ಸಿಬಿಐ ಆಫೀಸರ್‌ ಹೆಸರಲ್ಲಿ ಕರೆ: ಸಮಯಪ್ರಜ್ಞೆಯಿಂದ ತಪ್ಪಿದ ವಂಚನೆ

KannadaprabhaNewsNetwork |  
Published : Sep 30, 2024, 01:24 AM ISTUpdated : Sep 30, 2024, 01:25 AM IST
11 | Kannada Prabha

ಸಾರಾಂಶ

ಮೊಬೈಲ್ ಕರೆ ಮಾಡಿದ್ದ ಕೋಡ್ ಸಂಖ್ಯೆ ೯೨ ಎಂದಾಗಿದ್ದು ಅದು ಪಾಕಿಸ್ತಾನದಲ್ಲಿ ಬಳಕೆಯಾಗುವ ಫೋನ್‌ ಆಗಿರುತ್ತದೆ. ಅಲ್ಲಿನ ವ್ಯಕ್ತಿಗೆ ಉಪ್ಪಿನಂಗಡಿಯ ನಿವಾಸಿಯಾಗಿರುವ ಅಬ್ಬಾಸ್ ಅವರ ಮೊಬೈಲ್ ಸಂಖ್ಯೆ ಹಾಗೂ ಅವರ ಮಗನ ಹೆಸರು ಸ್ಪಷ್ಟವಾಗಿ ತಿಳಿದಿರಬೇಕಾದರೆ ಈ ಜಾಲದಲ್ಲಿ ಸ್ಥಳೀಯರ ಬಾಗೀದಾರಿಕೆಯ ಶಂಕೆ ಮೂಡುತ್ತಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

‘ನಾನು ಸಿಬಿಐ ಆಫೀಸರ್ ಮಾತನಾಡುತ್ತಿದ್ದೇನೆ. ಇವನು ನಿಮ್ಮ ಮಗನಾ ? ಅವನ ಚಟುವಟಿಕೆಯ ಬಗ್ಗೆ ನಿಮಗೆ ಅರಿವಿದೆಯಾ ? ಅವನನ್ನು ತಕ್ಷಣ ಬಂಧಿಸಬೇಕಾಗುತ್ತದೆ’ ಎಂದೆಲ್ಲಾ ಬೆದರಿಸಿ ಹಣ ಕಬಳಿಸುವ ಜಾಲದ ಕರೆ ಉಪ್ಪಿನಂಗಡಿ ನಿವಾಸಿಗೆ ಬಂದಿದ್ದು, ಅವರ ಸಮಯಪ್ರಜ್ಞೆಯ ನಡೆಯಿಂದಾಗಿ ವಂಚನೆಗೆ ಒಳಗಾಗುವುದು ತಪ್ಪಿದೆ.

ಉಪ್ಪಿನಂಗಡಿ ಬ್ಯಾಂಕ್ ರಸ್ತೆಯ ನಿವಾಸಿ ಅಬ್ಬಾಸ್ ಎಂಬವರ ಮೊಬೈಲ್‌ಗೆ ೯೨-೩೪೭೧೭೪೫೬೦೮ ಸಂಖ್ಯೆಯಿಂದ ಕರೆಯೊಂದು ಬಂದಿದೆ. ಹಿಂದಿ ಭಾಷೆಯಲ್ಲಿ ತಾನು ಸಿಬಿಐ ಆಫೀಸರ್ ಆಗಿದ್ದು ದೆಹಲಿ ಕಚೇರಿಯಿಂದ ಮಾತಾನಾಡುತ್ತಿದ್ದೇನೆ. ಅಬ್ಬಾಸ್ ಅವರ ಪ್ರಥಮ ವರ್ಷದ ಎಂಜಿನಿಯರಿಂಗ್ ಕಲಿಯುತ್ತಿರುವ ಮಗನ ಹೆಸರನ್ನು ಸರಿಯಾಗಿ ಹೇಳಿದ ಆ ವ್ಯಕ್ತಿ, ಆತ ನಿಮ್ಮ ಮಗನಲ್ಲವೆ? ಆತ ಏನೆಲ್ಲಾ ಮಾಡುತ್ತಿದ್ದಾನೆ ಎಂಬ ಅರಿವು ನಿಮಗಿದೆಯಾ ? ಅವನನ್ನು ತಕ್ಷಣ ಬಂಧಿಸಬೇಕಾಗುತ್ತದೆ ಎಂದೆಲ್ಲಾ ಬೆದರಿಸಿದ್ದಾರೆ. ಫೋನ್‌ ಮಾಡಿದ ವ್ಯಕ್ತಿಯ ಪ್ರೊಪೈಲ್ ಫೋಟೋ ಕೂಡಾ ಪೊಲೀಸ್ ಆಫೀಸರ್‌ನಂತಿರುವ ವ್ಯಕ್ತಿಯದ್ದಿದ್ದು, ನಂಬರ್‌ ಕೆಳಗಡೆ ಸಿಬಿಐ ಎಂದೂ ದಾಖಲಿಸಲ್ಪಟ್ಟಿರುವುದು ಕಂಡು ಬಂದಿದೆ.

ಅಬ್ಬಾಸ್ ಅವರು, ಕರೆ ಮಾಡಿದ್ದ ವ್ಯಕ್ತಿಗೆ ಕೆಲವೊಂದು ಪ್ರಶ್ನೆ ಕೇಳಿದಾಗ ನಿಮಗೆ ನಮ್ಮನ್ನು ಪ್ರಶ್ನಿಸುವ ಹಕ್ಕಿಲ್ಲ . ಏನಿದ್ದರೂ ನಾವು ಕೇಳುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ ಎಂದು ಧಿಮಾಕಿನಿಂದ ಹೇಳಿದ್ದರಾೆ. ಮಗನ ನಡವಳಿಕೆಯ ಬಗ್ಗೆ ಅರಿವಿದ್ದ ಹಾಗೂ ಕರೆ ಮಾಡಿ ಹಣ ಕಬಳಿಸುವ ಜಾಲದ ಅರಿವು ಹೊಂದಿದ್ದ ಅಬ್ಬಾಸ್‌ ಅವರು ಏರು ಧ್ವನಿಯಲ್ಲಿ ಹಿಂದಿಯಲ್ಲೇ ಮಾತನಾಡಿ ಕರೆ ಮಾಡಿದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ ಆ ವ್ಯಕ್ತಿ ಕರೆ ಕಡಿತಗೊಳಿಸಿದ್ದಾನೆ.

ಮೊಬೈಲ್ ಕರೆ ಮಾಡಿದ್ದ ಕೋಡ್ ಸಂಖ್ಯೆ ೯೨ ಎಂದಾಗಿದ್ದು ಅದು ಪಾಕಿಸ್ತಾನದಲ್ಲಿ ಬಳಕೆಯಾಗುವ ಫೋನ್‌ ಆಗಿರುತ್ತದೆ. ಅಲ್ಲಿನ ವ್ಯಕ್ತಿಗೆ ಉಪ್ಪಿನಂಗಡಿಯ ನಿವಾಸಿಯಾಗಿರುವ ಅಬ್ಬಾಸ್ ಅವರ ಮೊಬೈಲ್ ಸಂಖ್ಯೆ ಹಾಗೂ ಅವರ ಮಗನ ಹೆಸರು ಸ್ಪಷ್ಟವಾಗಿ ತಿಳಿದಿರಬೇಕಾದರೆ ಈ ಜಾಲದಲ್ಲಿ ಸ್ಥಳೀಯರ ಬಾಗೀದಾರಿಕೆಯ ಶಂಕೆ ಮೂಡುತ್ತಿದೆ.

ಅಪಹರಣದ ಕರೆ ಬಂದಿತ್ತು:

ಅಬ್ಬಾಸ್‌ ಅವರ ಸಂಬಂಧಿಕರೊಬ್ಬರ ಮಗಳು ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಕಲಿಯುತ್ತಿದ್ದು, ಆಕೆಯನ್ನು ಅಪಹರಿಸಲಾಗಿದೆ ಎಂಬ ಫೋನ್‌ಕಯೊಂದು ಆಕೆಯ ತಾಯಿಗೆ ಬಂದಿತ್ತು. ಕರೆ ಸ್ವೀಕರಿಸಿದಾಗ, ತನ್ನನ್ನು ಅಪಹರಣಕಾರರಿಂದ ಬಿಡಿಸಿಕೊಳ್ಳಿ ಎಂದು ವಿದ್ಯಾರ್ಥಿನಿ ಅಳುತ್ತಾ ಅಂಗಲಾಚುತ್ತಿದ್ದ ಧ್ವನಿಯನ್ನೂ ಕೇಳಿಸಲಾಗಿತ್ತು. ಆ ಧ್ವನಿಯನ್ನು ಕೇಳಿ ಕರೆ ಸ್ವೀಕರಿಸಿದ ಮಹಿಳೆ ಅಸ್ವಸ್ಥರಾಗಿದ್ದು, ಕೂಡಲೇ ಆಕೆಯ ಸಹೋದರಿಯರು ಮತ್ತು ಸಂಬಂಧಿಕರು ಸಮಯಪ್ರಜ್ಞೆಯಿಂದ ಕಾರ್ಯಾಚರಣೆ ನಡೆಸಿ, ಮನೆ ಮಗಳು ಮಂಗಳೂರಿನ ಕಾಲೇಜಿನ ತರಗತಿಯಲ್ಲಿ ಸುರಕ್ಷಿತವಾಗಿರುವುದನ್ನು ಖಾತ್ರಿ ಪಡಿಸಿಕೊಂಡರು. ಕೂಡಲೇ ಇದೊಂದು ಬೆದರಿಕೆಯೊಡ್ಡಿ ಹಣ ಕಬಳಿಸುವ ಜಾಲವೆನ್ನುವುದನ್ನು ದೃಢಪಡಿಸಿಕೊಂಡು ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಈ ಘಟನೆಯ ಬೆನ್ನಲ್ಲೇ ಅಬ್ಬಾಸ್ ಅವರಿಗೆ ಸಿಬಿಐ ಅಧಿಕಾರಿಯ ಹೆಸರಿನಲ್ಲಿ ಕರೆ ಬಂದಿದೆ. ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದು, ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಎಂದು ಅಬ್ಬಾಸ್ ಅವರು ಈ ಪ್ರಕರಣವನ್ನು ಮಾಧ್ಯಮದ ಗಮನಕ್ಕೆ ತಂದಿದ್ದಾರೆ.

PREV

Recommended Stories

‘ಫಾರಿನ್‌ ಅನ್ನಭಾಗ್ಯ’ ಕೊಟ್ಟವರಿಗೆ ಹವಾಲಾ ಮೂಲಕ ಹಣ ಪಾವತಿ?
ಬಸವಣ್ಣ ಅಧ್ಯಯನ ಪೀಠ ಸ್ಥಾಪನೆ ಮಾಡಿ : ಮೊಯ್ಲಿ