ಶಿವಾನಂದ ಗೊಂಬಿ
ಕರ್ನಾಟಕದ ಸಾಕಷ್ಟು ಜಿಲ್ಲೆಗಳಲ್ಲಿ ರಾಮಾಯಣದ ಕುರುಹುಗಳು ಕಂಡು ಬರುತ್ತದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಶಬರಿಕೊಳ್ಳ, ಕೊಪ್ಪಳದ ಕಿಷ್ಕಿದೆ, ಹಂಪಿಯ ಸುತ್ತಮುತ್ತಲಿನ ಪ್ರದೇಶ, ಶಿವಮೊಗ್ಗ ಜಿಲ್ಲೆಯ ಕೆಲವು ಸ್ಥಳಗಳು... ಹೀಗೆ ಹಲವೆಡೆ ರಾಮನ ಕುರುಹುಗಳಿವೆ.
ಆಂಜನೇಯ ಹುಟ್ಟಿದ ಸ್ಥಳವಾಗಿರುವ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಈಗಾಗಲೇ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಅದಕ್ಕಾಗಿ ₹100 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದೆ. ಇದು ಒಳ್ಳೆಯ ಬೆಳವಣಿಗೆ.ಇದರೊಂದಿಗೆ ಹಂಪಿಯ ಋಷಿಮುಖ ನಡುಗಡ್ಡೆಯಲ್ಲೇ ರಾಮ-ಲಕ್ಷ್ಮಣರನ್ನು ಆಂಜನೇಯ ಮೊದಲ ಬಾರಿಗೆ ಭೇಟಿಯಾಗಿದ್ದ. ಈ ಪ್ರದೇಶದ ಮಾತಂಗ ಪರ್ವತ ಸೇರಿದಂತೆ ವಿವಿಧ ಸ್ಥಳಗಳಲ್ಲಿ ರಾಮಾಯಣದ ಕುರುಹುಗಳಿವೆ.
ರಾವಣ ಸೀತೆಯನ್ನು ಅಪಹರಣ ಮಾಡಿದಾಗ ಹುಡುಕುತ್ತಾ ಶ್ರೀರಾಮ-ಲಕ್ಷ್ಮಣ ತೆರಳಿದ್ದರು. ಈ ವೇಳೆ ತನಗಾಗಿ ಕಾಯುತ್ತಾ ಕುಳಿತಿದ್ದ ವೃದ್ಧೆ ಶಬರಿಯನ್ನು ಶ್ರೀರಾಮ ಭೇಟಿಯಾಗುತ್ತಾನೆ. ಶಬರಿ ಎಂಜಲು ಮಾಡಿ ಇಟ್ಟಿದ್ದ ಬಾರೆ ಹಣ್ಣುಗಳನ್ನು ತಿನ್ನುತ್ತಾನೆ. ಹೀಗೆ ಶಬರಿಯನ್ನು ಭೇಟಿಯಾದ ಸ್ಥಳವೇ ಶಬರಿ ಕೊಳ್ಳ. ಇದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ರಾಮಸಾಗರ ಗ್ರಾಮದ ಜಟ್ಟಂಗಿ ರಾಮೇಶ್ವರ ಬೆಟ್ಟ ಇದೆ. ಇಲ್ಲಿ ಶಿವಲಿಂಗ ದೇವಸ್ಥಾನವಿದೆ. ಸೀತೆಯನ್ನು ರಾವಣ ಹೊತ್ತೊಯ್ಯುತ್ತಿದ್ದ ವೇಳೆ ಜಟಾಯು ಹೋರಾಟ ನಡೆಸುತ್ತದೆ. ರಾವಣನ ದಾಳಿಯಿಂದ ಸಾಯುವ ಸ್ಥಿತಿಯಲ್ಲಿರುತ್ತದೆ. ಅದೇ ವೇಳೆ ಶ್ರೀರಾಮ ಅಲ್ಲಿಗೆ ಬಂದು ಜಟಾಯುವನ್ನು ಉಪಚರಿಸುತ್ತಾನೆ. ಆ ವೇಳೆ ಜಟಾಯುವಿನ ವಿನಂತಿ ಮೇರೆಗೆ ಶ್ರೀರಾಮ ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡುತ್ತಾನಂತೆ. ಈ ಬೆಟ್ಟದ ಮೇಲಿರುವ ದೇವಸ್ಥಾನದ ಶಿವಲಿಂಗವನ್ನು ಶ್ರೀರಾಮನೇ ಪ್ರತಿಷ್ಠಾಪಿಸಿದ್ದು ಎಂಬ ಪ್ರತೀತಿ ಇದೆ.
ಪ್ರಾಧಿಕಾರ ರಚಿಸಿ:
ಕರ್ನಾಟಕದ ಕೊಪ್ಪಳ, ಹಂಪಿ, ರಾಮದುರ್ಗ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ಹಲವೆಡೆ ತ್ರೇತಾಯುಗದಲ್ಲಿ ಶ್ರೀರಾಮ ಓಡಾಡಿದ್ದ ಎಂಬ ಪ್ರತೀತಿಯಿರುವ ಸ್ಥಳಗಳು ಸಾಕಷ್ಟಿವೆ. ಹೇಗಾದರೂ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಕ್ರಮ ಕೈಗೊಂಡಂತೆ ಈ ಸ್ಥಳಗಳ ಅಭಿವೃದ್ಧಿ ಪಡಿಸಲು ಪ್ರತ್ಯೇಕ ಪ್ರಾಧಿಕಾರ ರಚಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಮನ ಭಕ್ತ ರಮೇಶ ಪಾಟೀಲ ಆಗ್ರಹಿಸಿದ್ದಾರೆ.