್ನೆಗಳನ್ನು ಕಾರ್ಯಕರ್ತರು ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ