ಪರಿಶಿಷ್ಟ ಪಂಗಡಗಳಿಗೂ ಒಳಮೀಸಲಾತಿ ಜಾರಿಗೆ ಕೂಗು

KannadaprabhaNewsNetwork |  
Published : Dec 02, 2025, 02:15 AM IST
ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಮುಂದಾಗಿರುವ ಬೆನ್ನಲ್ಲೇ, ಇದೀಗ ಪರಿಶಿಷ್ಟ ಪಂಗಡಗಳ ಆಂತರಿಕ ಮೀಸಲಾತಿಗಾಗಿ ಹೋರಾಟ ತೀವ್ರಗೊಂಡಿದೆ.

ಪ್ರತ್ಯೇಕ ಆಯೋಗ ರಚನೆಗೆ ಶಾಂತಾರಾಮ ಸಿದ್ದಿ ಆಗ್ರಹ

ಕನ್ನಡಪ್ರಭ ವಾರ್ತೆ ಕಾರವಾರ

ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಮುಂದಾಗಿರುವ ಬೆನ್ನಲ್ಲೇ, ಇದೀಗ ಪರಿಶಿಷ್ಟ ಪಂಗಡಗಳ ಆಂತರಿಕ ಮೀಸಲಾತಿಗಾಗಿ ಹೋರಾಟ ತೀವ್ರಗೊಂಡಿದೆ. ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿನ ಅನ್ವಯ, ಎಸ್‌ಟಿ ಸಮುದಾಯದೊಳಗಿನ ಅತಿಸಣ್ಣ ಹಾಗೂ ಧ್ವನಿಯಿಲ್ಲದ ಜಾತಿಗಳಿಗೂ ಸಾಮಾಜಿಕ ನ್ಯಾಯ ಒದಗಿಸಲು ಒಳಮೀಸಲಾತಿ ಕಲ್ಪಿಸಬೇಕೆಂದು ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಟ ಪಂಗಡಗಳ ಒಳಮೀಸಲಾತಿ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

​ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ, ರಾಜ್ಯದಲ್ಲಿ ಸುಮಾರು 49 ಲಕ್ಷ ಜನ ಪರಿಶಿಷ್ಟ ಪಂಗಡದಲ್ಲಿ ಇದ್ದಾರೆ. 49 ಬುಡಕಟ್ಟು ಸಮುದಾಯ ಮೀಸಲಾತಿಯಿಂದ ವಂಚಿತವಾಗಿದೆ. ಸರ್ಕಾರಿ ನೌಕರಿ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಮೀಸಲಾತಿಯಲ್ಲಿ ವಂಚಿತವಾಗಿದೆ. ಈ ಹಿನ್ನಲೆಯಲ್ಲಿ ತುಳಿತಕ್ಕೊಳಗಾದ ಪರಿಶಿಷ್ಟ ಪಂಗಡದ ಕೆಲ ಬುಡಕಟ್ಟು ಸಮುದಾಯಕ್ಕೆ ನ್ಯಾಯ ಕೊಡಿಸಬೇಕು ಎಂದರು.

ಆ. 1, 2024 ರಂದು ಸುಪ್ರೀಂಕೋರ್ಟ್‌ನ ಏಳು ಸದಸ್ಯರ ಸಂವಿಧಾನ ಪೀಠ ನೀಡಿದ ತೀರ್ಪು ಸಾಮಾಜಿಕ ನ್ಯಾಯದ ಹಾದಿಯಲ್ಲಿ ಒಂದು ಮೈಲಿಗಲ್ಲಾಗಿದೆ. ನ್ಯಾಯಾಲಯದ ಆದೇಶದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎರಡೂ ವರ್ಗಗಳಿಗೆ ಒಳಮೀಸಲಾತಿ ಹಂಚಿಕೆ ಮಾಡುವುದು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಆದರೆ, ಸರ್ಕಾರ ಸದ್ಯಕ್ಕೆ ಪರಿಶಿಷ್ಟ ಜಾತಿಯವರನ್ನು ಮಾತ್ರ ಪರಿಗಣಿಸಿದ್ದು, ಪರಿಶಿಷ್ಟ ಪಂಗಡದವರ ಬೇಡಿಕೆಯನ್ನು ನಿರ್ಲಕ್ಷಿಸಿದೆ. ಸರ್ಕಾರದ ಈ ನಡೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಒಟ್ಟು 50 ಜಾತಿಗಳಿದ್ದು, 2011ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ 42.48 ಲಕ್ಷವಿದೆ. ಇದರಲ್ಲಿ ವಾಲ್ಮೀಕಿ ಸಮುದಾಯವೊಂದೇ 32.96 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದರೆ, ಉಳಿದ 49 ಜಾತಿಗಳ ಒಟ್ಟು ಜನಸಂಖ್ಯೆ ಕೇವಲ 9.52 ಲಕ್ಷವಾಗಿದೆ. ಮೀಸಲಾತಿಯ ಸಿಂಹಪಾಲು ಒಂದೇ ಸಮುದಾಯಕ್ಕೆ ದಕ್ಕುತ್ತಿರುವುದರಿಂದ, ಅತಿಸಣ್ಣ ಸಮುದಾಯಗಳಿಗೆ ಸರ್ಕಾರಿ ನೌಕರಿ ಇಂದಿಗೂ ಗಗನ ಕುಸುಮವಾಗಿಯೇ ಉಳಿದಿದೆ ಎಂದರು.

ಈಗಾಗಲೇ ಈ ವಿಚಾರವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ನಾಯಕರು ಬೆಂಗಳೂರಿನಲ್ಲಿ ಸಭೆ ನಡೆಸಿ ನಿರ್ಣಯ ಕೈಗೊಂಡಿದ್ದು, ರಾಜ್ಯ ಮುಖ್ಯ ಕಾರ್ಯದರ್ಶಿಗಳು, ಕಾನೂನು ಸಚಿವ ಎಚ್.ಕೆ. ಪಾಟೀಲ್ ಮತ್ತು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ನಾಯಕರ ತೀರ್ಮಾನದಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

​ಇಡಗುಂದಿ ಗ್ರಾಪಂ ಉಪಾಧ್ಯಕ್ಷೆ ನಾಗವೇಣಿ ಸಿದ್ದಿ ಮಾತನಾಡಿ, ಬುಡಕಟ್ಟು ಸಮುದಾಯದ ಎಲ್ಲರಿಗೂ ಸೌಲಭ್ಯ ಸಿಗಬೇಕು. ಸಾಮಾನ್ಯರಿಗೂ ತುಳಿತಕ್ಕೊಳಗಾದವರಿಗೂ ಸಮಾನ ಸೌಲಭ್ಯ ಸಿಗುವುದರ ಬದಲು ತುಳಿತಕ್ಕೊಳಗಾದವರಿಗೆ ನ್ಯಾಯ ಕೊಡುವ ಕಾರ್ಯ ಸರ್ಕಾರ ಮಾಡಬೇಕಾಗಿದೆ ಎಂದರು‌.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ನಾಗೇಶ ಸಿದ್ದಿ, ಉದಯ ಸಿದ್ದಿ, ಶಾಂತಾಬಾಯಿ ಸಿದ್ದಿ, ದುರ್ಗಿ ರಾಮಾ ಸಿದ್ಧಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಪ್ರತ್ಯೇಕ ಆಯೋಗ ರಚಿಸಿ

ಸರ್ಕಾರಕ್ಕೆ ಸಮಿತಿಯಿಂದ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಗಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಒಳಮೀಸಲಾತಿ ಹಂಚಿಕೆ ಮಾಡಲು ನಿಖರವಾದ ದತ್ತಾಂಶ ಸಂಗ್ರಹಿಸಬೇಕು. ಪ್ರತಿಯೊಂದು ಜಾತಿಯ ಹಿಂದುಳಿದಿರುವಿಕೆಯ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲು ಮತ್ತು ಸರ್ಕಾರಕ್ಕೆ ವರದಿ ನೀಡಲು ತಕ್ಷಣವೇ ಪ್ರತ್ಯೇಕ ಆಯೋಗ ರಚಿಸಬೇಕು. ಸಮಾನರು ಮತ್ತು ಅಸಮಾನರನ್ನು ಒಂದೇ ತಕ್ಕಡಿಯಲ್ಲಿ ತೂಗದೇ, ಸೂಕ್ತ ವರ್ಗೀಕರಣ ಮಾಡಬೇಕು ಎಂದು ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಟ ಪಂಗಡಗಳ ಒಳಮೀಸಲಾತಿ ಹೋರಾಟ ಸಮಿತಿ ಒತ್ತಾಯಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ