ಯಲ್ಲಾಪುರ: ಇ-ಖಾತಾ ನೀಡಲು ಬಾಕಿ ಉಳಿದ ಆಸ್ತಿಗಳನ್ನು ಅಭಿಯಾನದ ಮೂಲಕ ಗುರುತಿಸಿ ಆಸ್ತಿಗಳ ಮಾಲಕರು ಇ-ಖಾತೆ ಪಡೆಯಲು ಬೇಕಾದ ದಾಖಲೆಗಳನ್ನು ಸಲ್ಲಿಸಲು ಜಾಗೃತಿ ಮೂಡಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಪಪಂ ವ್ಯಾಪ್ತಿಯ ನಾರಾಯಣಪುರ, ಸವಣಗೇರಿ, ಸಹಸ್ರಳ್ಳಿ, ಕಾಳಮ್ಮನಗರ ಪ್ರದೇಶದ ಅನಧಿಕೃತ ನಿವೇಶನಗಳನ್ನು ಗುರುತಿಸಿ, ಗಾಂವಠಾಣಾ ಜಾಗ ತಕ್ಷಣ ಗುರುತಿಸುವ ಕೆಲಸ ತಹಶೀಲ್ದಾರ, ಪಪಂ ಅಧಿಕಾರಿಗಳು ಮಾಡುವಂತೆ ಸೂಚನೆ ನೀಡಿದರು.
ಎ.ಖಾತಾ ಹೆಸರಿನಲ್ಲಿ ಜನರಿಗೆ ನ್ಯಾಯ ಕೊಡಿಸಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಬಿ-ಖಾತಾ ಹೆಸರಿನಲ್ಲಿ ಲೇಔಟ್ ಅಕ್ರಮವನ್ನು ಸಕ್ರಮಗೊಳಿಸಲು ಸರ್ಕಾರ ಇದೊಂದು ಅವಕಾಶ ಮಾಡಿಕೊಟ್ಟಿದೆ. ಕಸದ ಗಾಡಿಗೂ ಟ್ಯಾಕ್ಸ್ ತುಂಬಲು ಹೇಳುವ ಜೊತೆಗೆ ಇ ಖಾತಾ, ಬಿ ಖಾತಾ ಅಭಿಯಾನದ ಬಗ್ಗೆ ಮಾಹಿತಿ ಪ್ರಸಾರ ಮಾಡಬೇಕು. ಕರಪತ್ರ ಹಂಚಿ ಜನರಿಗೆ ಮಾಹಿತಿ ನೀಡುವ ಕೆಲಸವನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾಡಿ, ಜನರಿಗೆ ಗೊಂದಲವಿಲ್ಲದೇ ನ್ಯಾಯ ಸಿಗುವಂತೆ ಮಾಡಬೇಕು ಎಂದರು.ಪಪಂ ಉಪಾಧ್ಯಕ್ಷ ಅಮಿತ್ ಅಂಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅಲಿ, ಪಪಂ ಸದಸ್ಯರು, ಮುಖ್ಯಾಧಿಕಾರಿ ಸುನಿಲ್ ಗಾವಡೆ, ಗ್ರೇಡ್ ೨ ತಹಶೀಲ್ದಾರ ಸಿ.ಜಿ. ನಾಯ್ಕ, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ನಿಗದಿತ ಅವಧಿಯಲ್ಲಿ ಕೆಲಸ ಆಗಬೇಕು. ಅರ್ಜಿ ಕೊಟ್ಟವರಿಗೆ ೩ ತಿಂಗಳೊಳಗೆ ಶಾಶ್ವತ ಪರಿಹಾರ ದೊರೆಯಬೇಕು. ನಂತರ ಬಿ ಖಾತಾದಲ್ಲಿ ಒಳಬರಲು ಅವಕಾಶವಿಲ್ಲ. ಸರ್ಕಾರಿ ಆಸ್ತಿ ಹೊರತುಪಡಿಸಿ, ಗಾಂವಠಾಣಾ ಸೇರಿದಂತೆ ಎಲ್ಲ ಅನಧಿಕೃತ ಆಸ್ತಿಗಳಿಗೆ ನಗರದಲ್ಲಿ ವಾಸವಾಗಿರುವರಿಗೆ ಅನುಕೂಲ ಆಗಲಿದೆ. ಪ್ರತಿ ೧೫ ದಿನಕ್ಕೆ ಈ ಕುರಿತು ಪ್ರಗತಿ ಪರಿಶೀಲನೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಪಾರದರ್ಶಕ ಆಡಳಿತ ಬರಬೇಕು ಎಂದರು.