ಹುಬ್ಬಳ್ಳಿ:
ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸಾರಿಗೆ ಇಲಾಖೆ ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸೋಮವಾರ ನಡೆದ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷೆಯು ಸಂಸ್ಕೃತ ಭಾಷೆಗಿಂತ ಹಿರಿಯದ್ದಾಗಿದ್ದು, ಪ್ರಬಲ ಭಾಷೆಯಾಗಿದೆ. ಇಂಗ್ಲಿಷ್ ಭಾಷೆಯ ಸಾಹಿತ್ಯ ಕೃತಿಗಳಿಗಿಂತ ಕನ್ನಡ ಭಾಷೆಯ ಸಾಹಿತ್ಯ ಕೃತಿ ಓದಬೇಕು. ಮಕ್ಕಳ ಮನಸ್ಸಿನಲ್ಲಿ ಪರಿಸರದ ಬಗ್ಗೆ ಕಾಳಜಿ ಮತ್ತು ಪ್ರೀತಿ ಮೂಡಿಸಬೇಕಿದೆ ಎಂದರು.ಸಮಾಜ, ಪರಿಸರವನ್ನು ಮಲೀನಗೊಳಿಸದ ತಾಯಿ ಸಾಲು ಮರದ ತಿಮ್ಮಕ್ಕ. ಅವರ ಜೀವಿತಾವಧಿಯುದ್ದಕ್ಕೂ ಸಾಕಷ್ಟು ಸಸಿ ನೆಟ್ಟು ಬೆಳೆಸಿ, ಪೋಷಿಸುವ ಕೈಂಕರ್ಯ ಮಾಡಿದವರು. ಪರಿಸರ ಉಳಿಸಿದ ಮಹಾತಾಯಿಯಾಗಿದ್ದಾರೆ ಎಂದ ಅವರು, ಭೂಮಿಯ ಮೇಲಿನ ಜೀವಿಗಳಿಗೆ ಆಮ್ಲಜನಕ ಮುಖ್ಯವಾಗಿ ಬೇಕಾಗಿದೆ. ವಾಹನಗಳಿಂದ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಮಾಲಿನ್ಯ ಮುಕ್ತ ವಾತಾವರಣ ನಿರ್ಮಾಣ ಮಾಡುವತ್ತ ಹೆಜ್ಜೆಯಿಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಸಿ. ಬಸವರಾಜು ಮಾತನಾಡಿ, ವಿಶ್ವದೆಲ್ಲೆಡೆ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಪರಿಸರ ಮತ್ತು ಜೀವ ಸಂಕುಲ ಒಂದಕ್ಕೊಂದು ಬೆಸೆದುಕೊಂಡಿವೆ. ಉತ್ತಮ ಪರಿಸರ ದೊರೆಯದೆ ಇದ್ದರೆ ಪರಿಸರದಲ್ಲಿನ ಜೀವಿಗಳು ನಾಶವಾಗುತ್ತವೆ. ಮಾಲಿನ್ಯ ನಿಯಂತ್ರಣ ನಮ್ಮ ಏಕೈಕ ಕರ್ತವ್ಯವಾಗಿದೆ ಎಂದ ಅವರು, ಹೊಸ ವಾಹನಗಳು ಮಾರುಕಟ್ಟೆಗೆ ಬರದಂತೆ ತಡೆದರೆ ಶೇ.30ರಿಂದ 40ರಷ್ಟು ವಾಯುಮಾಲಿನ್ಯ ತಡೆಗಟ್ಟಬಹುದು ಎಂದು ಹೇಳಿದರು.ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ವಿ.ಡಿ. ಕಾಮರಡ್ಡಿ ಮಾತನಾಡಿ, ಪರಿಸರ ಇದ್ದರೆ ನಾವು. ಒಂದು ವಾಹನಕ್ಕೆ ಎರಡು ಗಿಡ ನೆಟ್ಟು ಆ ಗಿಡಗಳ ನಿರ್ವಹಣೆಯನ್ನು ಅರಣ್ಯ ಇಲಾಖೆಗೆ ನೀಡಬೇಕು ಎಂದರು.
ಇದೇ ವೇಳೆ ಪ್ರಬಂಧ ಸ್ಪರ್ಧೆ ವಿಜೇತ ಪೂಜಾ ವಾಲಿ (ಪ್ರಥಮ), ಶಿಲ್ಪಾ ಚಿಕ್ಕಬೆಂಡಿಗೇರಿ (ದ್ವಿತೀಯ), ಸವಿತಾ (ತೃತೀಯ) ಬಹುಮಾನ ಪಡೆದುಕೊಂಡರು. ಚಿತ್ರಕಲೆ ಸ್ಪರ್ಧೆಯಲ್ಲಿ ಶರಣ್ಯಾ ಜಿ., ರುಬಿನಾ ಹಾಗೂ ಲಕ್ಷ್ಮೀ ಕುಬಸದ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದರು. ಜಂಟಿ ಸಾರಿಗೆ ಆಯುಕ್ತ ಸಿದ್ದಪ್ಪ ಕಲ್ಲೇರ, ಸಿಬ್ಬಂದಿ, ವಿಶ್ವವಿದ್ಯಾಲಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.