ಡಿ. ೨೦ರ ವರೆಗೆ ನೀರಿಗೆ ಆಗ್ರಹಿಸಿ ನಾಳೆ ಕಾರಟಗಿ ಬಂದ್‌ಗೆ ಕರೆ

KannadaprabhaNewsNetwork |  
Published : Nov 18, 2026, 02:15 AM IST
ಫೋಟೋ ೧೭ಕೆಆರ್‌ಟಿ-೧ ರೈತ ಮುಖಂಡ ಶರಣಪ್ಪ ದೊಡ್ಡಮನಿ. | Kannada Prabha

ಸಾರಾಂಶ

ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯ ಕಾಲುವೆಗೆ ಡಿ. ೨೦ರ ವರೆಗೆ ನೀರು ಹರಿಸುವಂತೆ ಒತ್ತಾಯಿಸಿ ನ. ೧೯ರಂದು ಕಾರಟಗಿ ಬಂದ್‌ಗೆ ಕರೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಕಾರಟಗಿ

ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯ ಕಾಲುವೆಗೆ ಡಿ. ೨೦ರ ವರೆಗೆ ನೀರು ಹರಿಸುವಂತೆ ಒತ್ತಾಯಿಸಿ ನ. ೧೯ರಂದು ಕಾರಟಗಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ಘಟಕದ ಅಧ್ಯಕ್ಷ ಶರಣಪ್ಪ ದೊಡ್ಡಮನಿ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ನ. ೧೯ರಂದು ರೈತರ ಹೋರಾಟ ಪ್ರಾರಂಭವಾಗಲಿದ್ದು, ಪ್ರತಿಭಟನಾ ಮೆರವಣಿಗೆಯಲ್ಲಿ ೩೧ ಮತ್ತು ೩೨ನೇ ವಿತರಣಾ ಕಾಲುವೆಗಳ ವ್ಯಾಪ್ತಿಯ ಎಲ್ಲ ಹಳ್ಳಿಗಳ ರೈತರು ಭಾಗವಹಿಸಲಿದ್ದಾರೆ. ೩೧ನೇ ವಿತರಣಾ ಕಾಲುವೆ ಕಚೇರಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆಯ ಮೂಲಕ ನವಲಿ ವೃತ್ತಕ್ಕೆ ಆಗಮಿಸಿ ಅಲ್ಲಿ ಪ್ರತಿಭಟನೆ, ರಸ್ತಾರೋಖೊ ನಡೆಸಲಾಗುವುದು ಎಂದು ಶರಣಪ್ಪ ದೊಡ್ಡಮನಿ ಹೇಳಿದರು.

ನ. ೧೯ರಂದು ನಡೆಯುವ ಕಾರಟಗಿ ಬಂದ್‌ಗೆ ಬಿಜೆಪಿಯವರು ನಮ್ಮೊಂದಿಗೆ ಸೇರುವುದಾಗಿ ಹೇಳಿದ್ದಾರೆ. ರೈತರ ಹಿತಕ್ಕಾಗಿ ನಡೆಯುವ ಹೋರಾಟವಾಗಿದೆ. ಬೆಳೆ ಕೈಸೇರುವಂತೆ ನೀರು ಹರಿಸುವ ನಿರ್ಧಾರ ಕೈಗೊಳ್ಳಬೇಕು. ನೀರು ಒದಗಿಸಲು ಸಾಧ್ಯವಾಗದಿದ್ದರೆ ಅದನ್ನು ಸ್ಪಷ್ಟವಾಗಿ ತಿಳಿಸಬೇಕು. ಇದು ರೈತರ ಬದುಕಿನ ಪ್ರಶ್ನೆಯಾಗಿದ್ದು, ಈ ವಿಚಾರದಲ್ಲಿ ರಾಜಕೀಯ ಮಾಡದೆ ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಒತ್ತಾಯಿಸಲಾಗುವುದು.

ನ. ೨೦, ನ. ೩೦ ಅಥವಾ ಡಿ.೧೦ರ ವರೆಗೆ ಯಾವ ದಿನಾಂಕದವರೆಗೆ ನೀರು ಹರಿಸಲಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ರೈತರಲ್ಲಿ ಗೊಂದಲ ಸೃಷ್ಟಿಸದೆ ನೀರು ಪೂರೈಕೆಯ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ನೀರಾವರಿ ಸಚಿವರು ಸೇರಿದಂತೆ ಸಂಬಂಧಿಸಿದ ಸಚಿವರಿಗೆ ಮನವಿ ಮಾಡುತ್ತೇನೆ. ನೀರು ಕೊಡಲು ಸಾಧ್ಯವಾಗದಿದ್ದರೆ ಅದನ್ನು ನೇರವಾಗಿ ಹೇಳಲಿ. ಬೆಳೆದ ಬೆಳೆ ಹೊಲದಲ್ಲಿಯೇ ಒಣಗುತ್ತಿರುವುದನ್ನು ನೋಡಿದರೆ ಕಣ್ಣೀರು ಬರುತ್ತದೆ. ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ
ವಿಶ್ವಮಟ್ಟದ ಶ್ರೇಷ್ಠ ವಾಸ್ತುಶಿಲ್ಪಗಳ ತಾಣ ವಿಜಯಪುರ