ಹುಬ್ಬಳ್ಳಿ:
ಇಲ್ಲಿಯ ಬಿವಿಬಿ ಕಾಲೇಜ್ ಆವರಣದ ಎದುರು ಸಮಾವೇಶಗೊಂಡ ನೂರಾರು ವಿದ್ಯಾರ್ಥಿಗಳು ನಗರದ ರಾಣಿ ಚೆನ್ನಮ್ಮ ವೃತ್ತದ ವರೆಗೂ ಜಾಗೃತಿ ಜಾಥಾ ನಡೆಸಿದರು.
ಭಾರತ ಮಾತಾಕೀ ಜೈ, ಭಾರತೀಯ ಜೈನ್ಯಕ್ಕೆ ಜಯವಾಗಲಿ, ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ದೇಶ ವಿರೋಧಿಗಳಿಗೆ ಧಿಕ್ಕಾರ ಎಂಬ ಘೋಷಣೆ ಮೊಳಗಿದವು. ಕೈಯಲ್ಲಿ ತ್ರಿವರ್ಣ ಧ್ವಜ ರಾರಾಜಿಸಿದವು. ದೇಶದ ಯುವಶಕ್ತಿ ಅರಾಜಕತೆ ಮತ್ತು ಹಿಂಸಾತ್ಮಕ ಚಟುವಟಿಕೆಗಳತ್ತ ಸಾಗದೆ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಉದ್ಯಮಶೀಲತೆ ಹಾಗೂ ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂಬ ಸಂದೇಶವನ್ನು ಈ ರ‍್ಯಾಲಿಯ ಮೂಲಕ ಸಾರಲಾಯಿತು.ಕೇಂದ್ರೀಯ ಕಾರ್ಯಸಮಿತಿ ಸದಸ್ಯ ಸಚಿನ್ ಕುಳಗೇರಿ ಮಾತನಾಡಿ, ಜೆನ್‌ಜಿಗಳ ಹೆಸರಿನಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲಾಗುತ್ತಿದೆ. ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ದೇಶ ಕಾಯುವ ಸೈನಿಕರ ವಿರುದ್ಧ ಘೋಷಣೆ ಕೂಗಿದ್ದಾರೆ. ಇದನ್ನು ಎಬಿವಿಪಿ ಖಂಡಿಸುತ್ತದೆ. ಸಂವಿಧಾನದಡಿ ಕಾರ್ಯನಿರ್ವಹಿಸುವ ಸಂವಿಧಾನ ಸಂಸ್ಥೆಗಳ ಮೇಲೆ ದೇಶದ ಪ್ರತಿಯೊಬ್ಬರಿಗೂ ಗೌರವವಿದೆ. ಆದರೆ, ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಅವುಗಳನ್ನು ಅವಮಾನಿಸುವ ಹಾಗೂ ಪ್ರಶ್ನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯ ಕಾರ್ಯದರ್ಶಿ ದರ್ಶನ್ ಹೆಗಡೆ ಮಾತನಾಡಿ, ಭಾರತ ಆರ್ಥಿಕವಾಗಿ ಬಲಿಷ್ಠವಾಗುತ್ತಿದ್ದು, ಅಭಿವೃದ್ಧಿ ದೇಶವಾಗುವ ದಿನಗಳ ಹತ್ತಿರವಿದೆ. ಇದನ್ನು ವಿದೇಶಿ ಶಕ್ತಿಗಳಿಗೆ ಸಹಿಸಲು ಆಗುತ್ತಿಲ್ಲ. ರಾಹುಲ್ ಗಾಂಧಿ ಸಹಕಾರದಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿವೆ. ಮತಗಳ್ಳತನದ ಬಗ್ಗೆ ಮಾತನಾಡುವ ಕಾಂಗ್ರೆಸ್ ದೇಶದಲ್ಲಿ ಮೊದಲು ಎಸ್‌ಐಆರ್ ಮಾಡಿಸಿ ಮತದಾರರ ಹಕ್ಕು ಕಸಿದುಕೊಂಡಿದೆ ಎಂದು ದೂರಿದರು.
ರಾಜ್ಯ ಸಹ ಕಾರ್ಯದರ್ಶಿ ಅಭಿಷೇಕ್ ದೊಡ್ಮನಿ, ಹನುಮಂತ ಬಗಲಿ, ಸುಮಂಗಲಾ ಎ., ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಫಣಿ ರಾಘವೇಂದ್ರ, ರಾಜ್ಯ ಕಾರ್ಯಸಮಿತಿ ಸದಸ್ಯ ಸಿದ್ಧಾರ್ಥ್ ಕೋರಿ, ಸಾವಿಷ್ಕರ್ ರಾಜ್ಯ ಸಹ ಸಂಚಾಲಕ ಅಥರ್ವ ಚವ್ಹಾಣ, ಹುಬ್ಬಳ್ಳಿ ನಗರ ಸಹ ಕಾರ್ಯದರ್ಶಿ ಮನೋಜ್ ವಾಲ್ಮೀಕಿ, ಪ್ರಿಯಾಂಕಾ ಬದ್ದಿ ಇದ್ದರು.