ಬೆಂಗಳೂರಿನ ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಇನ್ನೂ 26 ಭೂಮಾಲೀಕರು ಭೂಮಿ ನೀಡಬೇಕಿದ್ದು, ಅದಕ್ಕಾಗಿ ಸ್ಥಳೀಯ ಶಾಸಕರನ್ನೊಳಗೊಂಡ ಸಭೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

 ಸುವರ್ಣ ವಿಧಾನಸಭೆ : ಬೆಂಗಳೂರಿನ ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಇನ್ನೂ 26 ಭೂಮಾಲೀಕರು ಭೂಮಿ ನೀಡಬೇಕಿದ್ದು, ಅದಕ್ಕಾಗಿ ಸ್ಥಳೀಯ ಶಾಸಕರನ್ನೊಳಗೊಂಡ ಸಭೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಮಂಗಳ‍ಾರ ಬಿಜೆಪಿಯ ಮುನಿರಾಜು ಪ್ರಶ್ನೆಗೆ ಉತ್ತರಿಸಿದ ಅವರು, ಜಾಲಹಳ್ಳಿ ಕೆಳಸೇತುವೆ ನಿರ್ಮಾಣಕ್ಕೆ ಈಗಾಗಲೇ ಪಿಜಿಬಿ ಗುತ್ತಿಗೆದಾರ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. 2021ರಲ್ಲಿ ಯೋಜನೆಗೆ 57 ಕೋಟಿ ರು. ಮೊತ್ತದಲ್ಲಿ ಗುತ್ತಿಗೆ ನೀಡಲಾಗಿದೆ. ಯೋಜನೆಗಾಗಿ 48 ಭೂಮಾಲೀಕರ ಭೂಮಿ ವಶಕ್ಕೆ ಪಡೆಯಬೇಕಿದ್ದು, ಈಗಾಗಲೇ 22 ಸ್ವತ್ತಿನ ಮಾಲೀಕರಿಗೆ 85.70 ಕೋಟಿ ರು. ಪರಿಹಾರ ನೀಡಿ ವಶಕ್ಕೆ ಪಡೆಯಲಾಗಿದೆ. ಇನ್ನೂ 26 ಸ್ವತ್ತುಗಳನ್ನು ವಶಕ್ಕೆ ಪಡೆಯಬೇಕಿದ್ದು, ಅವರಿಗೆ ನಗದು ಪರಿಹಾರಕ್ಕಿಂತ ಟಿಡಿಆರ್‌ ನೀಡಲು ಸಿದ್ಧರಿದ್ದೇವೆ ಎಂದರು.

26 ಸ್ವತ್ತುಗಳ ಮಾಲೀಕರೊಂದಿಗೆ ಈಗಾಗಲೇ ಮಾತುಕತೆ

ಅದಕ್ಕೆ ಮುನಿರಾಜು, ಟಿಡಿಆರ್ ಯಾರೂ ಪಡೆಯುವುದಿಲ್ಲ. ಅಲ್ಲದೆ 26 ಸ್ವತ್ತುಗಳ ಮಾಲೀಕರೊಂದಿಗೆ ಈಗಾಗಲೇ ಮಾತುಕತೆ ಮಾಡಲಾಗಿದ್ದು, ಅವರು ಭೂಮಿ ನೀಡಲು ಒಪ್ಪಿದ್ದಾರೆ. ಈ ಬಗ್ಗೆ ಸೂಕ್ತ ಮತ್ತು ಶೀಘ್ರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಶಿವಕುಮಾರ್‌ ಪ್ರತಿಕ್ರಿಯಿಸಿ, ಯೋಜನೆ ಅನುಷ್ಠಾನದ ಬೇಡಿಕೆ ಸರಿಯಿದೆ. ಯೋಜನೆಗೆ ಸಂಬಂಧಿಸಿದಂತೆ ವಿಚಾರಗಳ ಕುರಿತು ಚರ್ಚಿಸಲು ಶಾಸಕ ಮುನಿರಾಜು ಸೇರಿದಂತೆ ಸಂಬಂಧಪಟ್ಟವರ ಜತೆಗೆ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ:ಡಿಕೆ

ಜಾಲಹಳ್ಳಿ ಕೆಳಸೇತುವೆ ನಿರ್ಮಾಣದ ಪ್ರಶ್ನೆ ಸಂದರ್ಭದಲ್ಲಿ ಬಿಜೆಪಿ ಮುನಿರತ್ನ ಅವರು, ಬೆಂಗಳೂರಿನ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಡಿಸಿಎಂ ಎಲ್ಲ 28 ಶಾಸಕರ ಸಭೆ ಕರೆಯಬೇಕು ಎಂದು ಹೇಳಿದರು.

ಅದಕ್ಕೆ ಡಿ.ಕೆ. ಶಿವಕುಮಾರ್‌, ಮುನಿರಾಜು ಅವರು ಪ್ರಶ್ನೆ ಕೇಳಿದ್ದು, ಅದಕ್ಕೆ ಉತ್ತರಿಸುತ್ತೇನೆ. ಮಿಸ್ಟರ್‌ ಮುನಿ ಅವರು ಕೇಳುವ ಪ್ರಶ್ನೆಗೆ ಉತ್ತರಿಸುವುದಿಲ್ಲ. ಹಾಗೇನಾದರೂ ಉತ್ತರಿಸಬೇಕೆಂದರೆ ಮಿಸ್ಟರ್‌ ಮುನಿ ಪ್ರತ್ಯೇಕವಾಗಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಲಿ ಎಂದರು.