ವಿಧಾನ ಪರಿಷತ್ನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆ ಮುಗಿಯುತ್ತಿದ್ದಂತೆ ರಾಜಕೀಯ ಪಕ್ಷಗಳು ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಸಿದ್ಧತೆ ಆರಂಭಿಸಿವೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ:
ವಿಧಾನ ಪರಿಷತ್ನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆ ಮುಗಿಯುತ್ತಿದ್ದಂತೆ ರಾಜಕೀಯ ಪಕ್ಷಗಳು ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಸಿದ್ಧತೆ ಆರಂಭಿಸಿವೆ. ಹೀಗಾಗಲೇ ಕಾರ್ಯಕರ್ತರ ಸಭೆ, ಯಾರಿಗೆ ಟಿಕೆಟ್ ನೀಡಬೇಕು, ಯಾವ ಕ್ಷೇತ್ರದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದು. ಅಲ್ಲಿ ಯಾವ ರೀತಿ ಪ್ರಚಾರ ಕೈಗೊಳ್ಳಬೇಕು, ಸುಲಭವಾಗಿ ಗೆಲ್ಲುವ ಕ್ಷೇತ್ರ ಯಾವುದು ಎಂಬ ಲೆಕ್ಕಾಚಾರ ಆರಂಭಿಸಿವೆ.
ಐದು ವರ್ಷಗಳ ಹಿಂದೇ ನಡೆಯಬೇಕಿದ್ದ ಚುನಾವಣೆಗೆ ಇದೀಗ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗಿದ್ದು ಆಕ್ಷೇಪಣೆ ಕೂಡ ಸಲ್ಲಿಕೆಯಾಗಿವೆ. ಈ ನಡುವೆ ಜಿಲ್ಲಾಡಳಿತ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು ಯಾವಾಗ ಬೇಕಾದರೂ ಚುನಾವಣೆ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದೆ. ಹೀಗಾಗಿ ಮೂರು ರಾಜಕೀಯ ಪಕ್ಷಗಳು ಯುದ್ಧ ಘೋಷಣೆಗೂ ಮುನ್ನವೇ ಶಸ್ತ್ರಾಭ್ಯಾಸ ಶುರು ಮಾಡಿವೆ.
ಹುಮ್ಮಸ್ಸಿನಲ್ಲಿ ಬಿಜೆಪಿ:
ವಿಧಾನ ಪರಿಷತ್ ಚುನಾವಣೆಯಲ್ಲಿ ಕಮಾಲ್ ಮಾಡಿರುವ ಬಿಜೆಪಿ ಅದೇ ಹುಮ್ಮಸ್ಸಿನಲ್ಲಿ ಜಿಪಂ-ತಾಪಂ ಚುನಾವಣೆ ಅಖಾಡಕ್ಕೆ ಧುಮುಕಿದೆ. ಸ್ಥಳೀಯ ಸಂಸ್ಥೆಗಳಲ್ಲೂ ತಮ್ಮ ಪ್ರಾಬಲ್ಯ ಸಾಧಿಸುವ ಮೂಲಕ 2028ರ ವಿಧಾನಸಭೆ ಚುನಾವಣೆಗೆ ವೇದಿಕೆ ಸಿದ್ಧಪಡಿಸಿಕೊಳ್ಳಲು ಮುಂದಾಗಿದೆ. ಇತ್ತ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ ಎಂಬಿತ್ಯಾದಿ ಆರೋಪಗಳನ್ನು ಜನರ ಮುಂದಿಡುತ್ತಿವೆ. ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ವಿಧಾನಸಭೆ ಚುನಾವಣೆಯಲ್ಲಿ ಸಲೀಸಾಗಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರ ಹೊಂದಿದೆ. ಹೀಗಾಗಿ ಪ್ರತಿ ಎರಡು ದಿನಕ್ಕೊಮ್ಮೆ ಕಾರ್ಯಕರ್ತರ ಸಭೆ ನಡೆಸುತ್ತಾ ಚುನಾವಣೆಗೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕೆಂದು ತಂತ್ರ ಮಾಡುತ್ತಿದೆ. ಸಂಘಟನೆ ಬಗ್ಗೆ ಹೆಚ್ಚು ಒತ್ತು ನೀಡುತ್ತಿದೆ.
ಒತ್ತಡದಲ್ಲಿ ಕಾಂಗ್ರೆಸ್:
ಈ ನಡುವೆ ಗೆಲ್ಲುವ ಅವಕಾಶ ಸಾಕಷ್ಟಿದ್ದರೂ ಎಂಎಲ್ಸಿ ಚುನಾವಣೆ ಸೋತು ಸುಣ್ಣವಾಗಿರುವ ಕಾಂಗ್ರೆಸ್ಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ. ಅತ್ತ ಸರ್ಕಾರವೂ ತಮ್ಮದೇ ಇದೆ. ಕಾಂಗ್ರೆಸ್ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಜಿಪಂ-ತಾಪಂ ಚುನಾವಣೆಯಲ್ಲಿ ಕೈ ಚೆಲ್ಲಬಾರದು ಎಂಬ ಒತ್ತಡ ಕಾಂಗ್ರೆಸ್ನಲ್ಲಿದೆ. ಇದಕ್ಕಾಗಿ ಅದು ಸಭೆಗಳನ್ನು ನಡೆಸುತ್ತಾ ಚುನಾವಣೆ ತಯಾರಿ ಮಾಡಿಕೊಳ್ಳುತ್ತಿದೆ. ಅದರಲ್ಲೂ ಇತ್ತೀಚಿಗಷ್ಟೇ ಜಿಲ್ಲಾ ಕಾಂಗ್ರೆಸ್ಗೆ ಅಧ್ಯಕ್ಷರ ನೇಮಕವಾಗಿದೆ. ಅವರಿಗೆ ಈ ಚುನಾವಣೆ ಅಕ್ಷರಶಃ ಪ್ರತಿಷ್ಠೆಯ ಪ್ರಶ್ನೆಯೇ ಆಗಿದೆ. ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಹೈಕಮಾಂಡ್ಗೆ ತಮ್ಮ ಬಲ ಸಾಬೀತುಪಡಿಸಬೇಕಿದೆ. ಎಂಎಲ್ಸಿ ಚುನಾವಣೆಯಲ್ಲಿ ಆದ ತಪ್ಪು ಆಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧ್ಯಕ್ಷರು, ಮುಖಂಡರು ಯೋಚಿಸುತ್ತಿದ್ದಾರೆ,.
ದೋಸ್ತಿ ಮೇಲೆ ಜೆಡಿಎಸ್ ಕಣ್ಣು:
ಇನ್ನು ಅಷ್ಟೊಂದು ಅಸ್ತಿತ್ವದಲ್ಲಿ ಇಲ್ಲದ ಜೆಡಿಎಸ್ ಹೇಗಾದರೂ ಈ ಚುನಾವಣೆಯಲ್ಲಿ ದೋಸ್ತಿ ಆಧಾರದ ಮೇಲೆ ಕೆಲವೊಂದಿಷ್ಟು ಸ್ಥಾನ ಪಡೆದು ಬಿಜೆಪಿ ನೆರವಿನೊಂದಿಗೆ ಗೆಲ್ಲುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗಬೇಕೆಂಬ ಲೆಕ್ಕಾಚಾರದಲ್ಲಿ ತೊಡಗಿದೆ. ಈ ನಿಟ್ಟಿನಲ್ಲಿ ಅದು ಜಿಲ್ಲೆಯಲ್ಲಿ ಯಾವ್ಯಾವ ಕ್ಷೇತ್ರಗಳಲ್ಲಿ ಪಕ್ಷದ ಸ್ಥಿತಿ ಏನಿದೆ. ಯಾವ ಕ್ಷೇತ್ರ ಪಡೆದರೆ ಉತ್ತಮ. ಆಕಾಂಕ್ಷಿಗಳು ಯಾರ್ಯಾರಿದ್ದಾರೆ ಎಂದು ವಿಶ್ಲೇಷಣೆ ಮಾಡುತ್ತಿದೆ.
ಒಟ್ಟಿನಲ್ಲಿ ಅತ್ತ ಎಂಎಲ್ಸಿ ಚುನಾವಣೆ ಮುಗಿಯುತ್ತಿದ್ದಂತೆ ಇತ್ತ ಜಿಪಂ ತಾಪಂ ಚುನಾವಣೆಯ ತಯಾರಿ ಕೂಡ ಸಣ್ಣದಾಗಿ ನಡೆಯುತ್ತಿದ್ದು, ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿ ಗೆದರಿರುವುದಂತೂ ಸತ್ಯ.ಜಿಪಂ ತಾಪಂ, ಚುನಾವಣೆಗೆ ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಸಭೆಗಳನ್ನು ನಡೆಸಲಾಗಿದೆ. ಬೇರು ಮಟ್ಟದಿಂದ ಪಕ್ಷವನ್ನು ಸಂಘಟಿಸಲಾಗುತ್ತಿದೆ. ಈ ಚುನಾವಣೆಯಲ್ಲೂ ಬಿಜೆಪಿಯೇ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ.ನಿಂಗಪ್ಪ ಸುತಗಟ್ಟಿ, ಬಿಜೆಪಿ ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ
ಜಿಪಂ, ತಾಪಂ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಒಂದೆರಡು ಬಾರಿ ಸಭೆಗಳನ್ನು ನಡೆಸಲಾಗಿದೆ. ಈ ಸಲ ಅತೀ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ. ಗ್ಯಾರಂಟಿ ಯೋಜನೆ, ಸರ್ಕಾರದ ಸಾಧನೆಗಳೇ ನಮಗೆ ಶ್ರೀರಕ್ಷೆಯಾಗಲಿದೆ.ಚಂದ್ರಶೇಖರ ಜುಟ್ಟಲ್, ಕಾಂಗ್ರೆಸ್ ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.