ಕನ್ನಡಪ್ರಭ ವಾರ್ತೆ ಮಾಗಡಿ
ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಯೋಜನೆಗೆ ತುಮಕೂರಿನಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಹೇಮಾವತಿ ಯೋಜನೆ ಮಾಗಡಿ ತಾಲೂಕಿಗೆ ಬರಬೇಕೆಂಬ ನಿಟ್ಟಿನಲ್ಲಿ ಮೇ.24 ಶುಕ್ರವಾರ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಲು ರೈತ ಮುಖಂಡರು ತೀರ್ಮಾನಿಸಿದ್ದಾರೆ.ಪಟ್ಟಣದ ಸೋಮೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರೈತ ಮುಖಂಡರು, ವಿವಿಧ ಸಂಘಟನೆಯ ಮುಖಂಡರು ಹೇಮಾವತಿ ಕೆನಾಲ್ ಯೋಜನೆಗಾಗಿ ವಿಶೇಷ ಸಭೆ ಕರೆದು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸುವಂತೆ ತೀರ್ಮಾನಿಸಿದ್ದಾರೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್ ತಿಳಿಸಿದರು.
ಮಾಗಡಿ ಸಾಕಷ್ಟು ಹಿಂದುಳಿದ ತಾಲೂಕಾಗಿದ್ದು ನೀರಾವರಿಯನ್ನೇ ನಂಬಿಕೊಂಡು ಲಕ್ಷಾಂತರ ಕುಟುಂಬಗಳು ವ್ಯವಸಾಯ ಮಾಡುತ್ತಿವೆ. ಹೇಮಾವತಿ ನೀರನ್ನು ತಾಲೂಕಿಗೆ ಹರಿಸಲು ಕಳೆದ ಹತ್ತು ವರ್ಷಗಳಿಂದಲೂ ಸತತವಾಗಿ ಕಾಮಗಾರಿ ನಡೆಯುತ್ತಿದೆ. ಆದರೆ ಈಗ ತುಮಕೂರಿನ ಜನಪ್ರತಿನಿಧಿಗಳು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ನಾವು ಕೂಡ ಪ್ರತಿಭಟನೆಯ ಮೂಲಕವೇ ತಕ್ಕ ಉತ್ತರ ನೀಡಬೇಕಿದ್ದು, ಶುಕ್ರವಾರ ಬೆಳಗ್ಗೆ 10 ಗಂಟೆಗೆ ತಾಲೂಕಿನ ಮರೂರು ಹ್ಯಾಂಡ್ ಪೋಸ್ಟ್ ಸರ್ಕಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ತುಮಕೂರಿನ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡುತ್ತೇವೆ. ಸರ್ಕಾರ ಮಧ್ಯ ಪ್ರವೇಶಿಸಿ ಹೇಮಾವತಿ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಮಾಗಡಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು. ಇಲ್ಲವಾದರೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ.ಎಚ್.ಬಸವರಾಜು ಮಾತನಾಡಿ, ಹೇಮಾವತಿ ಯೋಜನೆ ಜಾರಿಯಾಗುವಾಗ ಅಂದಿನ ಸಚಿವ ಸೊಗಡು ಶಿವಣ್ಣ ಏನು ಮಾಡುತ್ತಿದ್ದರು? ನಮ್ಮ ತಾಲೂಕಿಗೆ ನೀರು ಹರಿಯಬೇಕು ಎಂಬುದು ಅವರಿಗೆ ತಿಳಿದಿರಲಿಲ್ಲವೇ? ಬಿಜೆಪಿ ಪಕ್ಷದಿಂದ ಉಚ್ಚಾಟನೆಯಾಗಿರುವ ಶಿವಣ್ಣನವರು ಈಗ ಹೋರಾಟದ ನೇತೃತ್ವ ವಹಿಸಿ ರಾಜಕೀಯ ಪ್ರೇರಿತವಾಗಿ ಮಾಗಡಿ ತಾಲೂಕಿಗೆ ನೀರು ಬಿಡುವುದಿಲ್ಲ ಎಂದು ಹೋರಾಡುತ್ತಿದ್ದಾರೆ. ಮಾಗಡಿ ತಾಲೂಕು ತಮಿಳುನಾಡಿಗೆ ಸೇರಿಲ್ಲ,ಇದು ಕೆಂಪೇಗೌಡರ ನಾಡು, ತುಮಕೂರು ಸಿದ್ದಗಂಗಾ ಮಠಾಧ್ಯಕ್ಷರು ಹುಟ್ಟಿದ ಊರು,ಇಂಥಹ ಊರಿಗೆ ತೊಂದರೆ ಕೊಡುತ್ತಿರುವ ನಿಮಗೆ ಈ ಹೋರಾಟದಲ್ಲಿ ಜಯ ಸಿಗುವುದಿಲ್ಲ.ಸರ್ಕಾರ ಹೇಮಾವತಿ ಕಾಮಗಾರಿಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಿ ತಾಲೂಕಿನ ಕೆರೆಗಳನ್ನು ತುಂಬಿಸಬೇಕು, ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ತಿಳಿಸಿದರು.ದಲಿತ ಮುಖಂಡ ಮಾಡಬಾಳ್ ಜಯರಾಂ, ದೊಡ್ಡಿ ಲಕ್ಷ್ಮಣ್ ,ಮುಖಂಡರಾದ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಬಸವರಾಜು, ವನಜ, ವಿದ್ಯಾರ್ಥಿ ಮಿತ್ರ ಕಿರಣ್, ಮಾರಪ್ಪ, ಅಂಜು, ರೈತ ಸಂಘದ ರವಿಕುಮಾರ್, ಬಸವರಾಜು ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.