ಹಾವೇರಿ ವಿವಿ ಉಳಿವಿಗಾಗಿ ಅಭಿಯಾನ: ಪ್ರೊ. ಡಿ.ಎ. ಕೊಲ್ಲಾಪುರೆ

KannadaprabhaNewsNetwork |  
Published : Apr 06, 2025, 01:47 AM IST
ಹಾವೇರಿಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳು ಹಾವೇರಿ ವಿವಿ ಉಳಿಸಿ ಅಭಿಯಾನ ನಡೆಸಿದರು. | Kannada Prabha

ಸಾರಾಂಶ

ವಿವಿಯ ಅವಶ್ಯಕತೆ ಹಾವೇರಿ ಭಾಗದ ವಿದ್ಯಾರ್ಥಿಗಳಿಗೆ ಬಹಳಷ್ಟು ಇದ್ದು, ಇದರ ಉಳಿವಿಗಾಗಿ ಪ್ರತಿಯೊಬ್ಬರೂ ಹೋರಾಡಬೇಕಿದೆ.

ಹಾವೇರಿ: ಗ್ರಾಮೀಣ ವಿದ್ಯಾರ್ಥಿಗಳ ಆಶಾಕಿರಣವಾಗಿರುವ ಹಾವೇರಿ ವಿಶ್ವವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಸರ್ಕಾರ ಮುಚ್ಚುವ ಇಲ್ಲವೇ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನ ಪ್ರಾಚಾರ್ಯ ಪ್ರೊ. ಡಿ.ಎ. ಕೊಲ್ಲಾಪುರೆ ಸರ್ಕಾರಕ್ಕೆ ಮನವಿ ಮಾಡಿದರು. ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳು ನಡೆಸಿದ ಹಾವೇರಿ ವಿವಿ ಉಳಿಸಿ ಅಭಿಯಾನದಲ್ಲಿ ಮಾತನಾಡಿದರು. ನೂತನವಾಗಿ ಸ್ಥಾಪನೆಯಾದ ವಿಶ್ವವಿದ್ಯಾಲಯವು ಹಾವೇರಿ ಭಾಗದ ಮಕ್ಕಳ ಶಿಕ್ಷಣಕ್ಕೆ ಹೊಸ ಹೊಸ ಆಯಾಮಗಳಲ್ಲಿ ಶಿಕ್ಷಣದ ಕಂಪನ್ನು ಬೀಸುವ ಮೊದಲೇ ಸರ್ಕಾರ ವಿವಿಯನ್ನು ಮುಚ್ಚುವ ಪ್ರಕ್ರಿಯೆ ನಡೆಸಿರುವುದು ಅತೀವ ಕಳವಳವನ್ನುಂಟು ಮಾಡಿದೆ. ಈಗಾಗಲೇ ವಿವಿ ಅಧೀನ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಶಿಕ್ಷಣ ವ್ಯವಸ್ಥೆ ಮತ್ತು ಪಾಠಕ್ರಮಣಿಕೆಗಳಲ್ಲಿ ವ್ಯತ್ಯಾಸಗಳುಂಟಾಗುತ್ತವೆ. ಶೀಘ್ರವೇ ಸರ್ಕಾರ ಈ ಕ್ರಮವನ್ನು ಹಿಂಪಡೆಯಬೇಕೆಂದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಗದೀಶ ಹೊಸಮನಿ ಮಾತನಾಡಿ, ಉನ್ನತ ಹಾಗೂ ಉದಾತ್ತ ದೃಷ್ಟಿಯಿಂದ ಆರಂಭಗೊಂಡ ಹಾವೇರಿ ವಿಶ್ವವಿದ್ಯಾಲಯ ವರ್ಷದಿಂದ ವರ್ಷಕ್ಕೆ ಉತ್ತಮ ಸಾಧನೆ ಮಾಡುತ್ತಿರುವುದು ಪ್ರಗತಿಯ ಸಂಕೇತವಾಗಿದೆ. ಹಲವಾರು ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಗೆ ಪುನಶ್ಚೇತನ ತುಂಬುವುದರ ಜತೆಗೆ ಆರ್ಥಿಕ ನೆರವು ನೀಡಿ ಉತ್ತಮ ಆಡಳಿತ ವ್ಯವಸ್ಥೆ ನಡೆಯುವಂತೆ ಮಾಡುವ ಅಗತ್ಯವಿದೆ. ಕೇವಲ ಆರ್ಥಿಕ ಇಲ್ಲವೇ ಇನ್ನಿತರ ನೆಪವನ್ನು ಹೇಳಿ ವಿವಿ ಮುಚ್ಚುವ ಕ್ರಮ ಸಮರ್ಪಕವಲ್ಲವೆಂದರು.ಅಭಿಯಾನದ ಸಾರಥ್ಯ ವಹಿಸಿದ್ದ ಭೌತಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ಎನ್. ತಿಪ್ಪನಗೌಡರ ಮಾತನಾಡಿ, ವಿವಿ ಮುಚ್ಚುವ ಕುರಿತು ಹಾವೇರಿ ಜಿಲ್ಲಾದ್ಯಂತ ಅಪಸ್ವರಗಳು ಕೇಳಿ ಬಂದದ್ದಲ್ಲದೇ ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ಇಂದಿನ ವಿದ್ಯಮಾನದಲ್ಲಿ ವಿವಿಯ ಅವಶ್ಯಕತೆ ಹಾವೇರಿ ಭಾಗದ ವಿದ್ಯಾರ್ಥಿಗಳಿಗೆ ಬಹಳಷ್ಟು ಇದ್ದು, ಇದರ ಉಳಿವಿಗಾಗಿ ಪ್ರತಿಯೊಬ್ಬರೂ ಹೋರಾಡಬೇಕಿದೆ. ಸಮಗ್ರತೆಯ ದೃಷ್ಟಿಯಿಂದ ವಿದ್ಯಾರ್ಥಿ ಸಮೂಹ ಒಂದಾಗಿ ವಿವಿ ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದರು. ಈ ಅಭಿಯಾನದಲ್ಲಿ ಸೋಮಣ್ಣ ಡೊಂಬರಮತ್ತೂರ, ಡಾ. ಎಂ.ಪಿ. ಕಣವಿ ಮಾತನಾಡಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮನುಷ್ಯ ಹಣಕ್ಕಿಂತ ಗುಣಕ್ಕೆ ಆದ್ಯತೆ ನೀಡಲಿ

ರಾಣಿಬೆನ್ನೂರು: ಮನುಷ್ಯ ಹಣಕ್ಕಿಂತ ಗುಣವನ್ನು ಪಾಲಿಸಬೇಕು. ಹಣದಿಂದ ಬದುಕುವುದಿಲ್ಲ. ಪ್ರೀತಿಯಿಂದ ಬದುಕಿದಾಗ ಸಾರ್ಥಕ ಜೀವನ ಹೊಂದಲು ಸಾಧ್ಯವಿದೆ ಎಂದು ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪ್ರಕಾಶಾನಂದ ಮಹಾರಾಜರು ನುಡಿದರು.ಇಲ್ಲಿಯ ದೊಡ್ಡಪೇಟೆಯಲ್ಲಿ ಶನಿವಾರ ಜೀರ್ಣೋದ್ಧಾರಗೊಂಡ ರಾಮಲಿಂಗೇಶ್ವರ ದೇವಸ್ಥಾನದ ಲೋಕಾರ್ಪಣೆ, ಕಳಸಾರೋಹಣದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜೀವನದಲ್ಲಿ ಹೊಸ ರಚನೆಯಾಗಬೇಕು. ದೇಹದಲ್ಲಿ ಹಳೆಯ ಜೀವ ಕೋಶಗಳು ಸತ್ತು ಹೊಸ ಜೀವ ಕೋಶಗಳು ಹುಟ್ಟುತ್ತವೆ. ಹಾಗೆಯೇ ಮನುಷ್ಯ ಹೊಸತನಕ್ಕೆ ಮುಂದಾಗಬೇಕು. ಮೌಲ್ಯಗಳನ್ನು ಪ್ರತಿಷ್ಠಾಪನೆ ಮಾಡಬೇಕಿದೆ. ಆ ಕೆಲಸ ಇಂತಹ ದೇವಸ್ಥಾನಗಳಿಂದ ಆಗುತ್ತದೆ. ಕಲಿಯುಗದಲ್ಲಿ ಸಂಘಕ್ಕೆ ಶಕ್ತಿಯಿದೆ ಎಂದರು.ನಗರಸಭೆ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಮಾತನಾಡಿ, ದೇವಸ್ಥಾನದಿಂದ ಮನಸ್ಸಿನ ಭಾವನೆಗಳು ಬದಲಾಗುತ್ತದೆ. ನಾನು ಎಂಬ ಮನೋಭಾವನೆಯನ್ನು ತೊರೆದು ದೇವರ ಮೊರೆ ಹೋಗಬೇಕು. ಸಮಾಜಕ್ಕೆ ನಮ್ಮನ್ನು ತೊಡಗಿಸಿಕೊಂಡಾಗ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ ಎಂದರು.ವರ್ತಕ ಜಗದೀಶ ಶೆಟ್ರಗುರುವಿನಮಠ, ತಾಲೂಕು ದೇವಾಂಗ ಸಮಾಜದ ಕಾರ್ಯಾಧ್ಯಕ್ಷ ಗಣೇಶ ಶಿರಗೂರ, ಮುಖಂಡರಾದ ಸಿದ್ದಪ್ಪ ಚಿಕ್ಕಬಿದರಿ, ಕಪತಪ್ಪ ಸಾಲಿಮನಿ, ಮಹಾದೇವಪ್ಪ ಚಕ್ರಸಾಲಿ, ಅನುರಾಧ ಗುಳೇದಗುಡ್ಡ, ಚೇತನಾ ಗುಡ್ಡದ, ಬಸವರಾಜ ಮೈಲಾರ, ಗಣೇಶ ಹಾವನೂರ, ಲಕ್ಷ್ಮೀಕಾಂತ ಹುಲಗೂರ, ಚಂದ್ರಣ್ಣ ಉದಗಟ್ಟಿ, ಜಯಾ ಕುಂಚೂರ, ಭೋಜರಾಜ ಗುಲಗಂಜಿ, ವಿಜಯಲಕ್ಷ್ಮಿ ಬೆಟಗೇರಿ, ನಾಗರತ್ನಾ ದಿಗಿದಿಗಿ, ಸರೋಜ ಕೊಪ್ಪದ, ಗಿರೀಶ ಗುಳೇದಗುಡ್ಡ, ಲಕ್ಷ್ಮಿ ಕದರಮಂಡಲಗಿ, ಗುಡದಯ್ಯ ನೀಲಗುಂದ, ಅಶೋಕ ದುರ್ಗದಶೀಮಿ, ಸುಮಾ ಹಳ್ಳಿ, ಗಣೇಶ ಸಾಲಗೇರಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?