ಮೈಕ್ರೋ ಫೈನಾನ್ಸ್ ನವರು ಕಿರುಕುಳ ಕೊಟ್ಟರೆ ನನಗೆ ಕರೆ ಮಾಡಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

KannadaprabhaNewsNetwork |  
Published : Feb 02, 2025, 11:45 PM IST
2ಕೆಎಂಎನ್ ಡಿ21,22,23 | Kannada Prabha

ಸಾರಾಂಶ

ಖಾಸಗಿ ಫೈನಾನ್ಸ್ ನವರು ಬಡ್ಡಿ, ಚಕ್ರಬಡ್ಡಿ ವಿಧಿಸಿ ಜನರಿಗೆ ಹಿಂಸೆ ಕೊಡುತ್ತಿದ್ದಾರೆ. ಇದು ಅಮಾನವೀಯ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೇ ಸಾಲಮಾಡಿಕೊಂಡು ರಾಜಾರೋಷವಾಗಿ ಓಡಾಡುವಾಗ ನೀವೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತೀರಿ. ಫೈನಾನ್ಸ್ ನವರ ಕಿರುಕುಳದಿಂದ ಮರ್ಯಾದೆಗೆ ಹೆದರಿ ಯಾವುದೇ ಕಾರಣಕ್ಕೂ ಜೀವ ತೆಗೆದುಕೊಳ್ಳುವ ಕೆಲಸ ಮಾಡಬೇಡಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಕ್ರೋ ಫೈನಾನ್ಸ್‌ನವರು ಕಿರುಕುಳ ನೀಡಿದರೆ ಹೆದರಬೇಡಿ. ರೌಡಿಗಳನ್ನು ಕರೆತಂದು ಬೆದರಿಕೆ ಹಾಕಿ ಗಲಾಟೆ ಮಾಡಿದರೆ ನನಗೆ ಕರೆ ಮಾಡುವಂತೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಧೈರ್ಯ ತುಂಬಿದರು.

ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಸಂತೆಕಸಲಗೆರೆ ಗ್ರಾಮದಲ್ಲಿ ಶ್ರೀಭೂಮಿ ಸಿದ್ದೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ನವರ ಉಪಟಳ ಹೆಚ್ಚಾಗಿದೆ. ಯಾರೇ ಆಗಲಿ ನಿಮ್ಮ ಮನೆ ಬಳಿಗೆ ಬಂದು ಕಿರುಕುಳ ನೀಡಿದರೆ ತಕ್ಷಣವೇ ನನಗೆ ದೂರವಾಣಿ ಕರೆ ಮಾಡುವಂತೆ ತಿಳಿಸಿದರು.

ಖಾಸಗಿ ಫೈನಾನ್ಸ್ ನವರು ಬಡ್ಡಿ, ಚಕ್ರಬಡ್ಡಿ ವಿಧಿಸಿ ಜನರಿಗೆ ಹಿಂಸೆ ಕೊಡುತ್ತಿದ್ದಾರೆ. ಇದು ಅಮಾನವೀಯ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೇ ಸಾಲಮಾಡಿಕೊಂಡು ರಾಜಾರೋಷವಾಗಿ ಓಡಾಡುವಾಗ ನೀವೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತೀರಿ. ಫೈನಾನ್ಸ್ ನವರ ಕಿರುಕುಳದಿಂದ ಮರ್ಯಾದೆಗೆ ಹೆದರಿ ಯಾವುದೇ ಕಾರಣಕ್ಕೂ ಜೀವ ತೆಗೆದುಕೊಳ್ಳುವ ಕೆಲಸ ಮಾಡಬೇಡಿ. ನಿಮ್ಮ ಕುಟುಂಬಗಳ ಉಳಿವಿಗೆ ನಿಮ್ಮಗಳ ಜೀವ ಬಹಳ ಮುಖ್ಯ ಎಂದರು.

ಹಳ್ಳಿಗಳ ಯುವಕರು ಆನ್‌ಲೈನ್ ಗೇಮ್ ಚಟಕ್ಕೆ ಸಿಕ್ಕಿಸಿ ನಂತರ ಅಲ್ಲಿಯೂ ಸಾಲಕ್ಕೆ ಅವರು ಸಿಕ್ಕಿಕೊಂಡು ಕೊನೆಗೆ ಸಾವಿಗೆ ಶರಣಾಗುತ್ತಿದ್ದಾರೆ. ಇದು ಅತ್ಯಂತ ಧಾರುಣ ಆತಂಕ ವ್ಯಕ್ತಪಡಿಸಿದರು.

2018ರಲ್ಲಿ ಮುಖ್ಯಮಂತ್ರಿಯಾಗುವುದಕ್ಕಿಂತ ಮೊದಲು ಮಂಡ್ಯ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸರಣಿ ಸಾವುಗಳು ನನಗೆ ತೀವ್ರ ಆಘಾತ ಮಾಡುತ್ತಿದ್ದವು. ಈ ವೇಳೆ ಜಿಲ್ಲೆಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ರೈತರಲ್ಲಿ ಮನವಿ ಮಾಡಿದೆ ಎಂದರು.

ರಾಜ್ಯದ ಮುಖ್ಯಮಂತ್ರಿಯಾದ ಮೇಲೆ 25,000 ಕೋಟಿ ರು. ಸಾಲ ಮನ್ನಾ ಮಾಡಿದೆ. ಋಣಮುಕ್ತ ಕಾಯ್ದೆ ಜಾರಿಗೆ ತಂದೆ. ನಾನೇ ಸ್ವತಃ ರಾಷ್ಟ್ರಪತಿಗಳ ಬಳಿಗೆ ಹೋಗಿ ಕಾಯ್ದೆಗೆ ಅಂಕಿತ ಹಾಕಿಸಿಕೊಂಡು ಬಂದೆ ಎಂದರು.

ಮೈಕ್ರೋ ಫೈನಾನ್ಸ್ ಉಪಟಳ ಕೆಲ ತಿಂಗಳ ಹಿಂದೆ ಚಾಮರಾಜನಗರದಲ್ಲಿ ಆರಂಭವಾಯಿತು. ರಾಜ್ಯದ ಉದ್ದಗಲಕ್ಕೂ ಸರಣಿ ಸಾವುಗಳು ಸಂಭವಿಸುತ್ತಿವೆ. ಆದರೆ, ನಮ್ಮ ರಾಜ್ಯದ ಕಾನೂನು ಸಚಿವರು ಇನ್ನೂ ಸಮಗ್ರವಾಗಿ ಚಿಂತನೆ ಮಾಡುತ್ತಿದ್ದಾರೆ. ಬೇರೆ ಯಾವುದೇ ವಿಷಯಕ್ಕೆ ವಿದ್ಯುತ್ ವೇಗದಲ್ಲಿ ನಿರ್ಧಾರ ಕೈಗೊಳ್ಳುವ ಸರ್ಕಾರ ಮೈಕ್ರೋ ಫೈನಾನ್ಸ್ ಗಳಿಂದ ಜನರನ್ನು ರಕ್ಷಣೆ ಮಾಡಲು ಮೀನಮೇಷ ಎಣಿಸುತ್ತಿದೆ. ಇದು ಅನುಮಾನ ಕಾಡುತ್ತಿದೆ ಎಂದರು.

ಮೈಕ್ರೋ ಫೈನಾನ್ಸ್ ಹಾವಳಿಯಿಂದ ಜಿಲ್ಲೆಯಲ್ಲಿ ತಾಯಿ, ಮಗ ಸಾವನ್ನಪ್ಪಿದ್ದಾರೆ. ಸರಕಾರಕ್ಕೆ ಧೃಡ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಮಂಡ್ಯ ಜಿಲ್ಲೆಯಲ್ಲಿ 60ಕ್ಕೂ ಅಧಿಕ ಮೈಕ್ರೋ ಫೈನಾನ್ಸ್ ಕಂಪನಿಗಳಿವೆ. ಇವುಗಳಲ್ಲಿ 10-12 ಫೈನಾನ್ಸ್ ಕಂಪನಿಗಳಿಗೆ ಲೈಸೆನ್ಸ್ ಇವೆ. ಉಳಿದವು ಅನಧಿಕೃತ ನಡೆಯುತ್ತಿವೆ ಎಂದರು.

ಯಾವುದೇ ಕಾರಣಕ್ಕೂ ಜನರು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಮಂಡ್ಯ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ನವರು ರೌಡಿಗಳನ್ನು ಕರೆಹಿಸಿ ಧಮ್ಕಿ ಹಾಕುವುದು ಮಾಡಿದರೆ, ಆತ್ಮಹತ್ಯೆ ಮಾಡಿಕೊಳ್ಳದೆ ನನಗೆ ಕರೆಮಾಡಿ ಎಂದು ಧೈರ್ಯ ತುಂಬಿದರು.

ಹಳ್ಳಿಯ ಬದುಕು ಅಯೋಮಯವಾಗಿದೆ. ಹಳೆಯ ಕಾಲದ ಹಳ್ಳಿಗಳು ಮರೆಯಾಗುತ್ತಿವೆ. ಮಾನವೀಯ ಮೌಲ್ಯಗಳು ಅಳಿದು ಹೋಗುತ್ತಿವೆ. ಜಗತ್ತಿನ ಮೂರನೇ ಅತಿದೊಡ್ಡ ಜಾಗತಿಕ ಶಕ್ತಿಯಾಗಿ ಭಾರತ ಹೊರಹೊಮ್ಮುತ್ತಿದೆ. ಇದರ ನಡುವೆ ಸಮಾಜ ಕಲುಷಿತವಾಗುತ್ತಿದೆ. ಯುವ ಪೀಳಿಗೆ ದಾರಿ ತಪ್ಪುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಹಿಂದೆ ಸಮಾಜದಲ್ಲಿ ಸೇವಾ ಮನೋಭಾವ, ನಿಸ್ವಾರ್ಥತೆ ಇತ್ತು. ಸಮಸ್ಯೆ ಬಂದರೆ ಗ್ರಾಮಸ್ಥರೇ ಕುಳಿತು ಬಗೆಹರಿಸಿಕೊಳ್ಳುತ್ತಿದ್ದರು. ಈಗ ಅಂತಹ ಪರಿಸ್ಥಿತಿ ಇಲ್ಲ. ಸಣ್ಣ ತುಂಡು ಭೂಮಿಗಾಗಿ ಅಣ್ಣ ತಮ್ಮಂದಿರ ನಡುವೆ ಜಗಳ ಮಾಡಿಕೊಂಡು ಪೊಲೀಸ್ ಠಾಣೆ, ಕೋರ್ಟ್ ಅಂತ ಅಲೆಯುತ್ತಿದ್ದಾರೆ. ನೆಮ್ಮದಿ ಬದುಕು ದೂರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಳ್ಳಿಗಳು ಅಭಿವೃದ್ಧಿಯಾಗಬೇಕು. ನಾವುಗಳು ಬೆಳಯಬೇಕು. ಸಮಾಜ ಸಂತೋಷವಾಗಿರಬೇಕು. ಈ ಬಗ್ಗೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು. ನಮ್ಮ ಮೌಲ್ಯಗಳನ್ನು ಬಿಟ್ಟು ಕೊಡಬಾರದು. ರಾಜಕಾರಣಕ್ಕೆ ಪರಸ್ಪರ ಜಗಳ ಬೇಡ. ನಿಮ್ಮ ಮತ ನಿಮ್ಮ ಇಷ್ಟ. ರಾಜಕಾರಣ ನಿತ್ಯದ ಕೆಲಸವಾಗಬಾರದು ಎಂದರು.

ಸಮಾರಂಭದಲ್ಲಿ ಆದಿಚುಂಚನಗಿರಿ ಶ್ರೀ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ದೇಗುಲದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ತಮ್ಮಣ್ಣ, ಉಪಾಧ್ಯಕ್ಷ ಶಿವಣ್ಣ ಸೇರಿದಂತೆ ಸಮಿತಿ ಎಲ್ಲ ಪದಾಧಿಕಾರಿಗಳು, ಗ್ರಾಮಸ್ಥರು, ಸಾವಿರಾರು ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಳ್ಳಾರಿ ಬ್ಯಾನರ್ ಗಲಾಟೆ; ಪರಿಸ್ಥಿತಿ ಶಾಂತವಾಗಿಸಿದ ಸರ್ಕಾರದ ನಿರ್ಧಾರ
ಕಡೂರು ತಾಲೂಕು ಕಂದಾಯ ಇಲಾಖೆ ಪ್ರಗತಿ: ಸಿ.ಎಸ್.ಪೂರ್ಣಿಮಾ