ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಬಳಿಯ ಗೆಜ್ಜಗದಹಳ್ಳಿಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು (ಡಿಆರ್‌ಐ) ಗೋಡೌನ್‌ವೊಂದರ ಮೇಲೆ ದಾಳಿ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ 190 ಟನ್ ಯೂರಿಯಾ ಗೊಬ್ಬರವನ್ನು ಜಪ್ತಿ ಮಾಡಿಕೊಂಡಿದ್ದಾರೆ

 ನೆಲಮಂಗಲ/ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಬಳಿಯ ಗೆಜ್ಜಗದಹಳ್ಳಿಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು (ಡಿಆರ್‌ಐ) ಗೋಡೌನ್‌ವೊಂದರ ಮೇಲೆ ದಾಳಿ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ 190 ಟನ್ ಯೂರಿಯಾ ಗೊಬ್ಬರವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 28 ಕೋಟಿ ರು. ಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.

ಕೇಂದ್ರದಿಂದ ಸಬ್ಸಿಡಿಯಲ್ಲಿ ಸಿಗುವ 45 ಕೆ.ಜಿ. ತೂಕದ ಯೂರಿಯಾ

ಕೇಂದ್ರದಿಂದ ಸಬ್ಸಿಡಿಯಲ್ಲಿ ಸಿಗುವ 45 ಕೆ.ಜಿ. ತೂಕದ ಯೂರಿಯಾ ಗೊಬ್ಬರವೊಂದರ ಚೀಲದ ಬೆಲೆ ಸಾಧಾರಣವಾಗಿ 246 ರು. ಇದೆ. ರೈತರಿಗಾಗಿ ಸಬ್ಸಿಡಿ ದರದಲ್ಲಿ ಕೊಡುವ ಈ ಯೂರಿಯಾವನ್ನು ಸಂಗ್ರಹಿಸಿ, ಅದನ್ನು 2,000 ರಿಂದ 2,500 ಸಾವಿರ ರುಪಾಯಿಗಳಿಗೆ ಮಧ್ಯವರ್ತಿಗಳ ಮೂಲಕ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಯೂರಿಯಾವನ್ನು ಪ್ಯಾಕ್ ಮಾಡಿ ತಮಿಳುನಾಡಿಗೆ

6 ತಿಂಗಳ ಹಿಂದೆ ತಜೀರ್ ಖಾನ್ ಯೂಸುಫ್ ಎಂಬುವರು ತಿಂಗಳಿಗೆ 40000 ರು.ಗೆ ಶೆಡ್​​ ಅನ್ನು ಬಾಡಿಗೆಗೆ ಪಡೆದಿದ್ದರು. ಇಲ್ಲಿಂದ ಯೂರಿಯಾವನ್ನು ಪ್ಯಾಕ್ ಮಾಡಿ ತಮಿಳುನಾಡಿಗೆ ಕಳುಹಿಸಲಾಗುತ್ತಿತ್ತು. ತಮಿಳುನಾಡಿನಲ್ಲಿ ದಾಳಿ ವೇಳೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಸಿಕ್ಕಿತ್ತು. ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊಡುವ 45 ಕೆ.ಜಿ. ತೂಕದ ಯೂರಿಯಾವನ್ನು ಶೆಡ್​ಗಳಿಗೆ ತಂದು ದಾಸ್ತಾನು ಮಾಡಲಾಗುತ್ತಿತ್ತು. ಬಳಿಕ, ಅದನ್ನು ಬೇರೆ ಚೀಲಗಳಿಗೆ ತುಂಬಿ 50 ಕೆ.ಜಿ. ಚೀಲವನ್ನಾಗಿ ಮಾಡಿ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಗೋಡೌನ್ ಮಾಲೀಕನನ್ನು ವಶಕ್ಕೆ ಪಡೆದು ಅಧಿಕಾರಿಗಳು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ದಂಧೆಯಲ್ಲಿ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆಯಿದೆ. ಯೂರಿಯಾ ಗೊಬ್ಬರ ಸಿಗದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರು ಪರದಾಡುತ್ತಿದ್ದು, ರೈತರಿಗೆ ಕೇಂದ್ರ ಸರ್ಕಾರದಿಂದ ಸಬ್ಸಿಡಿಯಲ್ಲಿ ಸಿಗಬೇಕಿದ್ದ ಯೂರಿಯಾ ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.